ETV Bharat / sports

ವಿಶ್ವಕಪ್​ ಕ್ರಿಕೆಟ್​: ಅಲುಗಾಡುತ್ತಿದೆ ಅಯ್ಯರ್​ ಸ್ಥಾನ.. ಹಾರ್ದಿಕ್​ ಮರಳಿದರೆ ಶ್ರೇಯಸ್​ಗೆ ಕೊಕ್​?

author img

By ETV Bharat Karnataka Team

Published : Oct 30, 2023, 7:11 PM IST

Shreyas Iyer  - Suryakumar Yadav
Shreyas Iyer - Suryakumar Yadav

ಹಾರ್ದಿಕ್​ ಪಾಂಡ್ಯ ಮರಳಿದರೆ ಯಾರು ಆಡುವ ಬಳಗದಿಂದ ಹೊರಗುಳಿಯುತ್ತಾರೆ ಎಂಬ ಪ್ರಶ್ನೆ ಮೂಡುತ್ತಿದೆ. 6ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್​ ಯಾದವ್​ ಅವರ ಪ್ರದರ್ಶನ ಈ ವಿಚಾರಕ್ಕೆ ಕಾರಣವಾಗಿದೆ.

ಮುಂಬೈ (ಮಹಾರಾಷ್ಟ್ರ): ವಿಶ್ವಕಪ್​ನ ತಮ್ಮ ಎರಡನೇ ಇನ್ನಿಂಗ್ಸ್​ನಲ್ಲಿ 1 ರನ್​ನಿಂದ ಸೂರ್ಯಕುಮಾರ್​ ಯಾದವ್​ ಅರ್ಧಶತಕ ಮಿಸ್​ ಮಾಡಿಕೊಂಡರೂ ಅವರ ಆಟವನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುವುದಂತೂ ಖಂಡಿತ. ಏಕೆಂದರೆ ಇಂಗ್ಲೆಂಡ್​ ವಿರುದ್ಧ ತಂಡ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಸ್ಕೈ ಪ್ರಮುಖ ಇನ್ನಿಂಗ್ಸ್​ ಕಟ್ಟಿದರು. ಸೂರ್ಯ ಅವರ ಬ್ಯಾಟಿಂಗ್ ನೆರವಿನಿಂದ ಟೀಮ್​ ಇಂಡಿಯಾ 229 ರನ್​ನ ಗುರಿಯನ್ನು ಆಂಗ್ಲರಿಗೆ ನೀಡಿತ್ತು.

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕಾಲಿನ ಪಾದದ ಗಾಯಕ್ಕೆ ಹಾರ್ದಿಕ್​ ತುತ್ತಾದರು. ಇದರಿಂದ ನ್ಯೂಜಿಲೆಂಡ್​ ವಿರುದ್ಧದ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳಾದವು. ಬ್ಯಾಟಿಂಗ್​ನಲ್ಲಿ 6ನೇ ವಿಕೆಟ್​ಗೆ ಹಾರ್ದಿಕ್​ ಜಾಗದಲ್ಲಿ ಸೂರ್ಯ ಅವರನ್ನು ಆಡಿಸಲಾಯಿತು. ಕಿವೀಸ್​ ವಿರುದ್ಧ ಸೂರ್ಯ ಶೂನ್ಯಕ್ಕೆ ರನ್​ ಔಟ್​ಗೆ ಬಲಿಯಾದರು. ಆದರೆ, ಇಂಗ್ಲೆಂಡ್​ ವಿರುದ್ಧ ಅಗತ್ಯ ಸಮಯದಲ್ಲಿ ಇನ್ನಿಂಗ್ಸ್​ನ್ನು ಕಟ್ಟಿದರು. ಇದರಿಂದ ನಾಲ್ಕನೇ ಕ್ರಮಾಂಕದ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಅವರ ಸ್ಥಾನ ಅಲುಗಾಡುತ್ತಿದೆ.

ವಿಶ್ವಕಪ್​ನಲ್ಲಿ ಶ್ರೇಯಸ್​ ವಿಫಲ: ಗಾಯದಿಂದ ಚೇತರಿಸಿಕೊಂಡಿದ್ದ ಅಯ್ಯರ್​ ಏಷ್ಯಾಕಪ್​ಗೆ ಆಯ್ಕೆ ಆಗಿದ್ದರು. ಅಲ್ಲಿ ಒಂದು ಪಂದ್ಯ ಆಡಿದ ನಂತರ ಮತ್ತೆ ನೋವಿನಿಂದ ಬಳಲಿದ ಕಾರಣಕ್ಕೆ ಏಷ್ಯಾಕಪ್​ನಲ್ಲಿ ಕಾಣಿಸಿಕೊಳ್ಳಲಿಲ್ಲ. ನಂತರ ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ಸರಣಿಯಲ್ಲಿ ಅಯ್ಯರ್​ ಕಮ್​ಬ್ಯಾಕ್​ ಮಾಡಿದ್ದಲ್ಲದೇ ಒಂದು ಶತಕವನ್ನು ದಾಖಲಿಸಿ ಭರವಸೆ ಮೂಡಿಸಿದರು. ಇದರಿಂದಾಗಿ ವಿಶ್ವಕಪ್​ನಲ್ಲಿ ತಂಡದ ನಾಲ್ಕನೇ ಸ್ಥಾನದಲ್ಲಿ ಅಯ್ಯರ್​ ಮುಂದುವರೆದರು.

