ETV Bharat / sports

ಎರಡನೇ ಟೆಸ್ಟ್​: ಡೊಮಿನಿಕ್, ಸ್ಟೋಕ್ಸ್​ ಅರ್ಧಶತಕ - ಉತ್ತಮ ಮೊತ್ತದತ್ತ ಇಂಗ್ಲೆಂಡ್​

author img

By

Published : Jul 17, 2020, 2:03 AM IST

ಕೆರಿಬಿಯನ್ನರ ವಿರುದ್ಧದ ಎರಡನೇ ಕ್ರಿಕೆಟ್​​ ಟೆಸ್ಟ್​ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್​ ಮೊದಲ ದಿನದಾಟದ ಅಂತ್ಯಕ್ಕೆ 82 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 207 ರನ್​ ಗಳಿಸಿದೆ. ಸರಣಿ ಜೀವಂತವಾಗಿರಲು ಆಂಗ್ಲರು ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.
Second Test
ಡೊಮಿನಿಕ್, ಸ್ಟೋಕ್ಸ್​ ಅರ್ಧಶತಕ

ಮ್ಯಾಂಚೆಸ್ಟರ್​: ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ಇಲ್ಲಿನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ​​ ಟೆಸ್ಟ್​ ಕ್ರಿಕೆಟ್ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್​ ತಂಡ ಉತ್ತಮ ಮೊತ್ತದತ್ತ ದಾಪುಗಾಲಿಟ್ಟಿದೆ.

ಮಳೆಯಾಗಿದ್ದರಿಂದ ಪಂದ್ಯವು ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭಗೊಂಡಿದ್ದು, ಮೊದಲ ದಿನದಾಟದ ಅಂತ್ಯಕ್ಕೆ ಆಂಗ್ಲರು 82 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 207 ರನ್​ ಗಳಿಸಿದ್ದಾರೆ. ಆರಂಭದಲ್ಲೇ 29 ರನ್​ಗೆ ಎರಡು ವಿಕೆಟ್​ ಕಳೆದುಕೊಂಡರೂ ಕೂಡ ಆರಂಭಿಕ ಆಟಗಾರ ಡೊಮಿನಿಕ್​ ಸಿಬ್ಲಿ (86*) ಹಾಗೂ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ (59*) ಅವರ ಜವಾಬ್ದಾರಿಯುತ ಬ್ಯಾಟಿಂಗ್​ ನೆರವಿನಿಂದ ಇಂಗ್ಲೆಂಡ್​ ಉತ್ತಮ ಸ್ಥಿತಿಯಲ್ಲಿದೆ.

ಆರಂಭಿಕ ಆಟಗಾರ ರೊರಿ ಬರ್ನ್ಸ್​ (15) ಸ್ಪಿನ್ನರ್​ ರೋಸ್ಟನ್​ ಚೇಸ್​ಗೆ ಮೊದಲ ಬಲಿಯಾದರೆ, ನಂತರ ಕ್ರೀಸ್​ಗೆ ಬಂದ ಜಾಕ್​ ಕ್ರಾವ್ಲಿ ಕೂಡ ಖಾತೆ ತೆರೆಯದೆ ತಾವೆದುರಿಸಿದ ಮೊದಲ ಎಸೆತದಲ್ಲೇ ಔಟ್​ ಆದರು. ಹೀಗಾಗಿ ಇಂಗ್ಲೆಂಡ್​ 29 ರನ್​ಗೆ ಎರಡು ವಿಕೆಟ್​ ಕಳೆದುಕೊಂಡಿತ್ತು. ಈ ವೇಳೆ ಡೊಮಿನಿಕ್​ ಸಿಬ್ಲಿ (86*) ಜೊತೆ ಸೇರಿಕೊಂಡ ನಾಯಕ ಜೋ ರೂಟ್​ (23) ಮೂರನೇ ವಿಕೆಟ್​ಗೆ 52 ರನ್​ ಸೇರಿಸಿ ತಂಡಕ್ಕೆ ನೆರವಾದರು. ಈ ವೇಳೆ ರೂಟ್​ ಅಲ್ಜಾರಿ ಜೋಸೆಫ್​ ಬೌಲಿಂಗ್​ನಲ್ಲಿ ವಿಂಡೀಸ್​ ನಾಯಕ ಜೇಸನ್​ ಹೋಲ್ಡರ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು.

ಬಳಿಕ ಒಂದಾದ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ (59*) ಹಾಗೂ ಡೊಮಿನಿಕ್ ನಾಲ್ಕನೇ ವಿಕೆಟ್​ಗೆ 126 ರನ್​ ಸೇರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ವಿಂಡೀಸ್​ ಪರ ಸ್ಪಿನ್ನರ್​ ರೋಸ್ಟನ್​ ಚೇಸ್ 2 ಹಾಗೂ ಅಲ್ಜಾರಿ ಜೋಸೆಫ್ ಒಂದು ವಿಕೆಟ್​ ಪಡೆದಿದ್ದಾರೆ. ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್​ ಗೆದ್ದಿರುವ ಕೆರಿಬಿಯನ್ನರು ಸರಣಿ ಗೆಲುವಿನ ವಿಶ್ವಾಸದಲ್ಲಿದ್ದರೆ, ಆಂಗ್ಲರು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.