ETV Bharat / sports

ಐಪಿಎಲ್‌ನಿಂದ ನಿವೃತ್ತಿ ನಂತರ ಕ್ಯಾಪ್ಟನ್ ಕೂಲ್ ಈ ಲೀಗ್‌ನಲ್ಲಿ ಆಡ್ತಾರಾ?

author img

By ETV Bharat Karnataka Team

Published : Dec 11, 2023, 4:11 PM IST

MS Dhoni
MS Dhoni

Will MS Dhoni play Legends League Cricket?: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಸಿಇಒ ರಮಣ್ ರಹೇಜಾ ಐಪಿಎಲ್​ ನಿವೃತ್ತಿಯ ನಂತರ ಅವರನ್ನು ಭೇಟಿಯಾಗಿ ಕೇಳಿಕೊಳ್ಳುತ್ತೇನೆ, ಅವರು ಬರುತ್ತೇನೆ ಎಂದರೆ ಅವರಿಗಾಗಿ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದಿದ್ದಾರೆ.

ಸೂರತ್ (ಗುಜರಾತ್​​): ಭಾರತದ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಮೂರು ವರ್ಷ ಸಂದಿದೆ. ಆದರೆ, ಅವರ ಜನಪ್ರಿಯತೆ ಎಳ್ಳಷ್ಟೂ ಕುಗ್ಗಿಲ್ಲ, ಏರುತ್ತಲೇ ಹೋಗಿದೆ. ಇದಕ್ಕೆ ಸಾಕ್ಷಿ ಎಂದರೆ 2023ರ ಐಪಿಎಲ್​ನಲ್ಲಿ ಅವರ ಬ್ಯಾಟಿಂಗ್​ ವೀಕ್ಷಣೆಗೆ ಮೈದಾನಕ್ಕೆ ಮತ್ತು ಒಟಿಟಿಗೆ ಹರಿದು ಬಂದ ವೀಕ್ಷಣೆ. ಈಗ ಧೋನಿಯ ಐಪಿಎಲ್​ ನಿವೃತ್ತಿಯೂ ಹತ್ತಿರವಾಗಿದೆ ಎಂದು ಕೇಳಿ ಬರುತ್ತಿದೆ. 2024ರ ಐಪಿಎಲ್​ ಅವರ ಕೊನೆಯ ಲೀಗ್​ ಆಗಬಹುದು ಎಂದು ಹೇಳಲಾಗುತ್ತಿದೆ.

2024ರ ಐಪಿಎಲ್​ ನಂತರ 'ತಲಾ' ಅವರ ಆಟ ನಾಯಕತ್ವ ನೋಡಲು ಸಿಗುವುದಿಲ್ಲ ಎಂದು ಬೇಸರ ಹೆಚ್ಚಿನ ಅಭಿಮಾನಿಗಳಲ್ಲಿದೆ. ಆದರೆ ಮಾಹಿಯ ಆಟವನ್ನು ಐಪಿಎಲ್​ ನಂತರವೂ ನೋಡುವ ಅವಕಾಶ ಇದೆ. ಆದರೆ ಧೋನಿಯ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ. ಯಾವುದು ಆ ಅವಕಾಶ ಎಂದರೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ). ಎಲ್ಎಲ್​ಸಿ ಸಿಇಒ ರಮಣ್ ರಹೇಜಾ, "ಐಪಿಎಲ್​ ನಂತರ ಮಾಹಿ ಎಲ್​ಎಲ್​ಸಿ ಆಡುವುದಾದರೆ ಅವರಿಗೆ ಎಂದಿಗೂ ಬಾಗಿಲು ತೆರೆದಿರುತ್ತದೆ" ಎಂದಿದ್ದಾರೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ) 2023/24ರ ಆವೃತ್ತಿಯ ಫೈನಲ್​ ಡಿ. 9 ನಡೆಯಿತು. ಇದರಲ್ಲಿ ಅರ್ಬನ್​ರೈಸರ್ಸ್​​ ಹೈದರಾಬಾದ್​ ವಿರುದ್ಧ ಹರ್ಭಜನ್​ ಸಿಂಗ್​ ನಾಯಕತ್ವದ ಮಣಿಪಾಲ್​ ಟೈಗರ್ಸ್​ ತಂಡ ಗೆದ್ದು ಟ್ರೋಫಿ ಎತ್ತಿಹಿಡಿಯಿತು. ಕಳೆದ ವರ್ಷದಿಂದ ಆರಂಭವಾದ ಈ ಲೆಜೆಂಡ್ಸ್ ಲೀಗ್ ಕ್ರಿಕೆಟ್​ನಲ್ಲಿ ಅನೇಕ ರಾಷ್ಟ್ರಗಳ ಹಿರಿಯ ಆಟಗಾರರು ಆಡುತ್ತಿದ್ದಾರೆ ಮತ್ತು ಲೀಗ್​ ಜನಪ್ರಿಯತೆ ಪಡೆದುಕೊಂಡಿದೆ.

