ETV Bharat / sports

ಮತ್ತೊಮ್ಮೆ 'ವಿರಾಟ್' ಪ್ರದರ್ಶನ​: ಶಮಿಗೆ 5 ವಿಕೆಟ್‌ ಗೊಂಚಲು: ಭಾರತಕ್ಕೆ ವಿಶ್ವಕಪ್​ ಕ್ರಿಕೆಟ್‌ನಲ್ಲಿ ಸತತ 5ನೇ ಗೆಲುವು!

author img

By ETV Bharat Karnataka Team

Published : Oct 22, 2023, 10:19 PM IST

Updated : Oct 22, 2023, 10:46 PM IST

ICC Cricket World Cup 2023
ICC Cricket World Cup 2023

ಧರ್ಮಶಾಲಾ ಮೈದಾನದಲ್ಲಿ ಇಂದು ನ್ಯೂಜಿಲೆಂಡ್​ ವಿರುದ್ಧ ಭಾರತ 4 ವಿಕೆಟ್‌ಗಳ ಗೆಲುವು ದಾಖಲಿಸಿತು. 10 ವರ್ಷದ ನಂತರ ನ್ಯೂಜಿಲೆಂಡ್‌​ ವಿರುದ್ಧ ಭಾರತ ಗೆಲುವು ಕಂಡಿತು.

ಧರ್ಮಶಾಲಾ (ಹಿಮಾಚಲ ಪ್ರದೇಶ): ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಇಂದು ನ್ಯೂಜಿಲೆಂಡ್ ತಂಡವನ್ನು ಮಣಿಸಿದ್ದು, ಪ್ರತಿಷ್ಟಿತ ಟೂರ್ನಿಯಲ್ಲಿ ಸತತ 5ನೇ ಗೆಲುವು ದಾಖಲಿಸಿತು. ಧರ್ಮಶಾಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ತಂಡವು 2 ಓವರ್​ ಮತ್ತು 4 ವಿಕೆಟ್​ ಉಳಿಸಿಕೊಂಡು ಕಿವೀಸ್ ನೀಡಿದ 274 ರನ್‌ಗಳ ಗುರಿ ಭೇದಿಸಿತು. ಈ ಮೂಲಕ ವಿಶ್ವಕಪ್‌ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಅಲಂಕರಿಸಿದೆ.

ಮೊದಲು ಬ್ಯಾಟ್​ ಮಾಡಿದ ಕಿವೀಸ್​ ತಂಡ ಡೇರಿಲ್ ಮಿಚೆಲ್ ಶತಕ ಮತ್ತು ರಚಿನ್ ರವೀಂದ್ರ ಅರ್ಧಶತಕದ ಇನ್ನಿಂಗ್ಸ್​ ಬಲದಿಂದ 273 ರನ್​ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಭಾರತಕ್ಕೆ ಎಂದಿನಂತೆ ನಾಯಕ ರೋಹಿತ್​ ಶರ್ಮಾ ಬಿರುಸಿನ ಆರಂಭ ನೀಡಿದರು. ಮೊದಲ ವಿಕೆಟ್​ಗೆ ಶುಭ್‌ಮನ್​ ಗಿಲ್​ ಮತ್ತು ರೋಹಿತ್​ ಶರ್ಮಾ 71 ರನ್​ಗಳ ಜತೆಯಾಟ ಮಾಡಿದರು. ಆದರೆ ಸತತ ಎರಡು ವಿಕೆಟ್​ಗಳ ಪತನ ಭಾರತದ ಆತಂಕಕ್ಕೆ ಕಾರಣವಾಯಿತು. ತಂಡ 71 ರನ್‌ಗಳಿಸಿದ್ದಾಗ ರೋಹಿತ್​ ಶರ್ಮಾ (46) 4 ರನ್‌ನಿಂದ ಅರ್ಧಶತಕ ವಂಚಿತರಾಗಿ ಪೆವಿಲಿಯನ್​ಗೆ ಮರಳಿದರು. ತಂಡಕ್ಕೆ ಮತ್ತೆ 5 ರನ್​ ಸೇರುವಷ್ಟರಲ್ಲಿ ಗಿಲ್​ (26) ಔಟಾದರು.

