ETV Bharat / science-and-technology

Taliban Tweet: 'ಟ್ವಿಟರ್​ಗೆ ಸರಿಸಾಟಿ ಯಾವುದೂ ಇಲ್ಲ'- ಮಸ್ಕ್​​​ ಪರ ತಾಲಿಬಾನ್​ ಬ್ಯಾಟಿಂಗ್​!​

author img

By

Published : Jul 11, 2023, 11:35 AM IST

Taliban Leader Anas Haqqani Supports Elon Musk run Twitter over Threads
Taliban Leader Anas Haqqani Supports Elon Musk run Twitter over Threads

ಥ್ರೆಡ್ಸ್‌​ನಲ್ಲಿ ಯಾವುದೇ ವಾಕ್​ ಸ್ವಾತಂತ್ರ್ಯವಿಲ್ಲ ಎಂದಿರುವ ತಾಲಿಬಾನ್​ ಟ್ವಿಟರ್​ ಬೆಸ್ಟ್​ ಎಂದಿದೆ.

ಬೆಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಟ್ವಿಟರ್​ ಮತ್ತು ಮೆಟಾ ಮಾಲೀಕರ ನಡುವೆ ನಡೆಯುತ್ತಿರುವ ಶೀತಲ ಸಮರ ಬೂದಿ ಮುಚ್ಚಿದ ಕೆಂಡದಂತಿದೆ. ಟ್ವಿಟರ್​​ಗೆ ಪರ್ಯಾಯವಾಗಿ ಥ್ರೆಡ್ಸ್‌​​ ಅನ್ನು ತಂದಿರುವ ಮಾರ್ಕ್​ ಜುಗರ್​ಬರ್ಗ್​​ ನಡೆ ಟೆಸ್ಲಾ ಮುಖ್ಯಸ್ಥ ಎಲೋನ್​ ಮಸ್ಕ್​ ಕಣ್ಣು ಕೆಂಪಾಗಿಸಿದೆ. ಕಳೆದ ವಾರ ಹೊಸ ವೈಶಿಷ್ಟ್ಯಗಳಿಂದ ಬಿಡುಗಡೆಯಾಗಿರುವ ಥ್ರೆಡ್ಸ್‌​​ ಜಾಲತಾಣಿಗರನ್ನು ಆಕರ್ಷಿಸುವಲ್ಲಿ ಯಶಸ್ಸು ಕಾಣುತ್ತಿದೆ. ಅಷ್ಟೇ ಅಲ್ಲ, ಬಿಡುಗಡೆಯಾದ ವಾರದಲ್ಲೇ 100 ಮಿಲಿಯನ್​ ಬಳಕೆದಾರರು ಇದಕ್ಕೆ ಸೈನ್​ ಅಪ್​ ಆಗಿದ್ದಾರೆ.

ಈ ನಡುವೆ ಯಾವುದು ಉತ್ತಮ? ಎಂಬ ಚರ್ಚೆ ಜೋರಾಗಿದೆ. ತಾಲಿಬಾನ್​ ಮುಖ್ಯಸ್ಥ ಅನಸ್​​ ಹಕ್ಕಾನಿ ಅವರು ಟ್ವಿಟರ್​​ ಬೆಂಬಲಕ್ಕೆ ನಿಂತಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಟ್ವಿಟರ್​ ಪರ ಬ್ಯಾಟಿಂಗ್​ ಮಾಡಿರುವ ಹಕ್ಕಾನಿ, ಅದಕ್ಕೆ ಸರಿಸಾಟಿ ಯಾವುದೂ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ವೀಟ್​ ಮಾಡಿರುವ ಹಕ್ಕಾನಿ, "ಬೇರೆ ಸಾಮಾಜಿಕ ಜಾಲತಾಣಗಳಿಗೆ ಹೋಲಿಕೆ ಮಾಡಿದರೆ ಟ್ವಿಟರ್​​ನಲ್ಲಿ ಎರಡು ಪ್ರಮುಖ ಪ್ರಯೋಜನಗಳಿವೆ. ಮೊದಲನೆಯದು ವಾಕ್​ ಸ್ವಾತಂತ್ರ್ಯವಾದರೆ ಎರಡನೆಯದು ಟ್ವಿಟರ್​ನ ಸಾರ್ವಜನಿಕ ಸ್ವಭಾವ ಮತ್ತು ವಿಶ್ವಾಸಾರ್ಹತೆ" ಎಂದು ಹೇಳಿದ್ದಾರೆ.

ಮೆಟಾದಂತೆ ಟ್ವಿಟರ್​ನಲ್ಲಿ ಯಾವುದೇ ಅಸಹಿಷ್ಣು ನೀತಿ ಇಲ್ಲ. ಬೇರೆ ಯಾವುದೇ ಸಾಮಾಜಿಕ ಜಾಲತಾಣಗಳು ಇದಕ್ಕೆ ಪರ್ಯಾಯವಾಗದು. ಯಾವುದೇ ಮೈಕ್ರೋಬ್ಲಾಗಿಂಗ್​ ಜಾಲತಾಣಗಳು ಬಂದರೂ ತಾಲಿಬಾನ್​ ಟ್ವಿಟರ್​ ಬಳಕೆ ಮಾಡಿ ಬೆಂಬಲಿಸುತ್ತದೆ ಎಂದಿದ್ದಾರೆ.