ಗೌತಮ್ ಗಂಭೀರ್, ಸುರೇಶ್ ರೈನಾ, ಹರ್ಭಜನ್ ಸಿಂಗ್‌, ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, ಆಲ್‌ರೌಂಡರ್ ಜಾಕ್ವೆಸ್ ಕಾಲಿಸ್ ಮತ್ತು ಇತರ ಐಕಾನ್‌ ಸ್ಟಾರ್​​ಗಳು ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮತ್ತು ಲೀಗ್​ ಕ್ರಿಕೆಟ್​ನಿಂದ ಬೇಗ ನಿವೃತ್ತಿ ಪಡೆದ ಆಟಗಾರರಿಗೆ ಪರ್ಯಾಯ ವೇದಿಕೆಯಾಗಿ ಎಲ್​ಎಲ್​​ಸಿ ಬೆಳೆದಿದೆ.

ಎಲ್​ಎಲ್​ಸಿಯ ಯಶಸ್ವಿ ನಾಲ್ಕನೇ ಆವೃತ್ತಿ ಮುಗಿದ ನಂತರ ಎಲ್ಎಲ್​ಸಿ ಸಿಇಒ ರಮಣ್ ರಹೇಜಾ ಮಾತನಾಡಿದರು. ಈ ವೇಳೆ, ಧೋನಿ ಎಲ್​ಎಲ್​ಸಿಯಲ್ಲಿ ಆಡುತ್ತಾರಾ ಎಂದು ಕೇಳಲಾದ ಪ್ರಶ್ನೆಗೆ,"ನಾನು ಸಕ್ರಿಯ ಕ್ರಿಕೆಟ್‌ನೊಂದಿಗೆ ಸ್ಪರ್ಧಿಸುತ್ತಿಲ್ಲ, ಧೋನಿ ನಮಗಾಗಿ ಆಡಲು ಅಂತಿಮಗೊಳಿಸಿದಾಗಲೆಲ್ಲ ನಮ್ಮ ಬಾಗಿಲುಗಳು ಅವರಿಗೆ ತೆರೆದಿರುತ್ತವೆ. ನಾನು ಖುದ್ದಾಗಿ ಹೋಗಿ ಅವರನ್ನು ಲೀಗ್‌ಗೆ ಬರುವಂತೆ ಹೇಳುತ್ತೇನೆ "ಎಂದಿದ್ದಾರೆ.

"ಅಲ್ಲದೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿನ ಸ್ಟಾರ್​ ಪ್ಲೇಯರ್​ ಆಗಿದ್ದ ಎಬಿ ಡಿವಿಲಿಯರ್ಸ್​, ಮುಂಬೈ ಇಂಡಿಯನ್ಸ್​ನ ಹೊಡಿಬಡಿ ದಾಂಡಿಗ ಕೀರಾನ್​ ಪೊಲಾರ್ಡ್​ ಅವರನ್ನು ಆಡಿಸುವ ಇಚ್ಚೆ ಇದೆ. ಡೇಲ್​ ಸ್ಟೇನ್​ ಈ ವರ್ಷ ಆಡುತ್ತಿದ್ದರು, ಆದರೆ ಗಾಯಕ್ಕೆ ತುತ್ತಾದ ಕಾರಣ ಅವರು ಹೊರಗುಳಿದಿದ್ದಾರೆ. ನಾವು ಎಲ್ಲಾ ಹಿರಿಯ ಆಟಗಾರರನ್ನು ಸಂಪರ್ಕಿಸುತ್ತೇವೆ. ಎಲ್ಲ ಆಟಗಾರರಿಗೂ ಇಲ್ಲಿ ಆಡುವ ಅವಕಾಶ ಇದೆ. ಜಾಕ್ವೆಸ್ ಕಾಲಿಸ್ ಅವರಿ ಸ್ಟೇನ್​ಗೆ ಬರುವಂತೆ ಹೇಳಿದರು. ಹೀಗಾಗಿ ಆಟಗಾರರೇ ಇತರರನ್ನು ಕರೆದುಕೊಂಡು ಬರುತ್ತಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ: ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್ ಇನ್ನಿಂಗ್ಸ್​ಗೆ ಒಲಿದ ಜಯ: ತಪ್ಪಿದ ಕ್ಲೀನ್​​ ಸ್ವೀಪ್​ ಮುಖಭಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.