ETV Bharat / sports

ಬೆಂಗಳೂರಿನಲ್ಲಿಂದು ವಿಶ್ವಕಪ್‌ ಸೆಮಿ ಫೈನಲ್‌ಗೆ ಕಿವೀಸ್, ಚಾಂಪಿಯನ್ಸ್ ಟ್ರೋಫಿ ಅರ್ಹತೆಗೆ ಲಂಕಾ ಬಿಗ್​ ಫೈಟ್

author img

By ETV Bharat Karnataka Team

Published : Nov 9, 2023, 10:46 AM IST

Updated : Nov 9, 2023, 1:26 PM IST

ICC Cricket World Cup 2023- New Zealand vs Sri Lanka match: ಇಂದು ನ್ಯೂಜಿಲೆಂಡ್​ ಮತ್ತು ಶ್ರೀಲಂಕಾ ಮಧ್ಯೆ ಮಹತ್ವದ ವಿಶ್ವಕಪ್ ಕ್ರಿಕೆಟ್‌ ಪಂದ್ಯ​ ನಡೆಯಲಿದೆ. ಕಿವೀಸ್​ ಸೆಮಿ ಫೈನಲ್​ಗೇರಲು ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿದೆ. ಇನ್ನೊಂದೆಡೆ, ಮುಂಬರುವ ಚಾಂಪಿಯನ್ಸ್​ ಟ್ರೋಫಿಗೆ ಅರ್ಹತೆ ಪಡೆಯಲು ಶ್ರೀಲಂಕಾ ತಂಡಕ್ಕಿದು ಕೊನೆಯ ಅವಕಾಶ.

ICC Cricket World Cup 2023  New Zealand vs Sri Lanka 41st Match  New Zealand vs Sri Lanka 41st Match Preview  M Chinnaswamy Stadium Bengaluru  ಸೆಮಿ ಫೈನಲ್‌ಗಾಗಿ ಕಿವೀಸ್  ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆಗಾಗಿ ಶ್ರೀಲಂಕಾ  ಮತ್ತೆ ಕಾಡಲಿದೆಯಂತೆ ಮಳೆ  ನ್ಯೂಜಿಲೆಂಡ್​ ಮತ್ತು ಶ್ರೀಲಂಕಾ ಮಧ್ಯೆ ಬಿಗ್​ ಫೈಟ್  ಶ್ರೀಲಂಕಾ ತಂಡಕ್ಕೆ ಇದು ಕೊನೆಯ ಅವಕಾಶ  ಐಸಿಸಿ ಏಕದಿನ ವಿಶ್ವಕಪ್‌ನ 41ನೇ ಪಂದ್ಯ  ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಮುಖಾಮುಖಿ  ಡಕ್ ವರ್ತ್ ಲೂಯಿಸ್ ನಿಯಮ
ಸೆಮಿ ಫೈನಲ್‌ಗಾಗಿ ಕಿವೀಸ್

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ನ 41ನೇ ಪಂದ್ಯದಲ್ಲಿ ಇಂದು ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಮುಖಾಮುಖಿಯಾಗಲಿವೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್‌ಗೇರುವ ತವಕದಲ್ಲಿ ಕಿವೀಸ್ ಇದೆ. ಮತ್ತೊಂದೆಡೆ, ಐಸಿಸಿಯ ನೂತನ ನಿಯಮಾವಳಿಯನುಸಾರ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಗಿಟ್ಟಿಸಲು ಸಿಂಹಳೀಯರಿಗೆ ಇಂದಿನ ಗೆಲುವು ಅನಿವಾರ್ಯ. ಪ್ರಸ್ತುತ 8 ಅಂಕಗಳನ್ನು ಹೊಂದಿರುವ ಕೇನ್ ವಿಲಿಯಮ್ಸನ್ ತಂಡ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಲು ಪಾಕಿಸ್ತಾನದೊಂದಿಗೂ ಪೈಪೋಟಿ ನಡೆಸಬೇಕಿದೆ.

ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಾಕಿಸ್ತಾನ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ 401 ರನ್ ಗಳಿಸಿದ ಹೊರತಾಗಿಯೂ ಕಿವೀಸ್ ಪಾಳಯಕ್ಕೆ ವಿಜಯಲಕ್ಷ್ಮಿ ಒಲಿಯಲಿಲ್ಲ. ಮಳೆಬಾಧಿತ ಪಂದ್ಯವನ್ನು ಬಾಬರ್ ಬಳಗ ಸ್ಪಷ್ಟ ಲೆಕ್ಕಾಚಾರದೊಂದಿಗೆ ಡಕ್ ವರ್ತ್ ಲೂಯಿಸ್ ನಿಯಮಂತೆ 21 ರನ್‌ಗಳಿಂದ ಗೆದ್ದು ಬೀಗಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಫಖರ್ ಜಮಾನ್ ಅಮೋಘ ಶತಕ ಹಾಗೂ ನಾಯಕ ಬಾಬರ್ ಅಜಮ್​ ಅವರ ಅರ್ಧಶತಕದಾಟ ನ್ಯೂಜಿಲೆಂಡ್ ತಂಡದ ಜಯ ಕಸಿದುಕೊಂಡಿತ್ತು. ಶ್ರೀಲಂಕಾ ವಿರುದ್ಧದ ಇಂದಿನ ಪಂದ್ಯದಲ್ಲಿಯೂ ಸಹ ನ್ಯೂಜಿಲೆಂಡ್ ಜಯದ ಕನಸಿಗೆ ವರುಣ ಅಡ್ಡಿಪಡಿಸುವ ಸಾಧ್ಯತೆಯಿದೆ.

