ETV Bharat / sports

9ನೇ ಬಾರಿ ಐಪಿಎಲ್ ಫೈನಲ್​​​ ತಲುಪಿದ ಚೆನ್ನೈ ತಂಡ; ಮತ್ತೆ ಕಮಾಲ್ ಮಾಡ್ತಾರಾ ಧೋನಿ?

author img

By

Published : Oct 11, 2021, 9:18 AM IST

CSK's 9th Wonder: MS Dhoni takes Yellow Army to another IPL final
ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ

ಧೋನಿ ನಾಯಕತ್ವದಲ್ಲಿ 4ನೇ ಬಾರಿ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಚೆನ್ನೈ ತಂಡ ಉತ್ಸುಕವಾಗಿದೆ. ಅತೀ ಹೆಚ್ಚು ಬಾರಿ ಪ್ರತಿಷ್ಠಿತ ಟೂರ್ನಿಯ ನಿರ್ಣಾಯಕ ಘಟ್ಟ​ ತಲುಪಿರುವ ತಂಡ ಮೂರು ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ದುಬೈ: ಭಾನುವಾರ ನಡೆದ ಐಪಿಎಲ್​​ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ) ಅಮೋಘ ಜಯ ದಾಖಲಿಸಿ ಫೈನಲ್​ಗೆ ಲಗ್ಗೆ ಇಟ್ಟಿದೆ. ಈ ಮೂಲಕ ತಂಡ ಕ್ಯಾಪ್ಟನ್ ಕೂಲ್ ಧೋನಿ ನಾಯಕತ್ವದಲ್ಲಿ 9ನೇ ಬಾರಿ ಫೈನಲ್​​​ ತಲುಪಿದಂತಾಯ್ತು. ಕೊನೆಯ ಓವರ್​ನಲ್ಲಿ ಅಬ್ಬರಿಸಿದ ಧೋನಿ, ಡೆಲ್ಲಿ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಈ ಮೊದಲು ಸಿಎಸ್‌ಕೆ, 2010, 2011 ಹಾಗೂ 2018ರ ಐಪಿಎಲ್​ ಪ್ರಶಸ್ತಿಗೆ ಮುತ್ತಿಟ್ಟು ಸಂಭ್ರಮಿಸಿದೆ. ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎನಿಸಿದೆ.

ಬಲಿಷ್ಟ ಸಿಎಸ್​ಕೆ ತಂಡದಲ್ಲಿ ಬ್ಯಾಟ್ಸ್​​​ಮನ್​ಗಳು ಉತ್ತಮ ಫಾರ್ಮ್​ ಕಂಡುಕೊಂಡಿದ್ದು​ ತಂಡಕ್ಕೆ ಆಸರೆಯಾಗಿದೆ. ಆರಂಭಿಕರಾದ ರುತುರಾಜ್ ಗಾಯಕ್ವಾಡ್​​​​ ಹಾಗೂ ಡುಪ್ಲೆಸಿಸ್ ಉತ್ತಮ ಫಾರ್ಮ್​ನಲ್ಲಿದ್ದು, ಅವರ ಹಿಂದೆ ರಾಯುಡು, ಉತ್ತಪ್ಪ, ಮೊಯಿನ್ ಅಲಿ ಸಹ ತಂಡಕ್ಕೆ ರನ್​ ಹೊಳೆ ಹರಿಸಿದ್ದಾರೆ.

ಬೌಲಿಂಗ್ ವಿಭಾಗದಲ್ಲಿಯೂ ತಂಡ ಸಮರ್ಥ ಪ್ರದರ್ಶನ ತೋರುತ್ತಿದೆ. ದೀಪಕ್ ಚಾಹರ್, ಶಾರ್ದುಲ್ ಠಾಕೂರ್​ ಹಾಗೂ ಹ್ಯಾಜಲ್​ವುಡ್​ ತಂಡದ ಭರವಸೆಯ ಬೌಲರ್​​ಗಳಾದರೆ, ಜಡೇಜಾ ಮತ್ತು ಬ್ರಾವೋ ಆಲ್​ರೌಂಡರ್ ವಿಭಾಗಕ್ಕೆ ಬಲ ತುಂಬಿದ್ದಾರೆ.

ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದು, ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಜಯ ದಾಖಲಿಸುವ ತಂಡ ನೇರವಾಗಿ ಚೆನ್ನೈ ತಂಡವನ್ನು ಫೈನಲ್​​ನಲ್ಲಿ ಎದುರಿಸಬೇಕಿದೆ. ಐಪಿಎಲ್ ಟೂರ್ನಿಯಲ್ಲಿ ಅತೀ ಹೆಚ್ಚು ಬಾರಿ ಫೈನಲ್ ಪ್ರವೇಶಿಸಿದ ತಂಡ ಚೆನ್ನೈ ಆಗಿದ್ದು, 9ನೇ ಬಾರಿಗೆ ಫೈನಲ್​​ ಎಂಟ್ರಿ ಪಡೆದಿದೆ. ಇದರಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದಿದೆ. 5 ಬಾರಿ ಪ್ರಶಸ್ತಿ ಪಡೆದಿರುವ ಮುಂಬೈ ತಂಡ ಈ ಬಾರಿ ಲೀಗ್ ಹಂತದಲ್ಲಿಯೇ ಮುಗ್ಗರಿಸಿದೆ.

6 ಬಾರಿ ಫೈನಲ್ ಪ್ರವೇಶಿಸಿದ್ದ ಮುಂಬೈ ತಂಡ 5 ಬಾರಿ ಟೈಟಲ್​ ಬಾಚಿಕೊಂಡಿದೆ. ಡೆಲ್ಲಿ ತಂಡ 2020ರಲ್ಲಿ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿ 2ನೇ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿತ್ತು. ಕೋಲ್ಕತ್ತಾ 2 ಬಾರಿ ಫೈನಲ್ ಪ್ರವೇಶಿಸಿದ್ದರೆ, ಬೆಂಗಳೂರು ತಂಡ ಒಟ್ಟು 3 ಬಾರಿ ಫೈನಲ್ ಹಂತ ತಲುಪಿದೆ.

ಇದನ್ನೂ ಓದಿ: IPL 2021: 'ಇದು ಖಂಡಿತಾ ಬೇಸರದ ಸಂಗತಿ..': ಸೋಲಿನ ಬಳಿಕ ಪಂತ್ ನೋವಿನ ನುಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.