ETV Bharat / international

ಹಿಂದೂ ಮಹಾಸಾಗರದಲ್ಲಿ ರಾಸಾಯನಿಕ ಟ್ಯಾಂಕರ್ ಮೇಲೆ ಇರಾನ್ ಕ್ಷಿಪಣಿ ದಾಳಿ

author img

By ETV Bharat Karnataka Team

Published : Dec 25, 2023, 12:53 PM IST

Iranian drone struck chemical tanker in Indian Ocean
Iranian drone struck chemical tanker in Indian Ocean

ಹಿಂದೂ ಮಹಾಸಾಗರದಲ್ಲಿ ರಾಸಾಯನಿಕ ಸಾಗಿಸುತ್ತಿದ್ದ ಹಡಗೊಂದರ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ.

ವಾಷಿಂಗ್ಟನ್ : ಹಿಂದೂ ಮಹಾಸಾಗರದಲ್ಲಿ ಪ್ರಯಾಣಿಸುತ್ತಿದ್ದ ರಾಸಾಯನಿಕ ಟ್ಯಾಂಕರ್ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2021ರಿಂದೀಚೆಗೆ ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸಿದ ಏಳನೇ ದಾಳಿ ಇದಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.

"ಲೈಬೀರಿಯಾ ಧ್ವಜ ಹೊಂದಿರುವ, ಜಪಾನಿನ ಒಡೆತನದ ಮತ್ತು ನೆದರ್ಲ್ಯಾಂಡ್ಸ್ ಚಾಲಿತ ರಾಸಾಯನಿಕ ಟ್ಯಾಂಕರ್ ಕೆಮ್ ಪ್ಲೂಟೊವನ್ನು ಸ್ಥಳೀಯ ಸಮಯ ಬೆಳಗ್ಗೆ 10 ಗಂಟೆಗೆ (ಗ್ರೀನ್ ವಿಚ್ ಸರಾಸರಿ ಸಮಯ ಬೆಳಗ್ಗೆ 6 ಗಂಟೆ) ಭಾರತದ ಕರಾವಳಿಯಿಂದ 200 ನಾಟಿಕಲ್ ಮೈಲಿ ದೂರದಲ್ಲಿರುವ ಹಿಂದೂ ಮಹಾಸಾಗರದಲ್ಲಿ ಇರಾನ್​ನಿಂದ ಹಾರಿಸಿದ ಏಕಮುಖ ದಾಳಿ ಡ್ರೋನ್​ನಿಂದ ಹೊಡೆದುರುಳಿಸಲಾಗಿದೆ" ಎಂದು ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಈ ದಾಳಿಯಿಂದ ಯಾವುದೇ ಸಾವು - ನೋವುಗಳು ಸಂಭವಿಸಿಲ್ಲ ಮತ್ತು ಟ್ಯಾಂಕರ್​ಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲಾಗಿದೆ" ಎಂದು ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ದಾಳಿ ನಡೆದಾಗ ಅಮೆರಿಕ ನೌಕಾಪಡೆ ಯಾವುದೇ ಹಡಗುಗಳು ಹತ್ತಿರದಲ್ಲಿರಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಯೆಮೆನ್​ನಲ್ಲಿರುವ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕಳೆದ ನಾಲ್ಕು ವಾರಗಳಲ್ಲಿ ಕೆಂಪು ಸಮುದ್ರದಲ್ಲಿ ಸಂಚರಿಸುವ ಸುಮಾರು ಒಂದು ಡಜನ್ ವಾಣಿಜ್ಯ ಮತ್ತು ವ್ಯಾಪಾರಿ ಹಡಗುಗಳ ಮೇಲೆ 100 ಕ್ಕೂ ಹೆಚ್ಚು ದಾಳಿ ಮಾಡಿದ್ದಾರೆ. ಅದರ ನಂತರ ಈಗ ಹಿಂದೂ ಮಹಾಸಾಗರದಲ್ಲಿ ಈ ದಾಳಿ ನಡೆದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಭಾರತದಲ್ಲಿನ ಇಸ್ರೇಲ್ ರಾಯಭಾರಿ ನಾವರ್ ಗಿಲಾನ್, "ಕೆಲ ದಿನಗಳ ಹಿಂದೆ ರೆವಲ್ಯೂಷನರಿ ಗಾರ್ಡ್ಸ್ ನ ಕಮಾಂಡರ್ ಮೊಹಮ್ಮದ್ ರೆಜಾ ನಖ್ದಿ ಮೆಡಿಟರೇನಿಯನ್ ಸಮುದ್ರ, ಜಿಬ್ರಾಲ್ಟರ್ ಮತ್ತು ಇತರ ಜಲಮಾರ್ಗಗಳನ್ನು ಬಂದ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ ಅಂತಾರಾಷ್ಟ್ರೀಯ ಹಡಗುಗಳ ಮೇಲೆ ಇರಾನ್ ಪ್ರಚೋದಿತ ದಾಳಿಯು ಆಶ್ಚರ್ಯ ತರುವಂಥದ್ದಲ್ಲ" ಎಂದು ಹೇಳಿದ್ದಾರೆ.

ಇರಾನ್ ತನ್ನ ಮಾರಕ ತಂತ್ರಗಳಿಂದ ಇಡೀ ಪ್ರದೇಶದ ಮೇಲೆ ಒತ್ತಡ ಉಂಟು ಮಾಡುತ್ತಿರುವುದು ಮಾತ್ರವಲ್ಲದೇ, ಈ ಪ್ರದೇಶದಲ್ಲಿ ಗಂಭೀರ ಅಸ್ಥಿರತೆಯನ್ನು ಸೃಷ್ಟಿಸುವ ಮೂಲಕ ಸೌದಿ ಅರೇಬಿಯಾ, ಜೋರ್ಡಾನ್ ಮತ್ತು ಯುಎಇಯಂತಹ ಸುನ್ನಿ ರಾಷ್ಟ್ರಗಳ ಆರ್ಥಿಕ ಹಿತಾಸಕ್ತಿಗಳನ್ನು ಕೂಡ ಹಾನಿಗೊಳಿಸುತ್ತಿದೆ. ಎಂವಿ ಚೆಮ್ ಪ್ಲೂಟೊ ಮೇಲಿನ ದಾಳಿಯು ಇಸ್ರೇಲ್​​ ವಿರುದ್ಧ ದ್ವೇಷ ಸಾಧಿಸಲು ಇರಾನ್ ಎಷ್ಟರ ಮಟ್ಟಿಗೆ ಹೋಗಬಹುದು ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ :ಸಾಮಾಜಿಕ ಮಾಧ್ಯಮ ತ್ಯಜಿಸಲಿದ್ದಾರೆ ಶೇ 50ಕ್ಕೂ ಹೆಚ್ಚು ಜನ; ಅಧ್ಯಯನ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.