ETV Bharat / sitara

ನಟನೆ, ನಿರ್ದೇಶನ, ನಿರ್ಮಾಣ.. ಕನ್ನಡ ಚಿತ್ರರಂಗದಲ್ಲಿ ಶಿವರಾಮಣ್ಣನ ಹೆಜ್ಜೆ ಗುರುತು

author img

By

Published : Dec 4, 2021, 4:46 PM IST

Updated : Dec 4, 2021, 5:00 PM IST

sandalwood-veteran-actor-shivaram
ಕನ್ನಡ ಚಿತ್ರರಂಗದ ಶಿವರಾಮ್

1958ರಲ್ಲಿ ಚಿತ್ರರಂಗ ಪ್ರವೇಶಿಸಿ ಕು.ರಾ.ಸೀತಾರಾಮಶಾಸ್ತ್ರಿ ಅವರಂತಹ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಲು ಆರಂಭಿಸಿದ್ದ ನಟ ಶಿವರಾಮ್ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದವರು. ಕನ್ನಡ ಚಿತರಂಗದ ಮೇರು ನಟರ ಜೊತೆ ತೆರೆ ಮೇಲೆ ಕಾಣಿಸಿಕೊಂಡು ಎಂತಹ ಪಾತ್ರಕ್ಕೂ ಸೈ ಎನಿಸಿಕೊಂಡ ಹೆಗ್ಗಳಿಕೆ ಅವರದ್ದು.

ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡದ ಹಿರಿಯ ನಟ ಶಿವರಾಮ್​​ ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾರೆ. ನಿರ್ದೇಶಕ‌ ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ಅವರಿಗೆ 83 ವರ್ಷ ವಯಸ್ಸಾಗಿತ್ತು.​

ಕನ್ನಡದ ದಿಗ್ಗಜ ನಟರೊಂದಿಗೆ ನಟಿಸಿರುವ ಅವರು, ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್​ ಅವರುಗಳೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಶಿವರಾಮಣ್ಣ ಎಂದೇ ಖ್ಯಾತರಾಗಿದ್ದ ಅವರು, 1965ರಲ್ಲಿ 'ಬೆರೆತ ಜೀವ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಪುಟ್ಟಣ್ಣ ಕಣಗಾಲ್​​ರಂತಹ ನಿರ್ದೇಶಕರ ಜೊತೆಗೆ ಸಹನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವ ಅವರಲ್ಲಿತ್ತು.

actor-shivaram
ನಟ ಶಿವರಾಮ್

ಬಳಿಕ ಪೋಷಕ ಪಾತ್ರಗಳ ಮೂಲಕ ಹಲವು ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ವಿಷ್ಣುವರ್ಧನ್ ಚಿತ್ರದಲ್ಲಿ ಶಿವರಾಮ್​ ಅವರಿಗೆ ಒಂದು ಪಾತ್ರ ಖಾಯಂ ಎನ್ನುವಂತೆ ಬಹುತೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ಆರಂಭಿಕ ಜೀವನ

ಶಿವರಾಮ್ ಅವರು 1938ರಲ್ಲಿ ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಚೂಡಸಂದ್ರ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಹುಟ್ಟೂರಲ್ಲೇ ಮುಗಿಸಿದ ಅವರು ಬಳಿಕ ಟೈಪ್​ರೈಟಿಂಗ್ ಕೆಲಸ ಮಾಡುತ್ತಿದ್ದ ಅಣ್ಣನ ಜೊತೆ ಹೆಚ್ಚಿನ ಕಲಿಕೆಗಾಗಿ ಬೆಂಗಳೂರಿಗೆ ಆಗಮಿಸಿದರು.

actor-shivaram
ನಟ ಶಿವರಾಮ್

ಸ್ಯಾಂಡಲ್​​ವುಡ್​ಗೆ ಪರಿಚಯ

ಅವರ ಮೊದಲು ರಂಘಭೂಮಿಯತ್ತ ಒಲವು ಹೊಂದಿದ್ದರು. ಗುಬ್ಬಿ ವೀರಣ್ಣರ ಕಂಪನಿಯಲ್ಲಿ ಹಲವು ನಾಟಕ ಪ್ರದರ್ಶನ ನೀಡಿದ್ದರು. ಈ ಮೂಲಕ ಅವರು ಸಿನಿಮಾರಂಗದತ್ತ ಮುಖಮಾಡುವಂತೆ ಮಾಡಿತು.

1958ರಲ್ಲಿ ಸ್ಯಾಂಡಲ್​ವುಡ್​​​ಗೆ ಆಗಮಿಸಿದ ಅವರು ಆರಂಭದಲ್ಲಿ ಹಲವು ನಿರ್ದೇಶಕರ ಬಳಿ ಸಹನಿರ್ದೇಶಕರಾಗಿ ದುಡಿದರು. ಬಳಿಕ 1965ರಲ್ಲಿ ಬೆರೆತ ಜೀವನ ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡರು.

actor-shivaram
ಸ್ನೇಹಿತರೊಂದಿಗೆ ನಟ ಶಿವರಾಮ್

ಬಳಿಕ 1970-80ರಲ್ಲಿ ಬಹುತೇಕ ಎಲ್ಲಾ ನಿರ್ದೇಶಕರ ಜೊತೆಯೂ ಕೆಲಸ ಮಾಡಿದರು. ಆದರೆ ಪುಟ್ಟಣ್ಣ ಕಣಗಾಲ್​ ಅವರ ಜೊತೆ ದೀರ್ಘವಾಗಿ ಕೆಲಸ ನಿರ್ವಹಿಸಿದರು.

