ETV Bharat / sports

1ನೇ ಟಿ20: ಬಲಿಷ್ಠ ಹರಿಣ ಪಡೆ ವಿರುದ್ಧ ಗೆಲುವು ದಾಖಲಿಸುತ್ತಾ ಯುವ ಭಾರತ?

author img

By ETV Bharat Karnataka Team

Published : Dec 9, 2023, 11:00 PM IST

IND vs SA 1st T20I
IND vs SA 1st T20I

IND vs SA 1st T20I: ಆಸ್ಟ್ರೇಲಿಯಾ ವಿರುದ್ಧ ಸರಣಿ ಜಯ ದಾಖಲಿಸಿದ ಯುವ ಪಡೆ ದಕ್ಷಿಣ ಆಫ್ರಿಕಾದಲ್ಲಿ ನಾಳೆ ಮೊದಲ ಟಿ20 ಪಂದ್ಯವನ್ನು ಆಡಲಿದೆ.

ಡರ್ಬನ್ (ದಕ್ಷಿಣ ಆಫ್ರಿಕಾ): ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು ಗೆದ್ದಿರುವ ಉತ್ಸಾಹದಲ್ಲಿರುವ ಟೀಮ್​ ಇಂಡಿಯಾದ ಯುವ ಆಟಗಾರರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಭಾನುವಾರ (ಡಿ.10) ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯ ಡರ್ಬನ್​ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಯಶಸ್ವಿ ನಾಯಕತ್ವವನ್ನು ಸೂರ್ಯಕುಮಾರ್​ ಯಾದವ್​ ಹರಿಣಗಳ ನಾಡಿನಲ್ಲಿಯೂ ಮುಂದುವರೆಸುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

2024ರ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಈ ಸರಣಿ ಭಾರತ ಮತ್ತು ದಕ್ಷಿಣ ಆಫ್ರಿಕಾಕ್ಕೆ ಪ್ರಮುಖವಾಗಿದ್ದು, ತಂಡದಲ್ಲಿ ಹೊಸಬರಿಗೆ ಅವಕಾಶದ ಜೊತೆಗೆ ಕೆಲ ಪ್ರಯೋಗಗಳನ್ನು ಉಭಯ ತಂಡದಲ್ಲಿ ಕಾಣಬಹುದಾಗಿದೆ. ವಿಶ್ವಕಪ್​ನಲ್ಲಿ ಗಾಯಕ್ಕೆ ತುತ್ತಾದ ಟಿ20 ನಾಯಕ ಹಾರ್ದಿಕ್​ ಪಾಂಡ್ಯ ಸರಣಿ ಮಿಸ್​ ಮಾಡಿಕೊಂಡರೆ, ಜಸ್ಪ್ರೀತ್ ಬುಮ್ರಾ ವಿರಾಮ ತೆಗೆದುಕೊಂಡಿದ್ದಾರೆ. ಅಲ್ಲದೇ ಏಕದಿನ ವಿಶ್ವಕಪ್​ ಆಡಿದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸಹ ಈ ಪ್ರವಾಸದಲ್ಲಿ ವೈಟ್​ಬಾಲ್​ ಕ್ರಿಕೆಟ್​ನಿಂದ ದೂರ ಇದ್ದಾರೆ.

ಯುವ ಪಡೆ: ಭಾರತವು ಟಿ20 ಸರಣಿಗಾಗಿ 17 ಆಟಗಾರರನ್ನು ಆಯ್ಕೆ ಮಾಡಿದೆ. ಇದರಲ್ಲಿ ಆಡುವ 11ರ ಬಳಗದ ಆಯ್ಕೆ ಬಹಳಷ್ಟು ಗೊಂದಲಕ್ಕೆ ಕಾರಣವಾಗಿದೆ. ಮೂವರು ಆರಂಭಿಕರು ಉತ್ತಮ ಲಯದಲ್ಲಿದ್ದಾರೆ. ಯಾವ ಎರಡು ಆಟಗಾರರು ಮೈದಾನಕ್ಕಿಳಿಯುತ್ತಾರೆ ಎಂಬುದು ದೊಡ್ಡ ಪ್ರಶ್ನೆಯೇ ಆಗಿದೆ. ಯಶಸ್ವಿ ಜೈಸ್ವಾಲ್, ಶುಭಮನ್​ ಗಿಲ್ ಮತ್ತು ರುತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಯಶಸ್ಸು ಸಾಧಿಸಿದ್ದಾರೆ.

