ETV Bharat / international

ಮಿಸ್ಸಿಸ್ಸಿಪ್ಪಿ ಶೂಟೌಟ್: 6 ಮಂದಿ ಬಲಿ, ಶಂಕಿತ ಪೊಲೀಸ್​ ವಶಕ್ಕೆ

author img

By

Published : Feb 18, 2023, 7:03 AM IST

Representative image
ಗುಂಡಿನ ದಾಳಿ

ಅಮೆರಿಕದಲ್ಲಿ ಪಿಸ್ತೂಲು ಸಂಸ್ಕೃತಿಯ ಮೇಲೆ ನಿರ್ಬಂಧ ಹೇರಿದಾಗ್ಯೂ, ಮಿಸ್ಸಿಸ್ಸಿಪ್ಪಿ ಪಟ್ಟಣದಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ 6 ಮಂದಿ ಬಲಿಯಾಗಿದ್ದು, ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅರ್ಕಾಬುಟ್ಲಾ (ಯುಎಸ್): ಟೆನ್ನೆಸ್ಸೀ ಬಳಿಯ ಮಿಸ್ಸಿಸ್ಸಿಪ್ಪಿ ಪಟ್ಟಣದಲ್ಲಿ ಶುಕ್ರವಾರ ಹಂತಕನೋರ್ವ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಆರು ಜನರು ಸಾವನಪ್ಪಿದ್ದಾರೆ. ಶಂಕಿತ ಆರೋಪಿಯನ್ನು ಪೊಲೀಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ರಿಚರ್ಡ್ ಡೇಲ್ ಕ್ರೂಮ್(52) ಶಂಕಿತ ಆರೋಪಿ. ಮಿಸ್ಸಿಸ್ಸಿಪ್ಪಿ ಸಾರ್ವಜನಿಕ ಸುರಕ್ಷತೆ ಇಲಾಖೆ ವಕ್ತಾರ ಬೈಲಿ ಮಾರ್ಟಿನ್ ಅವರು ಅರ್ಕಾಬುಟ್ಲಾದಲ್ಲಿ ನಡೆದ ಹತ್ಯೆಗಳನ್ನು ದೃಢಪಡಿಸಿದ್ದಾರೆ. ಕೌಂಟಿ ಶೆರಿಫ್ ಬ್ರಾಡ್ ಲ್ಯಾನ್ಸ್ ಸ್ಥಳೀಯ ಸುದ್ದಿವಾಹಿನಿಗಳಿಗೆ ಅಂಗಡಿ ಮತ್ತು ಎರಡು ಮನೆಗಳಲ್ಲಿ ಹತ್ಯೆಗಳು ಸಂಭವಿಸಿವೆ ಎಂದು ಹೇಳಿದರು. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸ್ಥಳೀಯರು ಹೇಳುವುದೇನು?: ಗುಂಡಿನ ದಾಳಿ ನಡೆಸಿದ ಶಂಕಿತನನ್ನು ಬಂಧಿಸಲಾಗಿದೆ ಎಂದು ಗವರ್ನರ್ ಟೇಟ್ ರೀವ್ಸ್ ಕಚೇರಿ ತಿಳಿಸಿದೆ. "ನಾನು ಮನೆಯಲ್ಲಿರುವಾಗ ಗುಂಡಿನ ಶಬ್ದ ಕೇಳಿಸಿತು. ನಾನು ಆಗಷ್ಟೇ ಎಚ್ಚರಗೊಂಡಿದ್ದೆ. ಅಲ್ಲಿ ಬಂದು ನೋಡಿದಾಗ ವ್ಯಕ್ತಿಯೋರ್ವ ‌ಗನ್‌ನೊಂದಿಗೆ ತೆರಳುತ್ತಿದ್ದ. ಬಳಿಕ ನಾನು ಗುಂಡಿನ ದಾಳಿ ನಡೆದ ಸ್ಥಳಕ್ಕೆ ಹೋಗಿ ನೋಡಿದೆ. ದಾಳಿಗೊಳಗಾದ ವ್ಯಕ್ತಿಯ ನಾಡಿಮಿಡಿತವನ್ನು ಪರಿಶೀಲಿಸಿದೆ. ಆದರೆ ಅವರು ಮೃತಪಟ್ಟಿದ್ದರು" ಎಂದು ಅಂಗಡಿಯ ಬಳಿ ವಾಸಿಸುವ ಎಥಾನ್ ಕ್ಯಾಶ್ ಎಂಬುವವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೋಲ್ಡ್‌ವಾಟರ್ ಎಲಿಮೆಂಟರಿ ಸ್ಕೂಲ್ ಫೇಸ್‌ಬುಕ್ ಪುಟದ ಪ್ರಕಾರ, ಶಂಕಿತನನ್ನು ಹುಡುಕುತ್ತಿರುವಾಗ ಹತ್ತಿರದ ಕೋಲ್ಡ್‌ವಾಟರ್‌ನಲ್ಲಿರುವ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳನ್ನು ಲಾಕ್‌ ಮಾಡಲಾಗಿತ್ತು. ಸ್ವಲ್ಪ ಸಮಯದ ನಂತರ ಲಾಕ್‌ ತೆಗೆಯಲಾಯಿತು. ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಾಮೂಹಿಕ ಹತ್ಯೆ: ಅರ್ಕಾಬುಟ್ಲಾದಲ್ಲಿ ಎರಡು ಸಣ್ಣ ಸಮುದಾಯಗಳಾಗಿವೆ. ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ ಕಳೆದ ಮೂರು ವಾರಗಳ ಅವಧಿಯಲ್ಲಿ ಅಂದರೆ ಜನವರಿ 23 ರಿಂದ ಯುಎಸ್‌ನಲ್ಲಿ ನಡೆದ ಮೊದಲ ಸಾಮೂಹಿಕ ಹತ್ಯೆ ಪ್ರಕರಣ ಇದಾಗಿದೆ. ಘಟನೆಯಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ. ಆಲ್ಕೋಹಾಲ್, ತಂಬಾಕು, ಬಂದೂಕುಗಳು ಮತ್ತು ಸ್ಫೋಟಕಗಳ ಬ್ಯೂರೋ ತನ್ನ ಏಜೆಂಟರು ಶೆರಿಫ್ ಇಲಾಖೆ ಮತ್ತು ರಾಜ್ಯ ತನಿಖಾಧಿಕಾರಿಗಳಿಗೆ ನೆರವು ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

