ETV Bharat / international

ಚಾಟ್​ ಜಿಪಿಟಿ ರಚಿತ ಮಾಹಿತಿಯನ್ನು ಕೋರ್ಟ್​ ಮುಂದೆ ತರಕೂಡದು: ನ್ಯಾಯಾಲಯದ ಆದೇಶ

author img

By

Published : May 31, 2023, 12:13 PM IST

ನ್ಯಾಯಾಲಯದಲ್ಲಿ ಚಾಟ್​ಜಿಪಿಟಿಯಿಂದ ತಯಾರಿಸಿದ ಮಾಹಿತಿಯನ್ನು ತರಕೂಡದು ಎಂದು ಅಮೆರಿಕದ ನ್ಯಾಯಾಲಯವೊಂದು ಆದೇಶ ನೀಡಿದೆ.

US judge orders lawyers not to use ChatGPT-drafted content in court
US judge orders lawyers not to use ChatGPT-drafted content in court

ಸ್ಯಾನ್ ಫ್ರಾನ್ಸಿಸ್ಕೋ : ಚಾಟ್​ ಜಿಪಿಟಿ ಬಳಸಿ ಸೃಷ್ಟಿಸಲಾದ ಯಾವುದೇ ಮಾಹಿತಿಯನ್ನು ನ್ಯಾಯಾಲಯದ ಮುಂದೆ ತರಕೂಡದು ಎಂದು ಯುಎಸ್​ ಫೆಡರಲ್ ನ್ಯಾಯಾಧೀಶರೊಬ್ಬರು ವಕೀಲರಿಗೆ ಕಟ್ಟುನಿಟ್ಟಾದ ಆದೇಶ ನೀಡಿದ್ದಾರೆ. ತಮ್ಮ ನ್ಯಾಯಾಲಯದ ಮುಂದೆ ಇಡಲಾಗುವ ಫೈಲಿಂಗ್‌ನ ಯಾವುದೇ ಭಾಗವನ್ನು ಎಐ ಆಧರಿತ ಚಾಟ್​ ಜಿಪಿಟಿ ಬಳಸಿ ತಯಾರಿಸಲಾಗಿಲ್ಲ ಹಾಗೂ ಇದನ್ನು ಮಾನವರು ಪರಿಶೀಲನೆ ಮಾಡಿದ್ದಾರೆ ಎಂದು ದೃಢೀಕರಣ ದಾಖಲೆ ನೀಡಬೇಕೆಂದು ಟೆಕ್ಸಾಸ್ ಫೆಡರಲ್ ನ್ಯಾಯಾಧೀಶ ಬ್ರಾಂಟ್ಲಿ ಸ್ಟಾರ್ ಅವರು ವಕೀಲರಿಗೆ ಸೂಚಿಸಿದ್ದಾರೆ.

