ETV Bharat / opinion

ಸೈಬರ್ ಕ್ರೈಂ ಬೆದರಿಕೆ: ಕೇಂದ್ರ, ರಾಜ್ಯ ಸರ್ಕಾರಗಳ ನಡುವೆ ಅಚಲವಾದ ಸಮನ್ವಯತೆ ಅಗತ್ಯ

author img

By ETV Bharat Karnataka Team

Published : Oct 21, 2023, 5:01 PM IST

Etv Bharat
Etv Bharat

ಜಾಗತಿಕವಾಗಿ ಒಂದು ವರ್ಷದಲ್ಲಿ ಸೈಬರ್ ಅಪರಾಧಕ್ಕೆ ಬಲಿಯಾದ 35 ಕೋಟಿ ಜನರಲ್ಲಿ 13 ಕೋಟಿ ಭಾರತೀಯರು ಎಂದು ಅಧ್ಯಯನಗಳು ಹೇಳಿವೆ. ಇಂತಹ ಸೈಬರ್​ ಅಪರಾಧಗಳ ಬೆದರಿಕೆಯನ್ನು ಪರಿಣಾಮಕಾರಿಯಾಗಿ ಮಟ್ಟಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಅಚಲವಾದ ಸಮನ್ವಯತೆಯ ಅಗತ್ಯವಿದೆ. ಸಂಪೂರ್ಣ ಸಹಕಾರದ ಮೂಲಕ ಮಾತ್ರವೇ ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧವನ್ನು ನಿಯಂತ್ರಿಸಲು ಸಾಧ್ಯ.

ಭವಿಷ್ಯದಲ್ಲಿ ಸೈಬರ್​ ಅಪರಾಧಗಳು ಹೆಚ್ಚಾಗುವುದರಿಂದ ದೇಶಕ್ಕೆ ಕಠಿಣ ಸವಾಲಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಸಿದ್ದಾರೆ. ದೇಶದೆಲ್ಲೆಡೆ ಸೈಬರ್​ ಕ್ರಿಮಿನಲ್​ಗಳ ಹಾವಳಿಯ ಪರಿಸ್ಥಿತಿ ಭವಿಷ್ಯದಲ್ಲಲ್ಲ, ವರ್ತಮಾನದಲ್ಲೇ ತಲೆದೂರಿದೆ ಎಂಬುದಕ್ಕೆ ಇದೇ ಪ್ರತ್ಯಕ್ಷ ಸಾಕ್ಷಿ.

ಕಳೆದ ವರ್ಷ ಕೇಂದ್ರೀಯ ತನಿಖಾ ದಳ (ಸಿಬಿಐ) ಸೈಬರ್ ಅಪರಾಧಿಗಳನ್ನು ಗುರಿಯಾಗಿಸಿಕೊಂಡೇ 'ಆಪರೇಷನ್ ಚಕ್ರ' ಎಂಬ ಹೆಸರಿನಲ್ಲಿ ದೇಶಾದ್ಯಂತ 115 ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಿತ್ತು. ಆ ಸಮಯದಲ್ಲಿ ರಾಜಸ್ಥಾನದಲ್ಲಿ ಒಂದೂವರೆ ಕೋಟಿ ರೂಪಾಯಿ ನಗದು ಹಾಗೂ ಅರ್ಧ ಕೆಜಿ ಚಿನ್ನಾಭರಣ ಪತ್ತೆಯಾಗಿದೆ ಎಂದು ವರದಿಯಾಗಿತ್ತು. ತದನಂತರ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ 100 ಕೋಟಿ ರೂ. ಸುಲಿಗೆ ಮಾಡಿದ್ದ ಗ್ಯಾಂಗ್​ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದಲ್ಲದೇ ಭಾರತದಲ್ಲಿ ಕೆಲವರು ದೊಡ್ಡ ಯೋಜನೆಗಳನ್ನು ರೂಪಿಸುತ್ತಿದ್ದು, ವಿದೇಶಿಯರನ್ನು ಗುರಿಯಾಗಿಸಿ ವಂಚನೆ ಮಾಡುತ್ತಿದ್ದಾರೆ ಎಂಬ ಅಮೆಜಾನ್ ಮತ್ತು ಮೈಕ್ರೋಸಾಫ್ಟ್‌ನಂತಹ ಜಾಗತಿಕ ಟೆಕ್ ದೈತ್ಯರ ವರದಿಗಳು ಸೈಬರ್​ ಕಳ್ಳರ ದಾಳಿಯನ್ನು ನಿರೂಪಿಸುವಂತಿದೆ. ಇಂಟರ್‌ಪೋಲ್​, ಎಫ್‌ಬಿಐ, ರಾಯಲ್ ಕೆನಡಿಯನ್ ಪೊಲೀಸ್, ಆಸ್ಟ್ರೇಲಿಯನ್​ ಫೆಡರಲ್​ ಪೊಲೀಸ್​ ಮುಂತಾದ ಸಂಸ್ಥೆಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಸಿಬಿಐನ 'ಆಪರೇಷನ್ ಚಕ್ರ-2' ಆರ್ಥಿಕ ವಂಚನೆಗಳ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ.

