ETV Bharat / sports

ಅರ್ಷದೀಪ್, ಅವೇಶ್‌ ದಾಳಿಗೆ ತತ್ತರಿಸಿದ ದ.ಆಫ್ರಿಕಾ: ಭಾರತದ ಗೆಲುವಿಗೆ 117 ರನ್‌ ಟಾರ್ಗೆಟ್‌!

author img

By ETV Bharat Karnataka Team

Published : Dec 17, 2023, 4:22 PM IST

Updated : Dec 17, 2023, 4:29 PM IST

ಭಾರತ ಮತ್ತು ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ
ಭಾರತ ಮತ್ತು ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ

India vs South Africa First ODI: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ​ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದರು.

ಜೋಹಾನ್ಸ್‌ಬರ್ಗ್(ದಕ್ಷಿಣ ಆಫ್ರಿಕಾ): ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ ಇಂದಿನಿಂದ ಆರಂಭವಾಗಿದೆ. ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಭಾರತದ ಬೌಲರ್‌ಗಳ ಬಿಗು ದಾಳಿಗೆ ತರಗಲೆಗಳಂತೆ ಉದುರಿದ ದಕ್ಷಿಣ ಆಫ್ರಿಕಾ ಕೇವಲ 116 ರನ್​ಗಳಿಗೆ ಆಲೌಟ್‌ ಆಯಿತು. ಹೀಗಾಗಿ ಭಾರತದ ಗೆಲುವಿಗೆ 117 ರನ್‌ ಬೇಕಿದೆ.

ಅರ್ಷದೀಪ್ ಸಿಂಗ್ ಏಕದಿನ ಕ್ರಿಕೆಟ್​ ಮಾದರಿಯಲ್ಲಿ ಚೊಚ್ಚಲ 5 ವಿಕೆಟ್ ಸಾಧನೆ ಮಾಡಿದರು. ​ಅವೇಶ್ ಖಾನ್ 4 ವಿಕೆಟ್​ ಉರುಳಿಸಿದರು. ಭಾರತೀಯರ ಕರಾರುವಾಕ್ ಬೌಲಿಂಗ್‌ ದಾಳಿಗೆ ಪರದಾಡಿದ ದಕ್ಷಿಣ ಆಫ್ರಿಕಾ ಕಡಿಮೆ ರನ್‌ ಗಳಿಕೆ ಮಾಡಿತು.

ದ.ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಕಣಕ್ಕಿಳಿದ ರೀಜಾ ಹೆಂಡ್ರಿಕ್ಸ್ ಮತ್ತು ಟೋನಿ ಡಿ ಜೋರ್ಜಿ ಜೋಡಿ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ಅರ್ಷದೀಪ್ ಅವರ ಮೊದಲ ಓವರ್​ನ ನಾಲ್ಕನೇ ಎಸೆತದಲ್ಲೇ ರೀಜಾ ಹೆಂಡ್ರಿಕ್ಸ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು.​ ಬಳಿಕ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (0) ಕೂಡ ಅರ್ಷದೀಪ್‌ಗೆ ವಿಕೆಟ್​ ಒಪ್ಪಿಸಿ ಬಂದ ದಾರಿಗೆ ಸುಂಕವಿಲ್ಲದಂತೆ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದರು.

ಒಂದೆಡೆ, 3 ವಿಕೆಟ್​ ಕಳೆದುಕೊಂಡರೂ ಕೂಡಾ ಎಡಗೈ ಬ್ಯಾಟರ್ ಜೋರ್ಜಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ ಕೆಲವು ಪವರ್ ಹಿಟ್ಟಿಂಗ್ ಮೂಲಕ ಮಾರ್ಕ್ರಾಮ್‌ರೊಂದಿಗೆ 39 ರನ್ ಜೊತೆಯಾಟವಾಡಿದರು. ಆದರೆ ಮತ್ತೆ ದಾಳಿಗಿಳಿದ ಅರ್ಷದೀಪ್ ಸಿಂಗ್ ಅಪಾಯಕಾರಿಯಾಗಿ ಕಾಣುತ್ತಿದ್ದ ಜೋರ್ಜಿ(28) ಅವರನ್ನು ಔಟ್​ ಮಾಡಿದರು. ಹೆನ್ರಿಚ್ ಕ್ಲಾಸೆನ್ (6) ಹಾಗು ನಿಧಾನಗತಿಯಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದ ಆಂಡಿಲೆ ಫೆಹ್ಲುಕ್ವಾಯೊ (33) ಕೂಡ ವಿಕೆಟ್​ ಚೆಲ್ಲಿದರು.

ಮಾರ್ಕ್ರಾಮ್​ (12), ಡೇವಿಡ್ ಮಿಲ್ಲರ್ (2), ವಿಯಾನ್ ಮುಲ್ಡರ್ (0) ಮತ್ತು ಕೇಶವ್ ಮಹಾರಾಜ್ (4) ವಿಕೆಟ್​ ಪಡೆಯುವ ಮೂಲಕ ಆವೇಶ್ ಖಾನ್ ದ.ಆಫ್ರಿಕಾ ಬ್ಯಾಟಿಂಗ್​ ಬಲ ಮುರಿದರು. ಇನ್ನು ನಾಂದ್ರೆ ಬರ್ಗರ್ (7) ಕುಲದೀಪ್​ ಯಾದವ್​ ಸ್ಪಿನ್​ ಮೋಡಿಗೆ ಬಲಿಯಾದರು.

ತಂಡಗಳು ಇಂತಿವೆ- ಭಾರತ: ಕೆ.ಎಲ್.ರಾಹುಲ್ (ವಿಕೆಟ್‌ಕೀಪರ್/ನಾಯಕ), ರುತುರಾಜ್ ಗಾಯಕ್‌ವಾಡ್, ಸಾಯಿ ಸುದರ್ಶನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್,ಅರ್ಷದೀಪ್ ಸಿಂಗ್, ಅವೇಶ್ ಖಾನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್​

ದಕ್ಷಿಣ ಆಫ್ರಿಕಾ: ರೀಜಾ ಹೆಂಡ್ರಿಕ್ಸ್, ಟೋನಿ ಡಿ ಜೋರ್ಜಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್, ತಬ್ರೈಜ್ ಶಮ್ಸಿ.

ಇದನ್ನೂ ಓದಿ: ಹರಿಣಗಳ ವಿರುದ್ಧ ಏಕದಿನ ಸರಣಿ: ವಿಶ್ವಕಪ್ ನಂತರದ ಹೊಸ ಆರಂಭದ ಮೇಲೆ ಯುವ ಭಾರತದ ಕಣ್ಣು

Last Updated :Dec 17, 2023, 4:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.