ETV Bharat / sitara

ಅಂಕುಶ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅಪ್ರತಿಮ ಪೋಷಕ ನಟ ಸತ್ಯಜಿತ್

author img

By

Published : Oct 10, 2021, 2:35 PM IST

sandalwood actor satyajeet profile
ಅಂಕುಶ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅಪ್ರತಿಮ ಪೋಷಕ ನಟ ಸತ್ಯಜಿತ್

1986ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರ ಅಂಕುಶ್ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹಿರಿಯ ನಟ ಸತ್ಯಜಿತ್ 600ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಬೆಂಗಳೂರು: ಪೋಷಕ ಪಾತ್ರಗಳಿಗೆ ಜೀವ ತುಂಬುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಸತ್ಯಜಿತ್ ಅಥವಾ ಸೈಯದ್ ನಿಜಾಮುದ್ದೀನ್ ತಮ್ಮ ಮೂರುವರೆ ದಶಕಗಳ ಚಿತ್ರ ಬದುಕಿನ ಯಾತ್ರೆ ಮುಗಿಸಿದ್ದಾರೆ.

ಕನ್ನಡ ಚಿತ್ರ ರಂಗದಲ್ಲಿ ಖಳನಟನಾಗಿ ಪೊಲೀಸ್ ಪಾತ್ರಧಾರಿಯಾಗಿ ಪೋಷಕ ನಟನಾಗಿ ಅಪರೂಪದ ಅಭಿನಯ ನೀಡುವ ಮೂಲಕ ಮನೆ ಮಾತಾಗಿದ್ದ ಸತ್ಯಜಿತ್‌ ಹಾಸ್ಯ ಪಾತ್ರಗಳಿಗೆ ತಮ್ಮದೇ ಆದ ರೀತಿಯಲ್ಲಿ ಜೀವ ತುಂಬುತ್ತಿದ್ದರು. ಗ್ಯಾಂಗ್ರಿನ್ ಸಮಸ್ಯೆಗೆ ತುತ್ತಾಗಿ ನಾಲ್ಕು ವರ್ಷದ ಹಿಂದೆ ತಮ್ಮ ಎಡಗಾಲನ್ನು ಕಳೆದುಕೊಂಡಿದ್ದ ಇವರು ಇದಾದ ಬಳಿಕ ಅಷ್ಟಾಗಿ ಚಿತ್ರದಲ್ಲಿ ಅಭಿನಯಿಸಿರಲಿಲ್ಲ.

72 ವರ್ಷ ಪ್ರಾಯದ ಇವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲಿ ಕಳೆದ ವಾರ ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಬದುಕನ್ನು ಚಿತ್ರರಂಗಕ್ಕೆ ಮುಡಿಪಾಗಿರಿಸಿದ ಇವರಿಗೆ ಚಿತ್ರರಂಗದ ಪ್ರಮುಖರು, ನಟ- ನಟಿಯರು, ಸಾರ್ವಜನಿಕರು ಹಾಗೂ ಉದ್ಯಮಿಗಳು ಆರ್ಥಿಕ ಸಹಾಯ ನೀಡುವ ಕಾರ್ಯವನ್ನು ಸಹ ಮಾಡಿದ್ದರು. ಆದರೆ ಅನಾರೋಗ್ಯ ಉಲ್ಬಣಗೊಂಡು ಇಂದು ನಿಧನರಾಗಿದ್ದಾರೆ. ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಚಿತ್ರರಂಗದ ಹಿನ್ನೆಲೆ

1986 ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರ ಅಂಕುಶ್ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸತ್ಯಜಿತ್ 600ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದರು. 1992ರಲ್ಲಿ ತೆರೆಕಂಡ ಮೈಸೂರು ಜಾಣ, ಇವರಿಗೆ ಚಿತ್ರರಂಗದಲ್ಲಿ ನೆಲೆಯೂರಲು ದೊಡ್ಡದೊಂದು ಕೊಡುಗೆ ನೀಡಿತು. ಇದಾದ ಬಳಿಕ ಅವರು ಹಿಂತಿರುಗಿ ನೋಡಲಿಲ್ಲ.

