ETV Bharat / sports

ಅಂತಿಮ ಟಿ-20 ಪಂದ್ಯದಲ್ಲಿ ಭಾರತಕ್ಕೆ ಸೋಲು: ಸರಣಿ ಆಸ್ಟ್ರೇಲಿಯಾದ ಕೈವಶ

author img

By PTI

Published : Jan 9, 2024, 11:00 PM IST

Australia Women crush India by seven wickets in final T20I to take series 2-1
ಅಂತಿಮ ಟಿ-20 ಪಂದ್ಯದಲ್ಲಿ ಭಾರತಕ್ಕೆ ಸೋಲು: ಸರಣಿ ಆಸ್ಟ್ರೇಲಿಯಾದ ಕೈವಶ

ನವಿ ಮುಂಬೈನಲ್ಲಿ ಟಿ-20 ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತದ ಮಹಿಳಾ ತಂಡದ ವಿರುದ್ಧ ಆಸ್ಟ್ರೇಲಿಯಾ ಮಹಿಳಾ ತಂಡ ಗೆದ್ದು 1-2 ಅಂತರರಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಮುಂಬೈ (ಮಹಾರಾಷ್ಟ್ರ): ನಾಯಕಿ ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ ಭರ್ಜರಿ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ವನಿತೆಯರ ತಂಡವು ಭಾರತ ವಿರುದ್ಧ ಟಿ-20 ಸರಣಿಯನ್ನು ತನ್ನಾಗಿಸಿಕೊಂಡಿದೆ. ಮೊದಲ ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಿದ್ದ ಟೀಂ ಇಂಡಿಯಾ ನಂತರದ ಎರಡು ಪಂದ್ಯಗಳನ್ನು ಸೋಲು ಮೂಲಕ ತವರಿನಲ್ಲಿ 1-2 ಅಂತರರಿಂದ ಸರಣಿಯನ್ನು ಕೈಚೆಲ್ಲಿಸಿದೆ.

ನವಿ ಮುಂಬೈನಲ್ಲಿ ಮಂಗಳವಾರ ನಡೆದ ಟಿ-20 ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತೀಯ ವನಿತೆಯರು ಟಾಸ್​ ಸೋತು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 147 ರನ್​ಗಳನ್ನು ಕಲೆ ಹಾಕಿದ್ದರು. ಈ ಗೆಲುವಿನ ಗುರಿ ಬೆನ್ನಟ್ಟಿದ್ದ​ ಆಸೀಸ್​ ತಂಡ 18.4 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 149 ರನ್​ ಬಾರಿಸಿ ಜಯದ ನಗೆ ಬೀರಿತು. ಆರಂಭಿಕರಾದ ನಾಯಕಿ ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ ಆಕರ್ಷಕ ಅರ್ಧಶತಕಗಳನ್ನು ಸಿಡಿಸಿ ಗೆಲುವಿಗೆ ಕಾರಣರಾದರು.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಈ ಜೋಡಿ 10 ಓವರ್​ಗಳಲ್ಲಿ 85 ಓವರ್ ರನ್​ಗಳ ಕಲೆ ಹಾಕಿ ಬೇರ್ಪಟ್ಟಿತು. ಅದರಲ್ಲೂ, ತಮ್ಮ 150ನೇ ಟಿ-20 ಪಂದ್ಯ ಆಡುತ್ತಿದ್ದ ಅಲಿಸ್ಸಾ ಹೀಲಿ ಅಬ್ಬರಿಸಿದರು. 38 ಬಾಲ್​​ಗಳಲ್ಲೇ ಭರ್ಜರಿ 9 ಬೌಂಡರಿಗಳು, 1 ಸಿಕ್ಸರ್​ ಸಮೇತವಾಗಿ 55 ರನ್​ ಬಾರಿಸಿ ನಿರ್ಗಮಿಸಿದರು. 38 ರನ್‌ ಗಳಿಸಿದ್ದಾಗ ಹೀಲಿ ಅವರಿಗೆ ಜೀವದಾನ ಪಡೆದರು. ಇದು ಟೀಂ ಇಂಡಿಯಾದ ಪಾಲಿಗೆ ಮುಳುವಾಗಿ ಪರಿಣಮಿಸಿತು.

ಮತ್ತೊಂದೆಡೆ, ಮೂರನೇ ಕ್ರಮಾಂಕದಲ್ಲಿ ತಹ್ಲಿಯಾ ಮೆಗ್ರಾತ್ (20 ರನ್​), ಎಲ್ಲಿಸ್ ಪೆರ್ರಿ ಅವರನ್ನು ಪೂಜಾ ವಸ್ತ್ರಾಕರ್ ಬೇಗನೆ ಪೆವಿಲಿಯನ್​ಗೆ ಕಳುಹಿಸಿದರು. ಆದರೆ, ಅಷ್ಟೊತ್ತಿಗೆ ಆಸೀಸ್​ ಪಡೆ ಸುಭದ್ರ ಸ್ಥಿತಿಯಲ್ಲಿತ್ತು. ಈ ವಿಕೆಟ್​ ಬಿದ್ದರೂ ಕೊನೆಯವರೆಗಿದ್ದ ಬೆತ್ ಮೂನಿ ಅಜೇಯ 52 ರನ್​, ಫೋಬೆ ಲಿಚ್ಫೀಲ್ಡ್ ಅಜೇಯ 17 ರನ್​ ಸಿಡಿಸಿದರು. ಇದರಿಂದ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ ಪರ ಪೂಜಾ ವಸ್ತ್ರಾಕರ್ ಎರಡು ವಿಕೆಟ್​ ಪಡೆದರೆ, ದೀಪ್ತಿ ಶರ್ಮಾ 1 ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್​ ಮಾಡಿ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ಆದರೆ, ಮಧ್ಯ ಕ್ರಮಾಂಕದಲ್ಲಿ ದಿಢೀರ್​ ಕುಸಿತ ಕಂಡಿತು. ಆರಂಭಿಕರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಇನ್ನಿಂಗ್ಸ್​ ಶುರುವಿನಿಂದಲೇ ಅಬ್ಬರಿಸಿದರು. ಶಫಾಲಿ 17 ಎಸೆತಗಳಲ್ಲೇ 6 ಬೌಂಡರಿಗಳ ಸಮೇತ 26 ರನ್​ ಸಿಡಿಸಿ ನಿರ್ಗಮಿಸಿದರು.

