ETV Bharat / sports

ಮೈದಾನಕ್ಕಿಳಿದು ಅಬ್ಬರಿಸಲು ರೆಡಿಯಾದ ಗೌತಮ್ ಗಂಭೀರ್: ಲೆಜೆಂಡ್ಸ್​ ಲೀಗ್​​​ ಟೂರ್ನಿಯಲ್ಲಿ ಭಾಗಿ

author img

By

Published : Aug 19, 2022, 10:34 PM IST

ಲೆಜೆಂಡ್ಸ್​​ ಕ್ರಿಕೆಟ್ ಲೀಗ್​ನ ಎರಡನೇ ಆವೃತ್ತಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದ್ದು, ಭಾರತದ ಮಹಾರಾಜಸ್ ತಂಡದ ಪರ ಗೌತಮ್ ಗಂಭೀರ್ ಕಣಕ್ಕಿಳಿಯಲಿದ್ದಾರೆ.

Gautam Gambhir
Gautam Gambhir

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚು ಹರಿಸಿರುವ ಟೀಂ ಇಂಡಿಯಾ ಮಾಜಿ ಬ್ಯಾಟರ್​, ಬಿಜೆಪಿ ಸಂಸದ ಗೌತಮ್ ಗಂಭೀರ್​ ಇದೀಗ ಮತ್ತೊಮ್ಮೆ ಬ್ಯಾಟ್​​ ಕೈಗೆತ್ತಿಕೊಳ್ಳಲು ಸಜ್ಜಾಗಿದ್ದಾರೆ. ಲೆಜೆಂಡ್ಸ್​​​​​ ಲೀಗ್​​​ನಲ್ಲಿ ಭಾರತ ಮಹಾರಾಜಸ್ ತಂಡದ ಪರ ಆಡುವುದಾಗಿ ಘೋಷಣೆ ಮಾಡಿದ್ದಾರೆ.

ಲೆಜೆಂಡ್ಸ್​ ಕ್ರಿಕೆಟ್​ ಲೀಗ್​​ನ 2ನೇ ಆವೃತ್ತಿ ಸೆಪ್ಟೆಂಬರ್​​​ 16ರಿಂದ ಶುರುವಾಗಲಿದೆ. ತಂಡದ ನಾಯಕತ್ವವನ್ನ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ವಹಿಸಿಕೊಂಡಿದ್ದು, ಇದರಲ್ಲಿ ಗಂಭೀರ್ ಭಾಗಿಯಾಗಲಿದ್ದಾರೆ. ಬಿಜೆಪಿ ಸಂಸದರಾಗಿರುವ ಗೌತಮ್​ ಗಂಭೀರ್​​ 2022ರ ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಲಖನೌ ಸೂಪರ್​ ಜೈಂಟ್ಸ್ ತಂಡದ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ. ಇದರ ಬೆನ್ನಲ್ಲೇ ಇಂಡಿಯಾ ಮಹಾರಾಜಸ್‌ ತಂಡದ ಪರ ಆಡುವುದಾಗಿ ಘೋಷಿಸಿದ್ದಾರೆ.

ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸಮನ್​​ ಆಗಿ ಗೌತಮ್​ ಗಂಭೀರ್​​ ರನ್ ಮಳೆ ಹರಿಸಿದ್ದು, ಐಪಿಎಲ್​​ನಲ್ಲಿ ಕೋಲ್ಕತ್ತಾ ತಂಡದ ನಾಯಕನಾಗಿ ಎರಡು ಸಲ ಚಾಂಪಿಯನ್ ​​ಪಟ್ಟಕ್ಕೇರಿಸಿದ್ದಾರೆ. ಇದೀಗ ಆರಂಭಿಕರಾಗಿ ಮತ್ತೊಮ್ಮೆ ಕಣಕ್ಕಿಳಿಯಲಿದ್ದು, ಗಂಗೂಲಿ ಅಥವಾ ವಿರೇಂದ್ರ ಸೆಹ್ವಾಗ್ ಜೊತೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. ಸೆಪ್ಟೆಂಬರ್‌ 17ರಿಂದ ಶುರುವಾಗಲಿರುವ ಟೂರ್ನಿಯಲ್ಲಿ ಭಾರತ ತಂಡದ ಮಾಜಿ ದಿಗ್ಗಜ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾಗೆ ಓಪನರ್‌ ಆಗಿ ಯಶಸ್ಸು ತಂದುಕೊಟ್ಟಿದ್ದ ಗಂಭೀರ್‌, ಇದೀಗ ಮಹಾರಾಜಾಸ್‌ ತಂಡದ ಬಲ ಹೆಚ್ಚಿಸಿದ್ದಾರೆ.