ಜೈಸ್ವಾಲ್, ಗಿಲ್ ಮತ್ತು ಗಾಯಕ್ವಾಡ್ ಮೊದಲ ಮೂರು ಸ್ಥಾನವಾದರೆ, ಇಶಾನ್ ಕಿಶನ್ 4ನೇ ಸ್ಥಾನ ಮತ್ತು ನಾಯಕ ಸೂರ್ಯಕುಮಾರ್​ ಯಾದವ್​ 5ನೇ ಸ್ಥಾನದಲ್ಲಿ ಬಂದರೆ, ತಿಲಕ್​ ವರ್ಮಾ, ಶ್ರೇಯಸ್​ ಅಯ್ಯರ್​, ರಿಂಕು ಸಿಂಗ್​ ಮತ್ತು ಜಿತೇಶ್​ ಶರ್ಮಾ ಸ್ಥಾನ ವಂಚಿತರಾಗುತ್ತಾರೆ. ಹೀಗಾಗಿ 11ರ ಬಳಗದ ಆಯ್ಕೆ ಕಠಿಣ ಸವಾಲಾಗಿದೆ.

ಬೌಲಿಂಗ್​ ಪಡೆಗೆ ಕಠಿಣ ಸವಾಲು: ತವರಿನ ಪಿಚ್​ಗಳ ಅನುಭವ ಇರುವ ದಕ್ಷಿಣ ಆಫ್ರಿಕಾ ಆಟಗಾರರು ಭಾರತದ ಬೌಲರ್​​ಗಳ ಮೇಲೆ ಅಬ್ಬರಿಸುವ ಸಾಧ್ಯತೆ ಇದೆ. ಬೌನ್ಸಿ ಪಿಚ್​​ಗೆ ಭಾರತದ ವೇಗಿಗಳು ಹೊಂದಿಕೊಳ್ಳಬೇಕಿದೆ. ಸ್ಪಿನ್​ ಸ್ನೇಹಿ ಪಿಚ್​ಗಳು ಇಲ್ಲದಿರುವ ಕಾರಣ ಅಲ್ಲಿ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್ ಮತ್ತು ಕುಲದೀಪ್ ಯಾದವ್​ ಅವರಲ್ಲಿ ಒಬ್ಬರು ಮಾತ್ರ ಆಡುವ ಸಾಧ್ಯತೆ ಇದೆ. ಜಡೇಜಾ ಉಪನಾಯಕ ಆಗಿರುವುದರಿಂದ ಆಡಬಹುದು. ಉಳಿದಂತೆ ನಾಲ್ವರು ವೇಗಿಗಳು ಕಣಕ್ಕಿಳಿಯುವ ನಿರೀಕ್ಷೆ ಇದೆ.

ಸಂಭಾವ್ಯ ತಂಡಗಳು ಇಂತಿವೆ.. ಭಾರತ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ, ರವೀಂದ್ರ ಜಡೇಜಾ, ದೀಪಕ್ ಚಾಹರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಅರ್ಶದೀಪ್​ ಸಿಂಗ್

ದಕ್ಷಿಣ ಆಫ್ರಿಕಾ: ರೀಜಾ ಹೆಂಡ್ರಿಕ್ಸ್, ಮ್ಯಾಥ್ಯೂ ಬ್ರೀಟ್ಜ್ಕೆ, ಟ್ರಿಸ್ಟಾನ್ ಸ್ಟಬ್ಸ್, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಜೆರಾಲ್ಡ್ ಕೋಟ್ಜಿ, ನಾಂದ್ರೆ ಬರ್ಗರ್, ತಬ್ರೈಜ್ ಶಮ್ಸಿ

ಇದನ್ನೂ ಓದಿ: 2 ಕೋಟಿಗೆ ಜಿಜಿ ಪಾಲಾದ ಅನ್‌ಕ್ಯಾಪ್ಡ್ ಕಾಶ್ವೀ ಗೌತಮ್: ಸಂಪೂರ್ಣ ಬಿಡ್​ ವಿವರ ಇಲ್ಲಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.