ಈ ಕಾರ್ಯಾಚರಣೆಯ ಭಾಗವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಹತ್ತು ರಾಜ್ಯಗಳಲ್ಲಿ ನಡೆದ ದಾಳಿಗಳು ಅಪರಾಧಿಗಳ ಜಾಲದ ವ್ಯಾಪ್ತಿಯನ್ನೂ ಪ್ರತಿಬಿಂಬಿಸುತ್ತವೆ. ಮೊದಲ ಬಾರಿಗೆ ಒಂದು ವರ್ಷದ ಹಿಂದೆ ಪುಣೆ ಮತ್ತು ಅಹಮದಾಬಾದ್‌ನಲ್ಲಿ ನಡೆಸಲಾಗಿದ್ದ ದಾಳಿಗಳು, ಸೈಬರ್​ ಕಾಟಕ್ಕೆ ಬಲಿಯಾದವರು ಮುಖ್ಯವಾಗಿ ಅಮೆರಿಕ ಮತ್ತು ಬ್ರಿಟನ್​ ಪ್ರಜೆಗಳು ಎಂದು ಬಹಿರಂಗಪಡಿಸಿದ್ದವು. ಈ ಬಾರಿ ಸಿಂಗಾಪುರ, ಜರ್ಮನಿ, ಕೆನಡಾ, ಆಸ್ಟ್ರೇಲಿಯಾ ಪೊಲೀಸ್ ಇಲಾಖೆಗಳಿಂದ ಸಿಕ್ಕಿರುವ ಪ್ರಮುಖ ಮಾಹಿತಿಗಳು, ಸೈಬರ್ ಗ್ಯಾಂಗ್​ಗಳ ವ್ಯಾಪ್ತಿ ಎಷ್ಟರ ಮಟ್ಟಿಗೆ ವಿಸ್ತಾರಗೊಳ್ಳುತ್ತಿದೆ ಎಂದು ಹೇಳುತ್ತಿವೆ. ದೇಶದಲ್ಲಿ ಸೈಬರ್​ ಅಪರಾಧಿಗಳ ದುಷ್ಕೃತ್ಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತರುತ್ತಿವೆ.

ಇದನ್ನೂ ಓದಿ: ಜನರೇ ಎಚ್ಚರ.. ವಂಚಿಸಲೆಂದೇ 27 ವಿವಿಧ ವೇದಿಕೆಗಳನ್ನು ಬಳಸುತ್ತಿರುವ ಸೈಬರ್ ಕ್ರಿಮಿನಲ್‌ಗಳು: ಉದ್ಯೋಗದ ಹೆಸರಲ್ಲೇ ಹೆಚ್ಚು ಮೋಸ

ಸೈಬರ್ ಅಪರಾಧಗಳ ಕುರಿತು ಕಾನ್ಪುರದ ಐಐಟಿ ನಡೆಸಿದ ಅಧ್ಯಯನವು ಆಘಾತಕಾರಿ ಅಂಶಗಳನ್ನು ಬಹಿರಂಗ ಪಡಿಸಿದೆ. 2023ರ ಜೂನ್​​ನವರೆಗೆ ಒಟ್ಟು ಸೈಬರ್ ಅಪರಾಧಗಳ ಪೈಕಿ ಶೇ.75ರಷ್ಟು ಆರ್ಥಿಕ ವಂಚನೆಗೆ ಸಂಬಂಧಿಸಿವೆ. ಅವುಗಳಲ್ಲಿ ಅರ್ಧದಷ್ಟು ಯುಪಿಐ ಹಾಗೂ ಆನ್‌ಲೈನ್​ ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ಪ್ರಕರಣಗಳಾಗಿವೆ ಎಂದು ಈ ಅಧ್ಯಯನ ತಿಳಿಸಿದೆ. ಈ ಅಂಕಿ - ಅಂಶಗಳ ವಿವರಗಳು ಹೇಗೆ ಅದೃಶ್ಯ ವಂಚಕರು ಸ್ಮಾರ್ಟ್‌ಫೋನ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ಆನ್‌ಲೈನ್ ವಹಿವಾಟುಗಳಿಗೆ ವೇದಿಕೆಯಾಗಿ ಬಳಸಲಾಗುತ್ತಿದೆ ಎಂಬುದನ್ನೂ ತೋರಿಸುತ್ತವೆ.