ಇದನ್ನೂ ಓದಿ: ಲೆಜೆಂಡ್ಸ್‌ ಕ್ರಿಕೆಟ್‌ ಲೀಗ್: ಗಂಗೂಲಿ ಭಾರತ ತಂಡದ ನಾಯಕ, ಪಂದ್ಯ ಎಲ್ಲಿ? ಯಾವಾಗ?

ಈ ಬಗ್ಗೆ ಮಾತನಾಡಿರುವ ಅವರು, ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ 2ನೇ ಆವೃತ್ತಿಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಸಂತಸವಿದೆ. ಮತ್ತೊಮ್ಮೆ ಕ್ರಿಕೆಟ್‌ ಅಂಗಣಕ್ಕೆ ಇಳಿಯಲು ತುಂಬಾ ಕಾತುರದಿಂದ ಕಾಯುತ್ತಿದ್ದೇನೆ. ವಿಶ್ವ ಕ್ರಿಕೆಟ್‌ನಲ್ಲಿ ಮಿಂಚಿರುವ ದಿಗ್ಗಜ ಆಟಗಾರರ ಎದುರು ಮತ್ತೊಮ್ಮೆ ಆಡುವ ಅವಕಾಶ ಸಿಕ್ಕಿರುವುದು ಬಹುದೊಡ್ಡ ಗೌರವದ ಸಂಗತಿ ಎಂದು ತಿಳಿಸಿದ್ದಾರೆ.

ಗಂಭೀರ್​ 2007ರಲ್ಲಿ ಟಿ20 ಕ್ರಿಕೆಟ್ ವಿಶ್ವಕಪ್‌ ಮತ್ತು 2011ರಲ್ಲಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದ ಸಂದರ್ಭದಲ್ಲಿ ಫೈನಲ್‌ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಭಾರತದ ಪರ 58 ಟೆಸ್ಟ್‌, 147 ಏಕದಿನ ಹಾಗೂ 37 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ ಸೀಮಿತ ಓವರ್​​ಗಳಲ್ಲಿ 6170 ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ 4154 ರನ್‌ ಸಿಡಿಸಿದ್ದಾರೆ.

ಭಾರತ ಮಹರಾಜಸ್​ ತಂಡ: ಸೌರವ್ ಗಂಗೂಲಿ (ಕ್ಯಾಪ್ಟನ್​​), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಎಸ್ ಬದ್ರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ, ಎಸ್ ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಪ್ರಗ್ಯಾನ್ ಓಜಾ, ಅಜಯ್ ಜಡೇಜಾ, ಶರ್ಮಾ ಸಿಂಗ್ ಹಾಗು ಜೋಗಿಂದರ್

ಎರಡನೇ ಸೀಸನ್​ನಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಇಂಡಿಯಾ ಮಹಾರಾಜಸ್ ತಂಡದಲ್ಲಿ ಭಾರತದ ವಿರೇಂದ್ರ ಸೆಹ್ವಾಗ್​, ಕೈಫ್​, ಎಸ್​ ಶ್ರೀಶಾಂತ್​ ಸೇರಿದಂತೆ ಅನೇಕ ದಿಗ್ಗಜ ಮಾಜಿ ಆಟಗಾರರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.