ತಾಲಿಬಾನ್​ಗೆ ಟ್ವಿಟರ್‌ ಪ್ರಿಯವಾಗಲು ಕಾರಣ ಇದು : ಅಫ್ಘಾನಿಸ್ತಾನವನ್ನು ಆಳುತ್ತಿರುವ ತಾಲಿಬಾನ್ ಟ್ವಿಟರ್​ ಕುರಿತು ಈ ಪರಿಯಾಗಿ ಒಲವು ತೋರಿಸಲು ಕಾರಣವೂ ಇದೆ. ಕಳೆದ ವರ್ಷ ಎಲೋನ್​ ಮಸ್ಕ್​ ಟ್ವಿಟರ್​ ಖರೀದಿಸಿದ ಬಳಿಕ ಅವರು ಹಲವು ಮಾರ್ಪಾಡುಗಳನ್ನು ತಂದರು. ಅದರಲ್ಲಿ ಒಂದು, ಪ್ರಮುಖ ವ್ಯಕ್ತಿಗಳು, ಸೆಲೆಬ್ರಿಟಿಗಳು, ಜಾಹೀರಾತು ಬ್ರಾಂಡ್​ಗಳ ಓಲೈಕೆ ಬಿಟ್ಟು, ಸಾಮಾನ್ಯರಂತೆ ಅವರನ್ನು ಪರಿಗಣಿಸುವುದು. ಮಸ್ಕ್​ ಅವರ ಈ ಕ್ರಮವನ್ನು ತಾಲಿಬಾನ್ ಮೆಚ್ಚಿಕೊಂಡಿದೆ.

ಜನವರಿಯಲ್ಲಿ ಪಾವತಿದಾರ ಬಳಕೆದಾರರಿಗೆ ಮಾತ್ರ ಬ್ಲೂಟಿಕ್​ ಪಾಲಿಸಿ ತಂದ ಬೆನ್ನಲ್ಲೇ ಇಬ್ಬರು ತಾಲಿಬಾನ್​ ಅಧಿಕಾರಿಗಳು ಕೂಡ ಮಾಸಿಕ 8 ಡಾಲರ್​ ಪಾವತಿಸುವ ಮೂಲಕ ಬ್ಲೂ ಟಿಕ್​ ವೆರಿಫಿಕೇಷನ್​ ಪಡೆಯುವಲ್ಲಿ ಯಶಸ್ವಿಯಾದರು. ಸದ್ಯ ಸಾಮಾಜಿಕ ಜಾಲತಾಣವನ್ನು ಅತ್ಯಂತ ಆಕ್ರಮಣಶೀಲವಾಗಿ ಬಳಕೆ ಮಾಡುತ್ತಿರುವ ತಾಲಿಬಾನ್​, ಈ ಮೂಲಕ ತನ್ನ ಸಂದೇಶವನ್ನು ಎಲ್ಲೆಡೆ ಇರುವ ತನ್ನ ಪ್ರೇಕ್ಷಕರಿಗೆ ತಲುಪಿಸಲು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿದೆ.

ತಾಲಿಬಾನ್​ ವಿರುದ್ಧ ಫೇಸ್​ಬುಕ್​, ಟಿಕ್​ಟಾಕ್ ​: ಫೇಸ್‌ಬುಕ್ ಮತ್ತು ಟಿಕ್‌ಟಾಕ್ ಎರಡೂ ಜಾಲತಾಣಗಳು ತಾಲಿಬಾನ್ ಅನ್ನು ಭಯೋತ್ಪಾದಕ ಸಂಘಟನೆಯಾಗಿ ನೋಡುತ್ತವೆ. ಇದರಿಂದ ತಾಲಿಬಾನ್​ ಯಾವುದೇ ಪೋಸ್ಟ್​ ಅನ್ನು ತನ್ನ ಮೈಕ್ರೋ ಬ್ಲಾಕ್​ನಲ್ಲಿ ಪ್ರಕಟಿಸಲು ಅನುಮತಿಸುವುದಿಲ್ಲ. ಇಂದಿಗೂ ಕೂಡ ಅದು ತಾಲಿಬಾನ್​ ಸಂಘಟನೆ ಮೇಲೆ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ತಾಲಿಬಾನ್​ ತನ್ನ ಚಿಂತನೆಯನ್ನು ಮುಕ್ತವಾಗಿ ಇದರಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಟ್ವಿಟರ್​ ಬೆಂಬಲಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಟ್ವಿಟರ್​​​ಗೆ ಜೂಕರ್​​ಬರ್ಗ್​ ಸೆಡ್ಡು... ಕೇವಲ 3 ದಿನದಲ್ಲಿ 7 ಕೋಟಿ ಜನರಿಂದ ಥ್ರೆಡ್ಸ್​​ ಆ್ಯಪ್​​​​​​​​​​ ಸೈನ್​​ಅಪ್!​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.