ಫೈಲಿಂಗ್‌ನ ಯಾವುದೇ ಭಾಗವನ್ನು ಕೃತಕ ಬುದ್ಧಿಮತ್ತೆಯಿಂದ (ಚಾಟ್‌ಜಿಪಿಟಿ, ಹಾರ್ವೆ.ಎಐ, ಅಥವಾ ಗೂಗಲ್ ಬಾರ್ಡ್) ರಚಿಸಲಾಗಿಲ್ಲ ಎಂದು ನ್ಯಾಯಾಲಯದ ಮುಂದೆ ಹಾಜರಾಗುವ ಎಲ್ಲಾ ವಕೀಲರು ದೃಢೀಕರಣ ಸಲ್ಲಿಸಬೇಕು ಅಥವಾ ಒಂದು ವೇಳೆ ಯಾವುದೇ ವಿಷಯವನ್ನು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾಗಿದ್ದರೆ ಅದನ್ನು ಮಾನವರಿಂದ ಪರಿಶೀಲನೆ ನಡೆಸಲಾಗಿದೆ ಎಂದು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಎಐ ಪ್ಲಾಟ್​ಫಾರ್ಮ್​ಗಳು ತುಂಬಾ ಪ್ರಬಲವಾಗಿವೆ. ಅವು ವಿಚ್ಛೇದನಗಳ ದಾಖಲೆಗಳನ್ನು ಸಿದ್ಧಪಡಿಸುವುದು, ಹುಡುಕಾಟದ ಮನವಿಗಳು, ದಾಖಲೆಗಳಲ್ಲಿ ಸೂಚಿಸಲಾದ ದೋಷಗಳು, ಮೌಖಿಕ ವಾದದಲ್ಲಿ ನಿರೀಕ್ಷಿತ ಪ್ರಶ್ನೆಗಳು ಹೀಗೆ ಕಾನೂನು ಕ್ಷೇತ್ರದಲ್ಲಿ ಅವು ಸಾಕಷ್ಟು ಸಹಾಯ ಮಾಡಬಹುದು. ಆದರೆ ಕಾನೂನು ಬ್ರೀಫಿಂಗ್​ಗಾಗಿ ಮಾತ್ರ ಅವನ್ನು ಬಳಸುವಂತಿಲ್ಲ. ಎಐ ಪ್ಲಾಟ್​ಫಾರ್ಮ್​ಗಳು ಈಗಿರುವ ರೀತಿಯಲ್ಲಿ ಭ್ರಮೆ ಮತ್ತು ಪಕ್ಷಪಾತಗಳಿಗೆ ಒಳಗಾಗುವ ಸಾಧ್ಯತೆಗಳಿವೆ. ಭ್ರಮೆಗಳನ್ನು ಆಧರಿಸಿ ಅವು ಉಲ್ಲೇಖಗಳನ್ನು ತಯಾರಿಸುತ್ತವೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಕಳೆದ ವಾರ, ಚಾಟ್‌ಜಿಪಿಟಿಯು ಕೊಲಂಬಿಯಾದ ವಿಮಾನಯಾನ ಸಂಸ್ಥೆ ಏವಿಯಾಂಕಾ ವಿರುದ್ಧದ ಪ್ರಕರಣದಲ್ಲಿ ಎಐ ಚಾಟ್‌ಬಾಟ್ ನೀಡಿದ ಉಲ್ಲೇಖಗಳು ನಿಜವೆಂದು ನಂಬಿದ ವಕೀಲರೊಬ್ಬರು ಮೂರ್ಖರಾಗಿದ್ದಾರೆ. ವಾಸ್ತವದಲ್ಲಿ ಅವು ಬೋಗಸ್ ಆಗಿದ್ದವು. ವಿಮಾನಯಾನ ಸಂಸ್ಥೆಯೊಂದರ ವಿರುದ್ಧ ಮೊಕದ್ದಮೆ ಹೂಡಿದ್ದ ವ್ಯಕ್ತಿಯೊಬ್ಬರನ್ನು ಪ್ರತಿನಿಧಿಸುವ ವಕೀಲ ಸ್ಟೀವನ್ ಎ. ಶ್ವಾರ್ಟ್ಜ್, ತಾನು ಮಾಹಿತಿಗಾಗಿ OpenAI ನ ಚಾಟ್‌ಬಾಟ್ ಅನ್ನು ಬಳಸಿದ್ದೇನೆ ಎಂದು ಅಫಿಡವಿಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಎದುರಾಳಿ ವಕೀಲರು ಅಸ್ತಿತ್ವದಲ್ಲಿಲ್ಲದ ಪ್ರಕರಣಗಳನ್ನು ಉಲ್ಲೇಖಿಸಿದ ನಂತರ ಇವನ್ನು ಪರಿಶೀಲಿಸಿದ ಯುಎಸ್ ಜಿಲ್ಲಾ ನ್ಯಾಯಾಧೀಶ ಕೆವಿನ್ ಕ್ಯಾಸ್ಟೆಲ್, ಆರೂ ಪ್ರಕರಣಗಳು ಬೋಗಸ್ ಉಲ್ಲೇಖಗಳು ಎಂದು ಹೇಳಿದ್ದಾರೆ. ಫಿರ್ಯಾದಿ ವಕೀಲರ ಮೇಲೆ ನಿರ್ಬಂಧಗಳನ್ನು ವಿಧಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮುಂದುವರೆಸಿದರು.

ಸಂಶೋಧನಾ ವರದಿಯೊಂದನ್ನು ತಯಾರಿಸುವ ಸಂದರ್ಭದಲ್ಲಿ, ಅಮೆರಿಕದ ತುಂಬಾ ಗೌರವಾನ್ವಿತ ಕಾನೂನು ಪ್ರಾಧ್ಯಾಪಕರೊಬ್ಬರು ಈ ಹಿಂದೆ ಕಾನೂನು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಚಾಟ್​ ಜಿಪಿಟಿ ಹೇಳಿತ್ತು. ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಕಾನೂನು ವಿಭಾಗದ ಮುಖ್ಯಸ್ಥ ಜೋನಾಥನ್ ಟರ್ಲಿ ಅವರು ತಮ್ಮ ವಿರುದ್ಧ ಚಾಟ್​ ಜಿಪಿಟಿ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದನ್ನು ಕಂಡು ಆಘಾತಕ್ಕೊಳಗಿದ್ದರು. ಚಾಟ್‌ಜಿಪಿಟಿ ಇತ್ತೀಚೆಗೆ ವಿದ್ಯಾರ್ಥಿಗಳ ಮೇಲೆ ನಾನು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಸುಳ್ಳು ಮಾಹಿತಿಯನ್ನು ನೀಡಿದೆ ಎಂದು ಟರ್ಲಿ ಟ್ವೀಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಲಾವಾ Agni-2 5G ಭಾರತದಲ್ಲಿ ಲಾಂಚ್​: ಬೆಲೆ ಎಷ್ಟು ಗೊತ್ತಾ?.. ಏನೇನು ಡಿಸ್ಕೌಂಟ್​ ತಿಳಿದುಕೊಳ್ಳಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.