ETV Bharat / international

5ನೇ ಬಾರಿಗೆ ಬಾಂಗ್ಲಾದೇಶದ ಪ್ರಧಾನಿಯಾಗಲಿರುವ ಶೇಖ್ ಹಸೀನಾ

author img

By PTI

Published : Jan 8, 2024, 7:18 AM IST

ಶೇಖ್ ಹಸೀನಾ
ಶೇಖ್ ಹಸೀನಾ

ಹಿಂಸಾಚಾರ ಮತ್ತು ಪ್ರಮುಖ ವಿರೋಧ ಪಕ್ಷ ಬಿಎನ್‌ಪಿ ಚುನಾವಣಾ ಬಹಿಷ್ಕಾರದ ನಡುವೆ ಬಾಂಗ್ಲಾದೇಶದಲ್ಲಿ ನಡೆದ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷ ಮೂರನೇ ಎರಡರಷ್ಟು ಸ್ಥಾನಗಳನ್ನು ಗಳಿಸಿದೆ. ಈ ಮೂಲಕ ಸತತ ನಾಲ್ಕನೇ ಬಾರಿಗೆ ಶೇಖ್ ಹಸೀನಾ ಪ್ರಧಾನಿಯಾಗಲಿದ್ದಾರೆ.

ಢಾಕಾ: ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇವರ ನೇತೃತ್ವದ ಅವಾಮಿ ಲೀಗ್ ಪಕ್ಷವು ಒಟ್ಟು 300 ಸ್ಥಾನಗಳ ಪೈಕಿ ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಶೇಖ್ ಹಸೀನಾ ಸತತ ನಾಲ್ಕನೇ ಬಾರಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಅವಾಮಿ ಲೀಗ್ 200 ಸಂಸದೀಯ ಸ್ಥಾನಗಳನ್ನು ಗೆದ್ದಿದೆ. ಆದರೆ, ಫಲಿತಾಂಶ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಮೂಲಗಳ ಪ್ರಕಾರ, ಪ್ರಧಾನಿ ತಮ್ಮ ಸಂಸದೀಯ ಕ್ಷೇತ್ರವಾದ ಗೋಪಾಲ್‌ಗಂಜ್-3ನಿಂದ ಭಾರಿ ಅಂತರದಿಂದ ಗೆದ್ದಿದ್ದಾರೆ. ಒಟ್ಟು 2,49,965 ಮತಗಳನ್ನು ಅವರು ಪಡೆದುಕೊಂಡಿದ್ದು, ಸಮೀಪದ ಪ್ರತಿಸ್ಪರ್ಧಿ ಎಂ.ನಿಜಾಮ್ ಉದ್ದೀನ್ ಲಷ್ಕರ್ ಕೇವಲ 469 ಮತಗಳನ್ನು ಪಡೆದಿದ್ದಾರೆ. ಶೇಖ್ ಹಸೀನಾ ಎಂಟನೇ ಬಾರಿಗೆ ಗೋಪಾಲಗಂಜ್-3 ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದರೊಂದಿಗೆ ಬಾಂಗ್ಲಾದೇಶದಲ್ಲಿ ಅತಿ ಹೆಚ್ಚು ಕಾಲ ಪ್ರಧಾನಿಯಾಗಿದ್ದ ದಾಖಲೆಯನ್ನೂ ಮಾಡಿದ್ದಾರೆ. 2009ರಿಂದ ಇವರು ಸತತವಾಗಿ ಪ್ರಧಾನಿಯಾಗಿದ್ದಾರೆ. ಇದಕ್ಕೂ ಮುನ್ನ 1991ರಿಂದ 1996ರವರೆಗೆ ಪ್ರಧಾನಿಯಾಗಿದ್ದರು.

2018ರಲ್ಲಿ ಬಾಂಗ್ಲಾದಲ್ಲಿ ನಡೆದ ಚುನಾವಣೆಯಲ್ಲಿ ದಾಖಲೆಯ ಶೇ.80ರಷ್ಟು ಮತದಾನವಾಗಿತ್ತು. ಆದರೆ, ಈ ಬಾರಿಯ ಸಾರ್ವತ್ರಿಕ ಚುನಾವಣೆಯನ್ನು ವಿರೋಧ ಪಕ್ಷಗಳು ಬಹಿಷ್ಕರಿಸಿದ್ದವು. ಇದರ ಪರಿಣಾಮ ಚುನಾವಣೆಯಲ್ಲಿ ಶೇ.40ರಷ್ಟು ಮತಗಳು ಮಾತ್ರ ಚಲಾವಣೆಯಾಗಿದ್ದವು. ಈ ಚುನಾವಣೆಯಲ್ಲಿ 436 ಸ್ವತಂತ್ರ ಅಭ್ಯರ್ಥಿಗಳಲ್ಲದೆ 27 ರಾಜಕೀಯ ಪಕ್ಷಗಳಿಂದ 1,500ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರು. ಕಳೆದ ಎರಡು ಚುನಾವಣೆಗಳಿಗೆ ಹೋಲಿಸಿದರೆ ಈ ಚುನಾವಣೆ ವಿಶಿಷ್ಟ ಎಂದು ಮಾಜಿ ಚುನಾವಣಾ ಆಯುಕ್ತ ಬ್ರಿಗೇಡಿಯರ್ ಜನರಲ್ (ನಿವೃತ್ತ) ಸಖಾವತ್ ಹುಸೇನ್ ಬಣ್ಣಿಸಿದ್ದಾರೆ.

ಚುನಾವಣೆಗೂ ಮುನ್ನ ಬಾಂಗ್ಲಾದೇಶದ ಹಲವೆಡೆ ಹಿಂಸಾತ್ಮಕ ಘಟನೆಗಳು ನಡೆದಿದ್ದವು. ಭಾನುವಾರ ಮತದಾನದ ವೇಳೆ ದೇಶಾದ್ಯಂತ 18 ಸ್ಥಳಗಳಲ್ಲಿ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. ಈ ಪೈಕಿ 10 ಮತಗಟ್ಟೆಗಳನ್ನು ಗುರಿಯಾಗಿಸಲಾಗಿತ್ತು.

ಇದನ್ನೂ ಓದಿ: ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ: ವೋಟ್ ಮಾಡಿ ಭಾರತವನ್ನು ಹೊಗಳಿದ ಶೇಖ್ ಹಸೀನಾ

ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕರು ಈ ಸಾರ್ವತ್ರಿಕ ಚುನಾವಣೆಯನ್ನು 'ಮೋಸದ ಚುನಾವಣೆ' ಎಂದು ಕರೆದಿದ್ದಾರೆ. 2014ರ ಚುನಾವಣೆಯನ್ನೂ ಬಿಎನ್‌ಪಿ ಬಹಿಷ್ಕರಿಸಿತ್ತು. ಆದರೆ, 2018ರ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಿತ್ತು. ಈ ಬಾರಿಯೂ ಬಿಎನ್‌ಪಿ ಚುನಾವಣೆ ಬಹಿಷ್ಕರಿಸಿದೆ. ಜೊತೆಗೆ, ಮತದಾನ ಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿತ್ತು. ಇದೀಗ, ತಮ್ಮ ಬಹಿಷ್ಕಾರ ಯಶಸ್ವಿಯಾಗಿದೆ ಎಂಬುದಕ್ಕೆ ಕಡಿಮೆ ಮತದಾನವೇ ಸಾಕ್ಷಿ ಎಂದು ಬಿಎನ್‌ಪಿ ನಾಯಕರು ಹೇಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.