ETV Bharat / sports

ಐಪಿಎಲ್​ 2023: ಗಾಯಾಳು​ ರಾಹುಲ್​ ಸ್ಥಾನಕ್ಕೆ ಕರುಣ್​ ನಾಯರ್​​

author img

By

Published : May 6, 2023, 11:24 AM IST

ಕರುಣ್​ ನಾಯರ್​​
ಕರುಣ್​ ನಾಯರ್​​

ಗಾಯದಿಂದಾಗಿ ಕೆಎಲ್​ ರಾಹುಲ್ ಐಪಿಎಲ್​ನಿಂದ​ ಹೊರ ಬಿದ್ದ ಹಿನ್ನೆಲೆ ಅವರ ಬದಲಿಗೆ ಕರುಣ್​ ನಾಯರ್ ಲಕ್ನೋ ತಂಡವನ್ನು ಸೇರ್ಪಡೆ ಆಗಲಿದ್ದಾರೆ.

ಹೈದರಾಬಾದ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್​ ರಾಹುಲ್ ಗಾಯದ ಕಾರಣ ಐಪಿಎಲ್​ನಿಂದ ಹೊರ ಬಿದ್ದಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ರಾಹುಲ್​ ಗಾಯಗೊಂಡಿದ್ದ ರಾಹುಲ್​ ಬಳಿಕ ಚೆನ್ನೈ ವಿರುದ್ಧ ಪಂದ್ಯದಲ್ಲಿ ಮೈದಾನಕ್ಕಿಳಿದಿರಲಿಲ್ಲ. ಇದೀಗ ಲಕ್ನೋ ರಾಹುಲ್​ ಬದಲಿ ಆಟಗಾರರನ್ನು ಘೋಷಿಸಿದ್ದು, ಕರುಣ್ ನಾಯರ್ ತಂಡಕ್ಕೆ ಸೇರ್ಪಡೆ ಆಗಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಲಕ್ನೋ ಮಾಹಿತಿ ಹಂಚಿಕೊಂಡಿದೆ. ನಾಯರ್ ಈ ಹಿಂದೆ ಐಪಿಎಲ್‌ನಲ್ಲಿ ಹಲವು ಫ್ರಾಂಚೈಸಿಗಳ ಪರ ಆಡಿದ ಅನುಭವ ಹೊಂದಿದ್ದಾರೆ.

ಕರುಣ್ ನಾಯರ್ ಇದುವರೆಗೂ ಒಟ್ಟು 76 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 68 ಇನ್ನಿಂಗ್ಸ್‌ಗಳಲ್ಲಿ 1,496 ರನ್ ಗಳಿಸಿರುವ ಅವರು 23.75 ಸರಾಸರಿಯೊಂದಿಗೆ 127.75 ಸ್ಟ್ರೈಕ್ ರೇಟ್‌ ಹೊಂದಿದ್ದಾರೆ. 10 ಅರ್ಧ ಶತಕಗಳನ್ನು ಸಹ ಗಳಿಸಿದ್ದಾರೆ. ನಾಯರ್ ಅವರ ಗರಿಷ್ಠ ಸ್ಕೋರ್ 83 ಆಗಿದೆ. ಕರುಣ್ ನಾಯರ್​ 2013 ಹಾಗೂ 2021ರಲ್ಲಿ ಆರ್‌ಸಿಬಿ ಪರ ಆಡಿದ್ದರು. 2014, 2015 ಮತ್ತು 2022ರಲ್ಲಿ ರಾಜಸ್ಥಾನ್ ರಾಯಲ್ಸ್, 2016 ಹಾಗೂ 2017ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು 2018 ಹಾಗೂ 2020ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಿದ್ದಾರೆ. ಸದ್ಯ ಲಕ್ನೋ ತಂಡ ನಾಯರ್​ರನ್ನು 50 ಲಕ್ಷಕ್ಕೆ ಖರೀದಿ ಮಾಡಿದೆ.

ರಾಹುಲ್ ಲೀಗ್‌ನಿಂದ ಹೊರಗುಳಿದಿರುವ ಬಗ್ಗೆ ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ತಿಳಿಸಿತ್ತು. ಇದೀಗ ಅಧಿಕೃತ ಹೇಳಿಕೆ ಮೂಲಕ ಫ್ರಾಂಚೈಸಿ ಖಚಿತಪಡಿಸಿದೆ. ಜೂನ್ 7ರಂದು ದಿ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಿಂದಲು ರಾಹುಲ್​ ಹೊರಗುಳಿಯಲಿದ್ದಾರೆ. ಗಾಯದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ರಾಹುಲ್​, 'ನಾನು ಶೀಘ್ರದಲ್ಲೇ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ಲಕ್ನೋ ತಂಡದ ನಾಯಕನಾಗಿ ನಿರ್ಣಾಯಕ ಅವಧಿಯಲ್ಲಿ ಆಡದಿರುವುದು ತೀವ್ರ ನೋವಾಗಿದೆ. ಆದರೆ, ಇತರ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಉಳಿದಿರುವ ಪ್ರತಿ ಪಂದ್ಯವನ್ನು ನಾನು ಸೈಡ್​ಲೈನ್​ಲ್ಲಿದ್ದು ನೋಡುವ ಮೂಲಕ ಪ್ರೋತ್ಸಾಹಿಸುತ್ತೇನೆ. ಮುಂದಿನ ತಿಂಗಳು ಓವಲ್‌ನಲ್ಲಿ ನಡೆಯುವ ವಿಶ್ವ ಟೆಸ್ಟ್​ ಚಾಮಪಿಯನ್​ ಶಿಪ್​ ಪಂದ್ಯದಲ್ಲೂ ನಾನು ಇರುವುದಿಲ್ಲ. ಶೀಘ್ರದಲ್ಲೇ ಮೈದಾನಕ್ಕೆ ಮರಳುವ ಭರವಸೆ ಇದೆ' ಎಂದು ಬರೆದುಕೊಂಡಿದ್ದಾರೆ.

ಕೆಎಲ್ ರಾಹುಲ್ ಐಪಿಎಲ್ 2023ರಲ್ಲಿ ಇದುವರೆಗೆ 9 ಪಂದ್ಯಗಳನ್ನು ಆಡಿದ್ದಾರೆ. 9 ಇನ್ನಿಂಗ್ಸ್‌ಗಳಲ್ಲಿ 274 ರನ್ ಗಳಿಸಿರುವ ಅವರು 34.25ರ ಸರಾಸರಿಯೊಂದಿಗೆ 113.22 ಸ್ಟ್ರೈಕ್ ರೇಟ್‌ ಹೊಂದಿದ್ದಾರೆ. ಪ್ರಸ್ತುತ ಐಪಿಎಲ್​ನ 16ನೇ ಋತುವಿನಲ್ಲಿ ಲಕ್ನೋ ಸುಪರ್​ ಜೈಂಟ್ಸ್​ ತಂಡ 10 ಪಂದ್ಯಗಳನ್ನು ಆಡಿ, 5ರಲ್ಲಿ ಗೆಲುವು ಕಂಡು 4ರಲ್ಲಿ ಸೋತಿದೆ. ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ದೋಹಾ ಡೈಮಂಡ್ ಲೀಗ್​ನಲ್ಲಿ ಚಿನ್ನ ಗೆದ್ದ ನೀರಜ್​ ಚೋಪ್ರಾ : ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.