ಮೂರನೇ ಕ್ರಮಾಂಕದಲ್ಲಿ ಬಂದ ಜೆಮಿಮಾ ರಾಡ್ರಿಗಸ್ ಕೇವಲ 2 ರನ್​ ಗಳಿಸಿ ಔಟಾದರು. ಮತ್ತೊಂದೆಡೆ, ತಂಡದ ಮೊತ್ತದ ಎಂಟು ಓವರ್​ಗಳಲ್ಲಿ 60 ರನ್​ ಆಗಿತ್ತು. ಹೀಗಾಗಿ ದೊಡ್ಡ ಮೊತ್ತ ಪೇರಿಸುವ ಭಾರತ ತಂಡ ನಿರೀಕ್ಷೆ ಇತ್ತು. ಆದರೆ, ಉತ್ತಮ ಬ್ಯಾಟ್ ಬೀಸುತ್ತಿದ್ದ ಸ್ಟಾರ್​ ಆಟಗಾರ್ತಿ ಸ್ಮೃತಿ ಮಂಧಾನ ಸಹ ವಿಕೆಟ್​ ಒಪ್ಪಿಸಿದರು. 28 ಬಾಲ್​ಗಳನ್ನು ಎದುರಿಸಿದ ಮಂಧಾನ ಎರಡು ಬೌಂಡರಿ, ಒಂದು ಸಿಕ್ಸರ್​ ಸಮೇತ 29 ರನ್ ಕಲೆ ಹಾಕಿದರು. ಇದಾದ ನಂತರದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ 3 ರನ್​ ಬಾರಿಸಿ ಪೆವಿಲಿಯನ್​ಗೆ ಸೇರಿದರು. ಇದರಿಂದ 4 ರನ್​ಗಳ ಅಂತರದಲ್ಲಿ ಪ್ರಮುಖ ಮೂರು ವಿಕೆಟ್​ಗಳನ್ನು ಟೀಂ ಇಂಡಿಯಾ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಬೇಕಾಯಿತು.

ಈ ನಡುವೆ ವಿಕೆಟ್​ ಕೀಪರ್​ ರಿಚಾ ಘೋಷ್ ಮತ್ತು ದೀಪಾ ಶರ್ಮಾ ತಂಡಕ್ಕೆ ಆಸರೆಯಾದರು. ದೀಪಾ ಶರ್ಮಾ 14 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಐದನೇ ವಿಕೆಟ್​ಗೆ 33 ರನ್​ಗಳ ಜೊತೆಯಾಟ ನೀಡಿದ ಈ ಜೋಡಿ ತಂಡವನ್ನು 100 ಗಡಿಗೆ ತಲುಪಿಸಿತು. ಮತ್ತೊಂದೆಡೆ, ರಿಚಾ ಘೋಷ್ ಬಿರುಸಿನ ಬ್ಯಾಟ್​ 28 ಬಾಲ್​ಗಳಲ್ಲಿ 34 ರನ್​ ಸಿಡಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಏರಿಸಿದರು.

ಅಲ್ಲದೇ, ಅಮಂಜೋತ್ ಕೌರ್ ಸಹ 14 ಎಸೆತಗಳಲ್ಲಿ 17 ರನ್​, ಪೂಜಾ ವಸ್ತ್ರಾಕರ್ 2 ಎಸತೆಗಳಲ್ಲಿ 7 ರನ್​ ಬಾರಿಸಿ ಅಮೂಲ್ಯ ಕೊಡುಗೆ ನೀಡಿದರು. ಇದರಿಂದ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 147 ರನ್​ ಪೇರಿಸಲು ಭಾರತ ತಂಡಕ್ಕೆ ಸಾಧ್ಯವಾಗಿತ್ತು. ಆಸೀಸ್​ ಪರ ಅನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್ಹ್ಯಾಮ್ ತಲಾ ಎರಡು ವಿಕೆಟ್ ಮತ್ತು ಮೇಗನ್ ಸ್ಚುಟ್, ಆಶ್ಲೀಗ್ ಗಾರ್ಡ್ನರ್ 1 ವಿಕೆಟ್​ ಪಡೆದರು.

ಇದನ್ನೂ ಓದಿ: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ಸಿದ್ಧ: ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.