ETV Bharat / sports

ವಿಶ್ವಕಪ್​ ಕ್ರಿಕೆಟ್​: ಕಿವೀಸ್​ ವಿರುದ್ಧ 21 ರನ್​ಗಳ ಜಯ ದಾಖಲಿಸಿದ ಪಾಕ್..​

author img

By ETV Bharat Karnataka Team

Published : Nov 4, 2023, 7:55 PM IST

Updated : Nov 4, 2023, 8:42 PM IST

ನ್ಯೂಜಿಲೆಂಡ್​ ನೀಡಿದ್ದ 402 ರನ್​ಗಳ ​ಗುರಿಯನ್ನ ಪಾಕ್​ ಬೆನ್ನಟ್ಟಿದಾಗ ಮಳೆ ಅಡ್ಡಿ ಪಡಿಸಿತು. ಇದರಿಂದ ಡಿಎಲ್​ಎಸ್​ ನಿಯಮದನ್ವಯ ಬಾಬರ್​ ಪಡೆ 21 ರನ್​ಗಳ ಜಯ ಸಾಧಿಸಿದೆ ಎಂದು ಘೋಷಿಸಲಾಯಿತು.

ICC Cricket World Cup 2023
ICC Cricket World Cup 2023

ಬೆಂಗಳೂರು: ಪಾಕಿಸ್ತಾನಕ್ಕೆ ಪ್ಲೇ ಆಫ್​ ಪ್ರವೇಶಕ್ಕೆ ವರುಣನ ಸಹಕಾರವೂ ಸಿಕ್ಕಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಡಿಎಲ್​ಎಸ್​ ನಿಯಮದನ್ವಯ 21 ರನ್​ಗಳ ಜಯ ದಾಖಲಿಸಿದೆ. ನ್ಯೂಜಿಲೆಂಡ್​ ನೀಡಿದ್ದ 402 ರನ್ ಗುರಿಯನ್ನು ಪಾಕಿಸ್ತಾನ ಬೆನ್ನಟ್ಟಿದಾಗ ಮಳೆ ಬಂದು ಪಂದ್ಯವನ್ನು ನಿಲ್ಲಿಸಲಾಯಿತು. ಮಳೆ ಬರುವ ವೇಳೆಗೆ ಪಾಕ್​ ತಂಡ 25.3 ಓವರ್​ಗೆ ಫಖರ್​ ಜಮಾನ್​ 126 ರನ್​ ಮತ್ತು ಬಾಬರ್​ ಅಜಮ್​ 66 ರನ್​ಗಳ ಸಹಾಯದಿಂದ 200 ರನ್​ ಗಳಿಸಿ 1 ವಿಕೆಟ್​ ಕಳೆದುಕೊಂಡಿತ್ತು. ಈ ಗೆಲುವಿನಿಂದ ಪಾಕ್​ಗೆ ಸೆಮೀಸ್​ ಪ್ರವೇಶದ ಹಾದಿ ಜೀವಂತವಾಗಿ ಉಳಿಸಿಕೊಂಡಿದೆ.

ಈ ವಿಶ್ವಕಪ್​ನಲ್ಲಿ ಮೊದಲ ಎರಡು ಪಂದ್ಯಗಳ ಗೆಲುವಿನ ನಂತರ ಪಾಕಿಸ್ತಾನ ನಂತರ ನಾಲ್ಕು ಸೋಲು ಕಂಡಿತ್ತು. ಮತ್ತೆ ಗೆಲುವಿನ ಲಯಕ್ಕೆ ಮರಳಿದ ಪಾಕ್​ ಕಳೆದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆದ್ದ ನಂತರ, ಬೆಂಗಳೂರಿನಲ್ಲಿ ಕಿವೀಸ್​ ವಿರುದ್ಧ ಜಯ ದಾಖಲಿಸಿದೆ. ಇದರಿಂದ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿರುವ ಬಾಬರ್​ ಪಡೆ ಕೊನೆಯ ಪಂದ್ಯವನ್ನು ಇಂಗ್ಲೆಂಡ್​ ವಿರುದ್ಧ ಆಡಲಿದೆ. ಆಂಗ್ಲರ ವಿರುದ್ಧ ದೊಡ್ಡ ಗೆಲುವು ಸಾಧಿಸಿ ರನ್​ರೇಟ್​ ಸುಧಾರಿಸಿ ಕೊಂಡಲ್ಲಿ ಮಾತ್ರ ಸೆಮೀಸ್​ ಪ್ರವೇಶ ಸಿಗುವ ಸಾಧ್ಯತೆ ಇದೆ.