ಪುಟ್ನಂಜ, ಶಿವ ಮೆಚ್ಚಿದ ಕಣ್ಣಪ್ಪ, ಚೈತ್ರದ ಪ್ರೇಮಾಂಜಲಿ, ಮಂಡ್ಯದ ಗಂಡು, ಯುದ್ಧಕಾಂಡ, ರನ್ನ, ರಣವಿಕ್ರಮ, ಮೈತ್ರಿ, ಪೊಲೀಸ್ ಸ್ಟೋರಿ, ಅಪ್ಪು, ದಮ್, ಉಪ್ಪಿ 2, ಮಾಣಿಕ್ಯ, ಆಪ್ತಮಿತ್ರ, ಅಧ್ಯಕ್ಷ ಸೇರಿದಂತೆ ಹಲವು ಚಿತ್ರಗಳಲ್ಲಿ ಮನೋಜ್ಞ ಅಭಿನಯದ ಮೂಲಕ ಹೆಸರುವಾಸಿಯಾದರು. 2018 ರಲ್ಲಿ ತೆರೆಕಂಡ ಪ್ರಿಯಾಂಕ ಉಪೇಂದ್ರ ಅಭಿನಯದ ಸೆಕೆಂಡ್ ಆಫ್ ಚಿತ್ರದಲ್ಲಿ ವ್ಹೀಲ್​ಚೇರ್​​ನಲ್ಲಿ ಕುಳಿತುಕೊಂಡು ಅವರು ಅಭಿನಯಿಸಿದ್ದರು. ಇದು ಅವರ ಕಡೆಯ ಚಿತ್ರ ಕೂಡ ಆಗಿತ್ತು.

ಚಿತ್ರರಂಗಕ್ಕೆ ಬರುವ ಮುನ್ನ ವೃತ್ತಿಯಲ್ಲಿ ಇವರು ಬಸ್ ಚಾಲಕರಾಗಿದ್ದು, ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಊರೂರು ಅಲೆದು ನಾಟಕಗಳಲ್ಲಿ ತಮ್ಮ ಪ್ರದರ್ಶನ ನೀಡುತ್ತಿದ್ದರು. ನಾಟಕರಂಗವೇ ಮುಂದೆ ಇವರಿಗೆ ಚಿತ್ರರಂಗಕ್ಕೆ ಕಾಲಿರಿಸಲು ಅವಕಾಶ ಮಾಡಿಕೊಟ್ಟಿತು.

ಸತ್ಯಜಿತ್ ಅಸಲಿ ಹೆಸರು ಸಯ್ಯದ್ ನಿಜಾಮುದ್ದೀನ್. ಚಿತ್ರರಂಗಕ್ಕೆ ಪ್ರವೇಶಿಸಿದ ಬಳಿಕ ಸತ್ಯಜಿತ್ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದರು. ನಾಟಕ ಪ್ರದರ್ಶನ ನೀಡಿದ ಸಂದರ್ಭ ಖ್ಯಾತ ನಟ ನಾನಾ ಪಾಟೇಕರ್ ಪರಿಚಯವಾಗಿ ಹಿಂದಿ ಚಿತ್ರಗಳಲ್ಲಿ ಸಹ ಅಭಿನಯಿಸಿದ್ದರು. ಪತ್ನಿ ಸೋಫಿಯಾ ಗೃಹಿಣಿಯಾಗಿದ್ದು, ಪುತ್ರಿ ಅಕ್ತರ್ ಸ್ವಲೇಹಾ ಅವರು ವೃತ್ತಿಯಲ್ಲಿ ಪೈಲೆಟ್ ಆಗಿದ್ದಾರೆ. ಪುತ್ರ ಆಕಾಶ್​​ಜಿತ್ ಕೂಡಾ ನಟರಾಗಿದ್ದಾರೆ.

ಇದನ್ನೂ ಓದಿ: ಹಿರಿಯ ನಟ ಸತ್ಯಜಿತ್​​ ಅಂತಿಮ ದರ್ಶನಕ್ಕೆ ಸಿದ್ಧತೆ: ಸ್ಯಾಂಡಲ್​ವುಡ್​​ನಲ್ಲಿ ಮಡುಗಟ್ಟಿದ ಶೋಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.