ಅರ್ಕಾಬುಟ್ಲಾ ಟೆನ್ನೆಸ್ಸೀಯ ಮೆಂಫಿಸ್‌ನ ದಕ್ಷಿಣಕ್ಕೆ ಸುಮಾರು 50 ಕಿಲೋ ಮೀಟರ್ ದೂರದಲ್ಲಿದೆ. 2020ರ ಜನಗಣತಿಯ ಪ್ರಕಾರ 285 ನಿವಾಸಿಗಳಿಗೆ ನೆಲೆಯಾಗಿದೆ. ಸಮೀಪದ ಅರ್ಕಾಬುಟ್ಲಾ ಸರೋವರವು ಜನಪ್ರಿಯ ಮೀನುಗಾರಿಕೆ ಮತ್ತು ಮನರಂಜನಾ ತಾಣವಾಗಿದೆ.

ಇದನ್ನೂ ಓದಿ: New Year Firing: ಹೊಸ ವರ್ಷಾಚರಣೆ ವೇಳೆ ಶೂಟೌಟ್: ನಾಲ್ವರ ದುರ್ಮರಣ, ಹಲವರಿಗೆ ಗಾಯ

ಗುಂಡೇಟಿಗೆ ಮೂವರು ಬಲಿ: ಅಮೆರಿಕದಲ್ಲಿ ಪಿಸ್ತೂಲು ಸಂಸ್ಕೃತಿಯ ಮೇಲೆ ನಿರ್ಬಂಧ ಹೇರಿದಾಗ್ಯೂ, ಇತ್ತೀಚೆಗೆ ಗುಂಡಿನ ದಾಳಿ ನಡೆದಿತ್ತು. ವರ್ಜೀನಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಬಂದೂಕುಧಾರಿ ವಿದ್ಯಾರ್ಥಿಯೊಬ್ಬ ಗುಂಡಿನ ಮಳೆಗರೆದು ಪರಾರಿಯಾಗಿದ್ದ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಅಸುನೀಗಿದ್ದು, ಇಬ್ಬರು ತೀವ್ರ ಗಾಯಗೊಂಡಿದ್ದರು.

ಇದನ್ನೂ ಓದಿ: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ.. ವರ್ಜೀನಿಯಾ ವಿವಿ ವಿದ್ಯಾರ್ಥಿ ಗುಂಡೇಟಿಗೆ ಮೂವರು ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.