ಶಿವರಾಮ್ ಇದುವರೆಗೆ ನಿರ್ದೇಶಿಸಿದ ಏಕೈಕ ಚಿತ್ರವೆಂದರೆ ಹೃದಯ ಸಂಗಮ, ಡಾ. ರಾಜಕುಮಾರ್ ಮತ್ತು ಭಾರತಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಯೋಗಾತ್ಮಕ ಚಿತ್ರಗಳಿಗೂ ತೆರೆದುಕೊಂಡ ಅವರು, ಗಿರೀಶ್ ಕಾಸರವಳ್ಳಿಯ ತಾಯಿ ಸಾಹೇಬ, ಬರ ಮತ್ತು ಎಂ.ಎಸ್. ಸತ್ಯು ಅವರ ಚಿತೆಗು ಚಿಂತೆ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇದರ ಜೊತೆ ಎಸ್​ ಎಲ್​ ಭೈರಪ್ಪ ಅವರ ಪ್ರಸಿದ್ಧ ಕಾದಂಬರಿಯನ್ನು ಆಧರಿಸಿ ಕಾಸರವಳ್ಳಿಯವರ ಗೃಹಭಂಗ ಧಾರಾವಾಹಿಯಲ್ಲೂ ನಟಿಸಿದ್ದರು.

actor-shivaram
ನಟ ಶಿವರಾಮ್

ಶಿವರಾಮ್​​ ಅವರು ಅಂಚೆಚೀಟಿಗಳು, ಪುಸ್ತಕಗಳು ಮತ್ತು ಮ್ಯಾಚ್ ಬಾಕ್ಸ್‌ಗಳ ಅತ್ಯಾಸಕ್ತಿಯ ಸಂಗ್ರಾಹಕರಾಗಿದ್ದಾರೆ. ಅವರ ಮನೆಯ ನೆಲಮಾಳಿಗೆಯಲ್ಲಿ ಸಾಹಿತ್ಯ, ರಂಗಭೂಮಿ, ಸಿನಿಮಾ, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಪುಸ್ತಕಗಳ ದೊಡ್ಡ ಸಂಗ್ರಹವೇ ಇದೆ. ಕನ್ನಡ ಉದ್ಯಮದಲ್ಲಿ ಅನೇಕರು ಅವರನ್ನು ಏಕವ್ಯಕ್ತಿ ವಿಶ್ವವಿದ್ಯಾಲಯ ಎಂದು ಪರಿಗಣಿಸುತ್ತಾರೆ. ಜೊತೆಗೆ ಸಹೋದರನ ಜೊತೆಗೂಡಿ ‘ರಾಶಿ ಬ್ರದರ್ಸ್’ ಸಿನಿಮಾ ನಿರ್ಮಾಣ ಸಂಸ್ಥೆ ಕಟ್ಟಿದ್ದರು.

ನಿರ್ಮಾಪಕರಾಗಿ ಶಿವರಾಮ್​​

ಅವರು ಪ್ರತಿಭಾನ್ವಿತ ನಟರಾಗಿದ್ದರು, ಭಾವನಾತ್ಮಕ ಮತ್ತು ಹಾಸ್ಯ ಪಾತ್ರಗಳನ್ನು ಎರಡನ್ನೂ ನಿರ್ವಹಿಸಬಲ್ಲ ಹಿರಿಯ ನಟ. 'ನಾಗರಹಾವು' (1972), 'ನಾನೊಬ್ಬ ಕಳ್ಳ' (1979), 'ಹೊಂಬಿಸಿಲು' (1978), 'ಗೀತಾ' (1981), 'ಯಜಮಾನ' (2000), ಮತ್ತು 'ಆಪ್ತಮಿತ್ರ' (2004) ಹಿಟ್ ಚಿತ್ರಗಳು. ಅವರ ಸಹೋದರ ಎಸ್ ರಾಮನಾಥನ್ ಅವರೊಂದಿಗೆ ಶಿವರಾಮ್ ಅವರು 'ಗೆಜ್ಜೆ ಪೂಜೆ' (1970), ಮತ್ತು 'ಉಪಾಸನೆ' (1974) ಮುಂತಾದ ಪ್ರಸಿದ್ಧ ಚಲನಚಿತ್ರಗಳನ್ನು ನಿರ್ಮಿಸಿದರು.

ಪ್ರಶಸ್ತಿಗಳು

2013-ಪದ್ಮಭೂಷಣ ಡಾ.ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ.

2010-11 - ಕರ್ನಾಟಕ ಸರ್ಕಾರದಿಂದ ಡಾ. ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ

ಮೂರು ದಿನಗಳ ಹಿಂದೆ ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಅವರು ತಲೆಸುತ್ತಿ ಬಿದ್ದಿದ್ದರಿಂದ ತಲೆಗೆ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 83 ವರ್ಷದ ಹಿರಿಯ ಜೀವವೊಂದು ಕನ್ನಡ ಚಿತ್ರರಂಗದಿಂದ ಮರೆಯಾಗಿದೆ.

ಇದನ್ನೂ ಓದಿ: ಅವಿಭಜಿತ ಆಂಧ್ರದ ಮಾಜಿ ಸಿಎಂ, ಕರ್ನಾಟಕದ ಮಾಜಿ ಗವರ್ನರ್ ಕೆ.ರೋಸಯ್ಯ ವಿಧಿವಶ

Last Updated :Dec 4, 2021, 5:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.