ಟಾಸ್​ ಗೆದ್ದು ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿದ್ದ ಪಾಕ್​ 402 ರನ್​ನ ದೊಡ್ಡ ಗುರಿಯನ್ನೇ ಪಡೆದುಕೊಂಡಿತು. ಬಾಬರ್​ ಪಡೆಯ ಬೌಲರ್​ಗಳನ್ನು ರಚಿನ್​ ರವೀಂದ್ರ (108 ಹಾಗೂ ನಾಯಕ ಕೇನ್​​ ವಿಲಿಯಮ್ಸನ್​ (95) ಸರಿಯಾಗಿಯೇ ದಂಡಿಸಿದರು. ಬೆಂಗಳೂರಿನ ಬ್ಯಾಟಿಂಗ್​ ಪಿಚ್​ಗೆ ಇದು ದೊಡ್ಡ ಮೊತ್ತ ಅಲ್ಲ ಎಂದೇ ಹೇಳಬಹುದಾದರೂ, ಪಾಕಿಸ್ತಾನ ಕಳೆದ ಕೆಲ ಪಂದ್ಯಗಳ ಬ್ಯಾಟಿಂಗೆ ಇದು ಕಠಿಣ ಎಂಬಂತೆ ಕಂಡು ಬರುತ್ತಿತ್ತು.

ಗುರಿಯನ್ನು ಬೆನ್ನಟ್ಟಿದ ಪಾಕ್​ ಟಿಮ್ ಸೌಥಿ ಆರಂಭಿಕ ಆಘಾತವನ್ನು ನೀಡಿದರು. ಕಳೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 68 ರನ್​ಗ ಇನ್ನಿಂಗ್ಸ್​ ಆಡಿದ್ದ ಅಬ್ದುಲ್ಲಾ ಶಫೀಕ್ ಇಂದು 4ಕ್ಕೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಹಾದಿ ಹಿಡಿದರು. ನಂತರ ಎರಡನೇ ವಿಕೆಟ್​ಗೆ ಒಂದಾದ ಫಖರ್ ಜಮಾನ್ ಮತ್ತು ಬಾಬರ್ ಅಜಮ್ ಜೋಡಿ ಭರ್ಜರಿ ಬ್ಯಾಟಿಂಗ್​ ಮಾಡಿತು. ಮೊದಲ ಇನ್ನಿಂಗ್ಸ್​ ಮುಗಿದ ಬೆನ್ನಲ್ಲೇ ಮಳೆ ಬಂದದ್ದು ಪಾಕ್​ ತಂಡಕ್ಕೆ ಬ್ಯಾಟಿಂಗ್​ ವರದಾನ ಆಯಿತು ಎಂದರೆ ತಪ್ಪಾಗದು.

ತೇವಾಂಶದ ಹೊರಾಂಗಣದಿಂದಾಗಿ ಕಿವೀಸ್​ ಬೌಲರ್​ಗಳಿಗೆ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ಇದನ್ನೇ ಲಾಭವಾಗಿಸಿಕೊಂಡ ಫಖರ್ ಜಮಾನ್ 68 ಬಾಲ್​ನಲ್ಲಿ ಶತಕವನ್ನು ದಾಖಲಿಸಿದರು. ವಿಶ್ವಕಪ್​ ಕೊನೆಯ ಹಂತಕ್ಕೆ ತಲುಪುವ ವೇಳೆಗೆ ಭಾರತದ ಪಿಚ್​ಗಳಿಗೆ ಹೊಂದಿಕೊಂಡ ಬಾಬರ್​ ಅಜಮ್​ ಅರ್ಧಶತಕ ದಾಖಲಿಸಿಕೊಂಡರು.

  • " class="align-text-top noRightClick twitterSection" data="">

ಪಂದ್ಯಕ್ಕೆ ಮಳೆ ಅಡ್ಡಿ: 22ನೇ ಓವರ್​ ಚಾಲ್ತಿಯಲ್ಲಿದ್ದಾಗ ಮಳೆ ಬಂದ ಕಾರಣ ಸುಮಾರು 2 ಗಂಟೆಗೂ ಹೆಚ್ಚು ಕಾಲ ಪಂದ್ಯವನ್ನು ನಿಲ್ಲಿಸಲಾಗಿತ್ತು. ಮಳೆ ನಿಂತ ಬಳಿಕ 41 ಓವರ್​ಗೆ ಪಂದ್ಯವನ್ನು ಕಡಿತಗೊಳಿಸಿ 342ರನ್​ ಗುರಿ ನೀಡಲಾಗಿತ್ತು. ಆದರೆ, ವರುಣ ಬಿಡುವು ಕೊಟ್ಟು ಮೈದಾನಕ್ಕಿಳಿದು 2 ಓವರ್​ ಮಾಡುತ್ತಿದ್ದಂತೆ ಮತ್ತೆ ಮಳೆ ಸುರಿಯಿತು. ಇದರಿಂದ ಡಿಎಲ್​ಎಸ್​ ನಿಯಮದ ಅನ್ವಯ ಪಾಕಿಸ್ತಾನವನ್ನು 21 ರನ್​ಗಳಿಂದ ವಿಜೇತ ಎಂದು ಘೋಷಿಸಲಾಯಿತು.

ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯ ಬದಲಿಗೆ ಪ್ರಸಿದ್ಧ್​ ಕೃಷ್ಣ ಎಷ್ಟು ಸೂಕ್ತ?: ಆಯ್ಕೆ ಸಮಿತಿಗೆ ಮಾಜಿ ಆಟಗಾರರ ಪ್ರಶ್ನೆ

Last Updated : Nov 4, 2023, 8:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.