ಸೆಮಿಫೈನಲ್ ರೇಸ್​ನಲ್ಲಿ ಜೀವಂತವಾಗುಳಿಯಲು ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ ಗೆಲುವು ಪಡೆಯಲೇಬೇಕಿದೆ. ಒಂದು ವೇಳೆ ಪಂದ್ಯ ರದ್ದಾದರೆ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗಾಗಿ ನ್ಯೂಜಿಲೆಂಡ್ ಕಾಯಲೇಬೇಕು. ಮತ್ತೊಂದೆಡೆ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅರ್ಹತೆಗೆ ನ್ಯೂಜಿಲೆಂಡ್ ವಿರುದ್ಧದ ಗೆಲುವು ಶ್ರೀಲಂಕಾಗೆ ಅನಿವಾರ್ಯ.

8 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು +0.036 ನೆಟ್ ರನ್‌ರೇಟ್‌ನೊಂದಿಗೆ 8 ಅಂಕಗಳನ್ನು ಹೊಂದಿರುವ ಪಾಕಿಸ್ತಾನ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್‌ಗಿಂತಲೂ‌ ಒಂದು ಸ್ಥಾನ ಕೆಳಗಿದೆ. ಒಂದು ವೇಳೆ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ರದ್ದಾದರೆ ಪಾಕಿಸ್ತಾನ ತಂಡ ನವೆಂಬರ್ 11ರಂದು ಇಂಗ್ಲೆಂಡ್ ವಿರುದ್ಧದ ತನ್ನ ಲೀಗ್‌ನ ಕೊನೆಯ ಪಂದ್ಯವನ್ನು ಜಯಿಸಬೇಕಾಗುತ್ತದೆ. ಆಗ 9 ಅಂಕಗಳನ್ನ ಹೊಂದಿರುವ ನ್ಯೂಜಿಲೆಂಡ್‌ಗಿಂತಲೂ 10 ಅಂಕಗಳೊಂದಿಗೆ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಮೇಲೇರಲಿದೆ. ಅಲ್ಲದೇ ದಕ್ಷಿಣ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ ಪರಾಭವಗೊಂಡರೆ ಪಾಕಿಸ್ತಾನ ಸುಲಭವಾಗಿ ಸೆಮಿಫೈನಲ್‌ ಪ್ರವೇಶಿಸಲಿದೆ.

ಹವಾಮಾನ ಕುರಿತ ಖಾಸಗಿ ವೆಬ್​ಸೈಟ್​ವೊಂದರ ಪ್ರಕಾರ, ಇಂದು ಮದ್ಯಾಹ್ನ ಟಾಸ್ ವೇಳೆಗೆ ಚಳಿಗಾಳಿ ಆರಂಭವಾಗುವ ಸಾಧ್ಯತೆಯಿದೆ. 1:30 ರಿಂದ 3:30ರ ವರೆಗೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದ್ದು, 7:30ರವರೆಗೂ ಮಳೆಯಾಗುವ ಸಾಧ್ಯತೆ ಶೇ 50ರಷ್ಟಿದೆ.

ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವೆ 101 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ನ್ಯೂಜಿಲೆಂಡ್ 51 ಪಂದ್ಯಗಳಲ್ಲಿ ಜಯಗಳಿಸಿದ್ದು, ಶ್ರೀಲಂಕಾ 41 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಮಾತ್ರ ಟೈ ಆಗಿದ್ದು, 8 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯ ಕಂಡಿವೆ. ಏಕದಿನ ವಿಶ್ವಕಪ್‌ನಲ್ಲಿ ಉಭಯ ತಂಡಗಳು 11 ಬಾರಿ ಮುಖಾಮುಖಿಯಾಗಿದ್ದು, ಆ ಪೈಕಿ 5 ಪಂದ್ಯಗಳಲ್ಲಿ ಕಿವೀಸ್‌ ಜಯಗಳಿಸಿದರೆ, 6 ಪಂದ್ಯಗಳಲ್ಲಿ ಸಿಂಹಳೀಯರು ಜಯ ಸಾಧಿಸುವ ಮೂಲಕ ಮೇಲುಗೈ ಹೊಂದಿದ್ದಾರೆ.

ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಇಂದಿನ ಪಂದ್ಯ ಮಧ್ಯಾಹ್ನ 2 ಗಂಟೆಗೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಟಾಸ್​ 1.30ಕ್ಕೆ ಜರುಗಲಿದೆ.

ಶ್ರೀಲಂಕಾ ಸಂಭಾವ್ಯ ತಂಡ: ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ವಿಕೆಟ್​ ಕೀಪರ್​ ಮತ್ತು ನಾಯಕ ಕುಸಾಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಮಹೇಶ್ ತೀಕ್ಷಣ, ದುಷ್ಮಂತ ಚಮೀರ, ಕಸುನ್ ರಜಿತ, ದಿಲ್ಶನ್ ಮಧುಶಂಕ.

ನ್ಯೂಜಿಲೆಂಡ್​ ಸಂಭಾವ್ಯ ತಂಡ: ಡೆವೊನ್ ಕಾನ್ವೇ, ರಚಿನ್ ರವೀಂದ್ರ, ನಾಯಕ ಕೇನ್ ವಿಲಿಯಮ್ಸನ್, ಡೇರಿಲ್ ಮಿಚೆಲ್, ವಿಕೆಟ್​ ಕೀಪರ್​ ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.

ಇದನ್ನೂ ಓದಿ: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ವಿದಾಯ

Last Updated : Nov 9, 2023, 1:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.