ಒಂಬತ್ತು ರಾಜ್ಯಗಳ 36 ಪ್ರದೇಶಗಳನ್ನು ಸೈಬರ್ ಅಪರಾಧಿಗಳ ಕೇಂದ್ರಗಳಾಗಿವೆ ಎಂದೂ ಈ ಅಧ್ಯಯನ ಹೇಳಿದೆ. ಇದರಲ್ಲಿ ಅಜಂಗಢ, ಅಹಮದಾಬಾದ್, ಸೂರತ್, ಭರತ್‌ಪುರ, ಚಿತ್ತೂರು ಸೇರಿವೆ. ಹರಿಯಾಣದ ನೂಹ್ ಪ್ರದೇಶವು ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದು, ಆರು ತಿಂಗಳಲ್ಲಿ ಸಾಕಷ್ಟು ಸುದ್ದಿ ಮಾಡಿದೆ. ಇದೇ ಸಮಯದಲ್ಲಿ ಹರಿಯಾಣದ ವಿವಿಧ ಭಾಗಗಳಿಂದ ಸುಮಾರು ಐದು ಸಾವಿರ ಪೊಲೀಸರ ವಿಶೇಷ ಕಾರ್ಯಾಚರಣೆಯು 65 ಮಂದಿ ಉಗ್ರರು ಸೇರಿದಂತೆ 125 ಜನರನ್ನು ಬಂಧಿಸಲು ಕಾರಣವಾಗಿದೆ. ಈ ಸಂಘಟಿತ ತಂಡಗಳು ದೇಶಾದ್ಯಂತ 28 ಸಾವಿರ ಸೈಬರ್ ಕ್ರೈಂಗಳಲ್ಲಿ 100 ಕೋಟಿ ರೂ.ಗೂ ಹೆಚ್ಚು ಲೂಟಿ ಮಾಡಿವೆ.

ಜಾಗತಿಕವಾಗಿ ಒಂದು ವರ್ಷದಲ್ಲಿ ಸೈಬರ್ ಅಪರಾಧಕ್ಕೆ ಬಲಿಯಾದ 35 ಕೋಟಿ ಜನರಲ್ಲಿ 13 ಕೋಟಿ ಭಾರತೀಯರು ಎಂದು ಈ ಹಿಂದಿನ ಅಧ್ಯಯನವೊಂದು ಹೇಳಿತ್ತು. ಕೇಂದ್ರ ಸರ್ಕಾರವು ಮೂರು ವರ್ಷಗಳ ಹಿಂದೆ ರಾಷ್ಟ್ರೀಯ ಸೈಬರ್ ಕ್ರೈಂ ರಿಪೋರ್ಟಿಂಗ್​ ಪೋರ್ಟಲ್ (ಎನ್‌ಸಿಸಿಆರ್‌ಪಿ) ವ್ಯವಸ್ಥೆಯನ್ನು ಜಾರಿ ಮಾಡಿದೆ. ಇದರಿಂದಾಗಿ ಜನರು ತಮ್ಮ ಮನೆಗಳಿಂದಲೇ ಸೈಬರ್ ಬೆದರಿಕೆಗಳ ಬಗ್ಗೆ ದೂರುಗಳನ್ನು ಸಲ್ಲಿಸಬಹುದು. ಆದರೆ, ಈ ಪೋರ್ಟಲ್‌ಗೆ ಬಂದ ದೂರುಗಳಿಗೆ ಸಂಬಂಧಿಸಿದಂತೆ 27 ರಾಜ್ಯಗಳಲ್ಲಿ ಶೇ.1ರಷ್ಟು ಕೂಡ ಎಫ್​ಐಆರ್​ಗಳು ದಾಖಲಾಗಿಲ್ಲ. ಇದು ಪೊಲೀಸ್ ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯ ತೋರಿಸುತ್ತಿದೆ.

ಸೈಬರ್​ ಕಳ್ಳರ ಅಬ್ಬರವು ದೇಶೀಯವಾಗಿ ಅನೇಕ ನಾಗರಿಕರನ್ನು ಬಲಿಪಶುಗಳನ್ನಾಗಿ ಮಾಡುತ್ತಿದೆ. ಅಲ್ಲದೇ, ಜಾಗತಿಕ ಮಟ್ಟದಲ್ಲಿ ದೇಶದ ಖ್ಯಾತಿಯ ಮೇಲೆ ಕರಿನೆರಳು ಬೀರುತ್ತದೆ. ಈ ಅಪಾಯವನ್ನು ಪರಿಣಾಮಕಾರಿಯಾಗಿ ಮಟ್ಟಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಅಚಲವಾದ ಸಮನ್ವಯತೆಯ ಅಗತ್ಯವಿದೆ. ಅಂತಹ ಸಮಗ್ರ ಸಹಕಾರದ ಮೂಲಕ ಮಾತ್ರವೇ ಭಾರತವು ತನ್ನ ಗಡಿಯೊಳಗೆ ಬೆಳೆಯುತ್ತಿರುವ ಸೈಬರ್ ಅಪರಾಧದ ಬೆದರಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ.

ಇದನ್ನೂ ಓದಿ: ತೃಪ್ತ ರೈತನೇ ಸಮೃದ್ಧ ರಾಷ್ಟ್ರದ ತಳಹದಿ.. ಇದೆಲ್ಲ ರೈತ ಹಸಿರಾಗಿದ್ದರೆ ಮಾತ್ರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.