ETV Bharat / science-and-technology

ಚಂದ್ರಯಾನ 3 ಮಿಷನ್​ ಯಶಸ್ಸು ಅದ್ಭುತ, ಅತ್ಯುತ್ತಮ: ಸ್ವೀಡಿಷ್ ಗಗನಯಾತ್ರಿ

author img

By ETV Bharat Karnataka Team

Published : Dec 9, 2023, 7:04 AM IST

Swedish Astronaut calls Chandrayaan-3 success 'amazing
ಚಂದ್ರಯಾನ 3 ಮಿಷನ್​ ಯಶಸ್ಸು ಅದ್ಭುತ, ಅತ್ಯುತ್ತಮ: ಸ್ವೀಡಿಷ್ ಗಗನಯಾತ್ರಿ

Swedish Astronaut calls Chandrayaan-3 success 'amazing: ಚಂದ್ರಯಾನ 3 ಮಿಷನ್​ ಯಶಸ್ಸು ಅದ್ಭುತ, ಅತ್ಯುತ್ತಮವಾಗಿದೆ ಎಂದು ಸ್ವೀಡಿಷ್ ಗಗನಯಾತ್ರಿ ಕ್ರಿಸ್ಟರ್ ಫುಗ್ಲೆಸಾಂಗ್ ಹೊಗಳಿದ್ದಾರೆ.

ನವದೆಹಲಿ: ಚಂದ್ರಯಾನ-3 ರ ಯಶಸ್ಸನ್ನು 'ಅದ್ಭುತ ಮತ್ತು ಅತ್ಯುತ್ತಮ' ಎಂದು ಕರೆದ ಸ್ವೀಡಿಷ್ ಗಗನಯಾತ್ರಿ ಕ್ರಿಸ್ಟರ್ ಫುಗ್ಲೆಸಾಂಗ್ ಅವರು, ''ಮುಂದಿನ ಭಾರತೀಯ ಮಿಷನ್‌ಗಾಗಿ ಎದುರು ನೋಡುತ್ತಿದ್ದೇನೆ'' ಎಂದು ಹೇಳಿದರು.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಫುಗ್ಲೆಸಾಂಗ್ ಅವರು, ಚಂದ್ರಯಾನ-3 ಯಶಸ್ಸಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, "ವಿಕ್ರಮ್ ಲ್ಯಾಂಡರ್‌ನ ಲ್ಯಾಂಡಿಂಗ್ ಮತ್ತು ರೋವರ್ ತುಂಬಾ ಅದ್ಭುತವಾಗಿದೆ ಎಂದು ನಾನು ಭಾವಿಸಿದ್ದೇನೆ. ಅದು ನಿಜವಾಗಿಯೂ ಅದ್ಭುತವಾಗಿದೆ. ಇಸ್ರೋ ಕಾರ್ಯಕ್ಕೆ ಇಡೀ ಜಗತ್ತು ಶ್ಲಾಘಿಸುತ್ತಿದೆ. ನಾನು ತುಂಬಾ ಉತ್ಸುಕನಾಗಿದ್ದೇನೆ. ಅದೇ ರೀತಿಯ ಮುಂದಿನ ಭಾರತೀಯ ಮಿಷನ್‌ಗಾಗಿ ಎದುರು ನೋಡುತ್ತಿದ್ದೇನೆ. ಗಗನಯಾತ್ರಿಯಾಗಿ, ನಾನು ಭಾರತೀಯ ರಾಕೆಟ್ ಮತ್ತು ಭಾರತೀಯ ಕ್ಯಾಪ್ಸುಲ್‌ನಲ್ಲಿ ಭಾರತೀಯ ಗಗನಯಾತ್ರಿಗಳೊಂದಿಗೆ ಗಗನ್​ಯಾನ್​ನಲ್ಲಿ ಹಾರಾಟ ಮಾಡಲು ಬಯಸುತ್ತೇವೆ'' ಎಂದು ಅವರು ತಿಳಿಸಿದ್ದಾರೆ.

ಆಗಸ್ಟ್ 23 ರಂದು ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ಭಾರತವು ಐತಿಹಾಸಿಕ ಸಾಧನೆ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಚಂದ್ರ ಮೇಲೆ ಇಳಿದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್, ಸುಮಾರು 14 ದಿನಗಳ ಕಾಲ ಚಂದ್ರನ ಮೇಲ್ಮೈಯಲ್ಲಿ ಹಲವು ಕಾರ್ಯಗಳನ್ನು ನಿರ್ವಹಿಸಿದವು.

ಬಾಹ್ಯಾಕಾಶ ಸುಸ್ಥಿರತೆ: ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವೀಡನ್ ಮತ್ತು ಭಾರತ ಒಟ್ಟಿಗೆ ಕೆಲಸ ಮಾಡಲು ಸಾಕಷ್ಟು ಸಾಧ್ಯತೆಗಳಿವೆ ಎಂದು ಕ್ರಿಸ್ಟರ್ ಫುಗ್ಲೆಸಾಂಗ್ ತಿಳಿಸಿದರು. ಸ್ವೀಡಿಷ್ ಬಾಹ್ಯಾಕಾಶ ಸಂಸ್ಥೆಯು ಬಾಹ್ಯಾಕಾಶದ ಸುಸ್ಥಿರ ಬಳಕೆಗಾಗಿ ಸೇವೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದರಿಂದ ಎರಡೂ ದೇಶಗಳಿಗೆ ಪರಸ್ಪರ ಆಸಕ್ತಿ ಹೆಚ್ಚಾಗಲಿದೆ ಎಂದ ಅವರು, 'ಬಾಹ್ಯಾಕಾಶ ಸುಸ್ಥಿರತೆ' ಮತ್ತು ಹವಾಮಾನ ಸವಾಲುಗಳನ್ನು ಎದುರಿಸುವಲ್ಲಿ ಬಾಹ್ಯಾಕಾಶ ಪರಿಶೋಧನೆಯ ಪ್ರಮುಖ ಪಾತ್ರದ ಬಗ್ಗೆ ಮಾತನಾಡಿದರು.