  • " class="align-text-top noRightClick twitterSection" data="">

ಮಧ್ಯಮ ಕ್ರಮಾಂಕದಲ್ಲಿ ವಿರಾಟ್​ ಕೊಹ್ಲಿ ಮತ್ತು ಶ್ರೇಯಸ್​ ಅಯ್ಯರ್​​ ಮತ್ತು ಕೆ.ಎಲ್.ರಾಹುಲ್​ ಜತೆಗೆ ಅರ್ಧಶತಕದ ಪಾಲುದಾರಿಕೆ ಮಾಡಿದರು. ಶ್ರೇಯಸ್​ ಅಯ್ಯರ್​ 29 ಬಾಲ್​ನಲ್ಲಿ 6 ಬೌಂಡರಿಯಿಂದ 33 ರನ್​ ಗಳಿಸಿದರೆ, ಕೆ.ಎಲ್.ರಾಹುಲ್​ 35 ಬಾಲ್​ನಲ್ಲಿ 27 ರನ್‌ ಗಳಿಸಿ ವಿಕೆಟ್​ ಕೊಟ್ಟರು. ಗಾಯಗೊಂಡ ಹಾರ್ದಿಕ್​ ಪಾಂಡ್ಯ ಜಾಗದಲ್ಲಿ ಸ್ಥಾನ ಪಡೆದುಕೊಂಡ ಸೂರ್ಯಕುಮಾರ್​ ಯಾದವ್ (2) ರನೌಟ್​ಗೆ ಬಲಿಯಾದರು.

ಶತಕ ವಂಚಿತ ಕೊಹ್ಲಿ: ಕೊನೆಯಲ್ಲಿ ರವೀಂದ್ರ ಜಡೇಜಾ ಜತೆಗೆ ವಿರಾಟ್​ 78 ರನ್​ಗಳ ಜೊತೆಯಾಟ ಮಾಡಿದರು. ಗೆಲುವಿಗೆ 5 ರನ್​ ಬೇಕಿದ್ದಾಗ ವಿರಾಟ್​ ಶತಕಕ್ಕೂ ಅಷ್ಟೇ ರನ್​ಗಳ ಅಗತ್ಯವಿತ್ತು. ಸಿಕ್ಸ್​ ಗಳಿಸುವ ಭರದಲ್ಲಿ ವಿರಾಟ್​ ಕ್ಯಾಚ್​ ಕೊಟ್ಟರು. 3ನೇ ವಿಕೆಟ್​ನಿಂದ 5ನೇ ವಿಕೆಟ್‌ವರೆಗೆ ಮೂರು ಅರ್ಧಶತಕದ ಜತೆಯಾಟ ಮಾಡಿದ ಕೊಹ್ಲಿ​ 104 ಬಾಲ್​ ಎದುರಿಸಿ 8 ಬೌಂಡರಿ ಮತ್ತು 2 ಸಿಕ್ಸ್​ ಸಹಾಯದಿಂದ 95 ರನ್​ ಕೆಲಹಾಕಿ ಔಟಾದರು. 5 ರನ್​ ಗಳಿಸಿ ಶತಕ ಪೂರ್ಣ ಮಾಡಿದ್ದಲ್ಲಿ ಏಕದಿನ ಮಾದರಿಯಲ್ಲಿ ಸಚಿನ್​ ದಾಖಲೆ ಸರಿಗಟ್ಟಿದಂತಾಗುತ್ತಿತ್ತು. ಕೊನೆಯಲ್ಲಿ ಜಡೇಜಾ ಬೌಂಡರಿಯ ಮೂಲಕ ವಿಜಯದ ರನ್​ ಗಳಿಸಿದರು.

ಮೊಹಮ್ಮದ್​ ಶಮಿ ಪಂದ್ಯಶ್ರೇಷ್ಠ: ನ್ಯೂಜಿಲೆಂಡ್​ ಪರ ಲಾಕಿ ಫರ್ಗುಸನ್ 2, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಮತ್ತು ಟ್ರೆಂಟ್ ಬೌಲ್ಟ್ ತಲಾ ಒಂದೊಂದು ವಿಕೆಟ್​ ಪಡೆದರು. ಕಿವೀಸ್​ ವಿರುದ್ಧ 5.4 ಎಕಾನಮಿ ದರದಲ್ಲಿ ಬೌಲಿಂಗ್​ ಮಾಡಿ 5 ವಿಕೆಟ್​ ಕಬಳಿಸಿದ ಮೊಹಮ್ಮದ್​ ಶಮಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ಏಕದಿನ ಕ್ರಿಕೆಟ್​ನಲ್ಲಿ 2,000 ರನ್ ಗಡಿ ದಾಟಿದ ಗಿಲ್​: ಅತಿ ಕಡಿಮೆ ಇನ್ನಿಂಗ್ಸ್​ನಲ್ಲಿ ಸಾಧನೆ

Last Updated :Oct 22, 2023, 10:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.