ETV Bharat / international

ಧ್ವಂಸಗೊಂಡು ಮತ್ತೆ ತಲೆಎತ್ತಿ ನಿಂತ ದೇಗುಲದಲ್ಲಿ ಸಂಭ್ರಮದ ದೀಪಾವಳಿಗೆ ಪಾಕ್‌ ಹಿಂದೂ ಸಮುದಾಯ ನಿರ್ಧಾರ

author img

By

Published : Nov 7, 2021, 7:01 PM IST

ಕರಾಕ್‌ನಲ್ಲಿರುವ ತೇರಿ ದೇವಸ್ಥಾನದಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಪಾಕಿಸ್ತಾನದ ಹಿಂದೂ ಸಮುದಾಯ ನಿರ್ಧರಿಸಿದೆ. ಈ ಕಾರ್ಯಕ್ರಮಕ್ಕೆ ಪಾಕಿಸ್ತಾನ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರನ್ನು ಆಹ್ವಾನಿಸಲಾಗಿದೆ.

light
ದೀಪ

ಇಸ್ಲಾಮಾಬಾದ್: ಪಾಕಿಸ್ತಾನದ ವಾಯುವ್ಯ ಭಾಗದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಧ್ವಂಸಗೊಂಡಿದ್ದ ಹಿಂದೂ ದೇವಾಲಯದಲ್ಲಿ ಸಂಭ್ರಮದ ದೀಪಾವಳಿ ಆಚರಿಸಲು ಪಾಕಿಸ್ತಾನ ಹಿಂದೂ ಕೌನ್ಸಿಲ್ ನಿರ್ಧರಿಸಿದೆ. ಇದಕ್ಕಾಗಿ ಮುಂದಿನ ಸೋಮವಾರ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಬಗ್ಗೆ ಪಿಹೆಚ್‌ಸಿ ಮತ್ತು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಡಾ.ರಮೇಶ್ ಕುಮಾರ್ ವಂಕ್ವಾನಿ ಮಾತನಾಡಿ, 'ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಉಪಸ್ಥಿತಿಯು ಕಿಡಿಗೇಡಿಗಳಿಗೆ ಕೆಟ್ಟ ಆಲೋಚನೆಗಳನ್ನು ಮಾಡದಂತೆ ಸಂದೇಶ ನೀಡುತ್ತದೆ' ಎಂದರು.

ಘಟನೆಯ ಹಿನ್ನೆಲೆ:

ಕಳೆದ ವರ್ಷ ಈ ಹಿಂದೂ ದೇವಾಲಯದ ನವೀಕರಣವನ್ನು ಜಮಿಯತ್ ಉಲೇಮಾ-ಎ-ಇಸ್ಲಾಂ ಫಜಲ್ (ಜೆಯುಐ-ಎಫ್) ಪಕ್ಷದ ಬೆಂಬಲಿಗರು ವಿರೋಧಿಸಿದ್ದರು. ಅಲ್ಲದೇ, ದೇವಾಲಯವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 350ಕ್ಕೂ ಅಧಿಕ ಕಿಡಿಗೇಡಿಗಳ ವಿರುದ್ಧ ಕೇಸ್​ ದಾಖಲಿಸಲಾಗಿತ್ತು. ಅಲ್ಲದೇ, ಧ್ವಂಸಗೊಂಡಿರುವ ಮಂದಿರವನ್ನು ಪುನರ್‌ ನಿರ್ಮಾಣ ಮಾಡುವ ಬಗ್ಗೆ ಸ್ಥಳೀಯ ಆಡಳಿತ ಭರವಸೆ ನೀಡಿತ್ತು.

ಪಾಕಿಸ್ತಾನ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್‌ ಅಹ್ಮದ್‌ ಅವರು ದೇಗುಲ ನಾಶವನ್ನು 'ದುರಂತ' ಘಟನೆ ಎಂದು ಬಣ್ಣಿಸಿದ್ದರು. ಅಲ್ಲದೇ, ದೇಗುಲವನ್ನು ಧ್ವಂಸಗೊಳಿಸಿದ ಅಪರಾಧಿಗಳಿಂದ 33 ಮಿಲಿಯನ್ (ಯುಎಸ್‌ಡಿ 1,94,161) ವಸೂಲಿ ಮಾಡಲು ಅಕ್ಟೋಬರ್ 2021 ರಲ್ಲಿ ಖೈಬರ್ ಪಖ್ತುಂಕ್ವಾ ಪ್ರಾಂತೀಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.

ಈ ಪ್ರಕರಣವು ಪಾಕಿಸ್ತಾನದಲ್ಲಿ 1992ರ ನಂತರ ನಡೆದ ಅತಿದೊಡ್ಡ ದೇಗುಲದ ಮೇಲಿನ ದಾಳಿಯಾಗಿತ್ತು. ಧಾರ್ಮಿಕ ಮೂಲಭೂತವಾದಿಗಳು ಸಾವಿರಾರು ಸಂಖ್ಯೆಯಲ್ಲಿ ಧಾವಿಸಿ ದೇಗುಲವನ್ನು ಧ್ವಂಸಗೊಳಿಸಿದ್ದರು. ಈ ದೇವಾಲಯವನ್ನು 1920ಕ್ಕಿಂತಲೂ ಮೊದಲು ನಿರ್ಮಿಸಲಾಗಿತ್ತು. ಇದು ಸಂತ ಶ್ರೀ ಪರಮ ಹನ್ಸ್‌ಜೀ ಮಹಾರಾಜ್ ಅವರೊಂದಿಗೆ ಸಂಬಂಧ ಹೊಂದಿದೆ.

ಒಂದು ಅಂದಾಜಿನ ಪ್ರಕಾರ, ಪಾಕಿಸ್ತಾನದಲ್ಲಿ 75 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. ಪಾಕಿಸ್ತಾನದ ಬಹುಪಾಲು ಹಿಂದೂ ಜನಸಂಖ್ಯೆಯು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದೆ. ಅಲ್ಲಿ ಅವರು ಮುಸ್ಲಿಂ ನಿವಾಸಿಗಳೊಂದಿಗೆ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭಾಷೆಯನ್ನು ಹಂಚಿಕೊಳ್ಳುತ್ತಾರೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಇತ್ತೀಚೆಗೆ ಹಲವು ದೇವಾಲಯಗಳ ಮೇಲೆ ದಾಳಿ ನಡೆಯುತ್ತಿವೆ.

ಇದನ್ನೂ ಓದಿ: ಇರಾಕ್​​ ಪ್ರಧಾನಿ ಮನೆ ಮೇಲೆ ಡ್ರೋನ್​ ದಾಳಿ ಯತ್ನ: ಹತ್ಯೆ ಸಂಚಿನಿಂದ ಪಾರಾದ ಮುಸ್ತಫಾ ಅಲ್ ಕದಿಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.