ಭಾರತ- ಸ್ವೀಡಿಷ್ ಬಾಹ್ಯಾಕಾಶ ಒಪ್ಪಂದದ ಕುರಿತು ಪ್ರಸ್ತಾಪ: ಭಾರತ-ಸ್ವೀಡನ್ ಬಾಹ್ಯಾಕಾಶ ಸಹಯೋಗದ ಕುರಿತು ಪ್ರತಿಕ್ರಿಯಿಸಿದ ಅವರು, "ನಾವು ಒಟ್ಟಿಗೆ ಕೆಲಸ ಮಾಡಲು ಸಾಕಷ್ಟು ಸಾಧ್ಯತೆಗಳಿವೆ ಎಂದು ನಾನು ಭಾವಿಸುತ್ತೇನೆ. ಸ್ವೀಡನ್ ದೊಡ್ಡ ದೇಶವಲ್ಲ. ಆದರೆ, ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ ತಾಂತ್ರಿಕ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಜೊತೆಗೆ ಕೆಲಸ ಮಾಡುವ ಮೂಲಕ, ಭಾರತದಿಂದ ಅನುಭವ ಸೇರಿದಂತೆ ಎಲ್ಲವನ್ನೂ ನಾವು ಕಲಿಯಲು ಸಾಧ್ಯವಾಗುತ್ತದೆ. ಆದ್ದರಿಂದ, ನಾವು ಒಟ್ಟಿಗೆ ಕೆಲಸ ಮಾಡಲು ಹೆಚ್ಚಿನ ಉತ್ಸುಕರಾಗಿದ್ದೇವೆ. ಭಾರತ ಮತ್ತು ಸ್ವೀಡಿಷ್ ಸ್ಪೇಸ್ ಸೆಂಟರ್ ಆಫ್ ಎಕ್ಸಲೆನ್ಸ್ 35 ವರ್ಷಗಳಿಂದ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪಾಲುದಾರನಾಗಿದೆ. ಈ ಕುರಿತಂತೆ 1986ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಒಟ್ಟಾಗಿ ಕೆಲಸ ಮಾಡು ಸಹಕಾರಿಯಾಗಿದೆ ಎಂದು ಅವರು ವಿವರಿಸಿದರು.

ಭಾರತ ಮತ್ತು ಸ್ವೀಡನ್ ನಡುವಿನ 75 ವರ್ಷಗಳ ರಾಜತಾಂತ್ರಿಕ ಸಂಬಂಧಗಳ ಆಚರಣೆಯಲ್ಲಿ ಕ್ರಿಸ್ಟರ್ ಫುಗ್ಲೆಸಾಂಗ್ ಭಾಗವಹಿಸಿದ್ದರು. ಭಾರತ ಮತ್ತು ಸ್ವೀಡನ್ ನಡುವಿನ 75 ವರ್ಷಗಳ ರಾಜತಾಂತ್ರಿಕ ಸಂಬಂಧ ಆಚರಿಸಲು ಭಾರತದಲ್ಲಿನ ಸ್ವೀಡನ್ ರಾಯಭಾರಿ ಜಾನ್ ಥೆಸ್ಲೆಫ್ ಶುಕ್ರವಾರ ತಮ್ಮ ನಿವಾಸದಲ್ಲಿ ಸ್ವಾಗತ ಕಾರ್ಯಕ್ರಮ ಏರ್ಪಡಿಸಿದ್ದರು.

ಫುಗ್ಲೆಸಾಂಗ್ ಅವರು ಕೆಟಿಹೆಚ್​ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಗಗನಯಾತ್ರಿ ಮತ್ತು ಪ್ರಾಧ್ಯಾಪಕರಾಗಿದ್ದು, ಸಾಬ್‌ಗೆ ಬಾಹ್ಯಾಕಾಶ ಸಲಹೆಗಾರರಾಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದಾರೆ. ಅವರು ಸ್ಟಾಕ್‌ಹೋಮ್ ವಿಶ್ವವಿದ್ಯಾನಿಲಯದಿಂದ ಪ್ರಾಯೋಗಿಕ ಕಣ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದುಕೊಂಡಿದ್ದಾರೆ. ಜೊತೆಗೆ ಸಿಇಆರ್​ಎನ್​ ಮತ್ತು ಇಎಸ್​ಎಗಾಗಿ ಕೆಲಸ ಮಾಡಿದ್ದಾರೆ. ಭಾರತಕ್ಕೆ ಭೇಟಿ ಸಂದರ್ಭದಲ್ಲಿ ಅವರು, ಬಾಹ್ಯಾಕಾಶ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಇಸ್ರೋ ಮತ್ತು ಅದರ ಇನ್-ಸ್ಪೇಸ್ ತಂಡವನ್ನು ಭೇಟಿ ಮಾಡಲಿದ್ದಾರೆ.

ಇದನ್ನೂ ಓದಿ: ಜ.20ರಂದು ಚಂದ್ರನ ಮೇಲೆ ಇಳಿಯಲಿದೆ ಜಪಾನ್​ನ SLIM ಗಗನನೌಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.