ವಿಶ್ವಕಪ್​​ನಲ್ಲಿ ಅಯ್ಯರ್​ ಬ್ಯಾಟ್​​ ರನ್ ಬರ ಎದುರಿಸುತ್ತಿದೆ ಎಂದರೆ ತಪ್ಪಾಗದು. ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟ್​ ಆದರು. ನಂತರ ಅಫ್ಘನ್​ ವಿರುದ್ಧ 25*, ಪಾಕಿಸ್ತಾನ 53*, ಬಾಂಗ್ಲಾ 19, ನ್ಯೂಜಿಲೆಂಡ್​ 33 ಮತ್ತು ಇಂಗ್ಲೆಂಡ್​ ವಿರುದ್ಧ 4 ರನ್ ಗಳಿಸಿ​ ವಿಕೆಟ್​ ಒಪ್ಪಿಸಿದರು. 6 ಇನ್ನಿಂಗ್ಸ್​ನಲ್ಲಿ ಅವರಿಂದ 1 ಅರ್ಧಶತಕದ ಪ್ರದರ್ಶನ ಮಾತ್ರ ಬಂತು ಮತ್ತು ಅಗತ್ಯ ಇದ್ದಾಗ ಜತೆಯಾಟವನ್ನು ನಿರ್ಮಿಸುವಲ್ಲಿ ಅಯ್ಯರ್​ ಸತತ ವಿಫಲತೆ ಕಂಡಿದ್ದಾರೆ.

ಹಾರ್ದಿಕ್​ ಮರಳಿದರೆ ಅಯ್ಯರ್​ಗೆ ಕೊಕ್​​: ಬಾಂಗ್ಲಾ ವಿರುದ್ಧದ ಪಂದ್ಯದ ವೇಳೆ ಗಾಯಕ್ಕೆ ತುತ್ತಾದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಚೇತರಿಸಿಕೊಂಡು ಮರಳಿದರೆ, ಅಯ್ಯರ್​ಗೆ ಕೊಕ್​ ನೀಡುವ ಸಾಧ್ಯತೆ ಇದೆ. ಟಿ20ಯಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅನುಭವ ಹೊಂದಿರುವ ಹಾರ್ದಿಕ್​ ಅವರು ಶ್ರೇಯಸ್​ ಜಾಗದಲ್ಲಿ ಬ್ಯಾಟ್​ ಬೀಸುವ ಸಾಧ್ಯತೆ ಹೆಚ್ಚಿದೆ. ಇಲ್ಲವಾದಲ್ಲಿ ಇಶಾನ್​ ಕಿಶನ್​ ಸಹ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಅವರಿಗೂ ಅವಕಾಶ ಲಭಿಸಬಹುದು.

ಭರವಸೆ ಮೂಡಿಸಿದ ಸೂರ್ಯ: ಏಕದಿನ ಮಾದರಿಯಲ್ಲಿ ಮೂರು ಬಾರಿ ಡಕ್​ ಔಟ್​ ಆಗಿ ಟ್ರೋಲ್​ಗೆ ಒಳಗಾಗಿದ್ದ ಸೂರ್ಯ, ಆಸ್ಟ್ರೇಲಿಯಾ ಸರಣಿಯಲ್ಲಿ ಏಕದಿನ ಮಾದರಿಗೆ ಹೊಂದಿಕೊಂಡರು. ಟಿ20 ನಂ.1 ಬ್ಯಾಟರ್​​ ಏಕದಿನ ಮಾದರಿಯಲ್ಲಿ ಈಗ ಲಯಕ್ಕೆ ಬಂದಿದ್ದಾರೆ. ಕಿವೀಸ್​ ವಿರುದ್ಧ ವಿರಾಟ್​ ಕೊಹ್ಲಿ ಮಾಡಿದ ಎಡವಟ್ಟಿನಿಂದ ರನ್​ಔಟ್​ಗೆ ಬಲಿಯಾಗಿದ್ದರು. ಇಂಗ್ಲೆಂಡ್​ ವಿರುದ್ಧ ಒತ್ತಡದ ಸಮಯದಲ್ಲಿ ಜವಾಬ್ದಾರಿಯುತರಾಗಿ 47 ಬಾಲ್​ನಲ್ಲಿ 49 ರನ್​ನ ಇನ್ನಿಂಗ್ಸ್​ ಕಟ್ಟಿದ್ದು, ಕೆಳ ಕ್ರಮಾಂಕದಲ್ಲಿ ಅವರ ಬ್ಯಾಟಿಂಗ್ ​ಮೇಲಿನ ಭರವಸೆಯನ್ನು ಹೆಚ್ಚಿಸಿದೆ.

ಇದನ್ನು ಓದಿ: ವಿಶ್ವಕಪ್​ ಕ್ರಿಕೆಟ್​​: ಅಫ್ಘನ್​ ದಾಳಿ ಮುಂದೆ ಮಂಕಾದ ಸಿಂಹಳೀಯರು; 241 ರನ್‌ಗಳಿಗೆ ಸರ್ವಪತನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.