ETV Bharat / entertainment

ಶೆಹನಾಜ್​ ಗಿಲ್​ಗೆ ನಟ ಸಲ್ಮಾನ್​ ಖಾನ್​ 'ಪ್ರೀತಿ' ಸಲಹೆ: ಅಭಿಮಾನಿಗಳಲ್ಲಿ ಗೊಂದಲ

author img

By

Published : Apr 11, 2023, 1:06 PM IST

Salman Khan
ಶೆಹನಾಜ್​ ಗಿಲ್​ಗೆ ನಟ ಸಲ್ಮಾನ್​ ಖಾನ್​ 'ಪ್ರೀತಿ' ಸಲಹೆ

ನಟಿ, ಗಾಯಕಿ ಶೆಹನಾಜ್​ ಗಿಲ್ ಅವರು 'ಕಿಸಿ ಕಾ ಬಾಯ್​ ಕಿಸಿ ಕಿ ಜಾನ್​' ಚಿತ್ರದಲ್ಲಿ ಸಲ್ಮಾನ್​ ಖಾನ್​ ಜೊತೆ ತೆರೆ ಹಂಚಿಕೊಂಡಿದ್ದಾರೆ.

ನಟಿ, ಗಾಯಕಿ ಶೆಹನಾಜ್​ ಗಿಲ್​ ಅವರು ಸಲ್ಮಾನ್​ ಖಾನ್​ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಬಿಗ್​ ಬಾಸ್​ 13ರಲ್ಲಿ ಶೆಹನಾಜ್​ ಕಾಣಿಸಿಕೊಂಡ ನಂತರ ಅವರಿಬ್ಬರು ನಿರಂತರ ಸಂಪರ್ಕದಲ್ಲಿದ್ದಾರೆ. ಇದೀಗ 'ಕಿಸಿ ಕಾ ಬಾಯ್​ ಕಿಸಿ ಕಿ ಜಾನ್​' ಸಿನಿಮಾದ ಮೂಲಕವು ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಚಿತ್ರದ ಟ್ರೇಲರ್​ ಲಾಂಚ್​ ಕಾರ್ಯಕ್ರಮದಲ್ಲಿ ಶೆಹನಾಜ್​ ಕೂಡ ಭಾಗಿಯಾಗಿದ್ದರು. ಈ ವೇಳೆ, ಸಂವಾದ ಕಾರ್ಯಕ್ರಮ ನಡೆಸಲಾಯಿತು. ನಿರೂಪಕರು ಶೆಹನಾಜ್​ ಅವರಲ್ಲಿ "ನೀವು ಇಷ್ಟು ದೊಡ್ಡ ಸಿನಿಮಾದ ಶೂಟಿಂಗ್​ನಲ್ಲಿ ಪಾಲ್ಗೊಂಡಾಗ ಗಲಿಬಿಲಿಗೊಂಡಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಮಧ್ಯೆ ಪ್ರವೇಶಿಸಿದ ಸಲ್ಮಾನ್​, "ನೀವು ಜೀವನದಲ್ಲಿ ಮುಂದುವರೆಯಿರಿ ಶೆಹನಾಜ್"​ ಎಂದು ಹೇಳಿದ್ದಾರೆ. ಇದಕ್ಕೆ ಶೆಹನಾಜ್​, "ಈಗಾಗಲೇ ನಾನು ಮುಂದುವರೆದಿದ್ದೇನೆ" ಎಂದು ತಿಳಿಸಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿದ ಸಲ್ಲು, "ನೀವು ಮುಂದುವರೆಯಬೇಕೆಂದೇ ನಾನು ಬಯಸುತ್ತೇನೆ. ಹೆಚ್ಚಾಗಿ ಈ ಬಗ್ಗೆ ನಾನೇನು ಹೇಳುವುದಿಲ್ಲ" ಎಂದಿದ್ದಾರೆ. ಇದು ಆಕೆಯ​ ಆಪ್ತ ಸ್ನೇಹಿತ ಸಿದ್ಧಾರ್ಥ್​ ಶುಕ್ಲಾ ಅವರ ನಿಧನದ ನಂತರ ಶೆಹನಾಜ್​ ಭಾವನಾತ್ಮಕವಾಗಿ ನೊಂದಿದ್ದರು ಎಂಬುದರ ಬಗ್ಗೆ ಸಲ್ಮಾನ್​ ಸುಳಿವು ನೀಡಿದಂತಿದೆ.

ಸಂವಾದದಲ್ಲಿ ಶೆಹನಾಜ್​ ತಮ್ಮ ಮೊದಲ ಮ್ಯೂಸಿಕ್​ ವಿಡಿಯೋಗಾಗಿ ತಿರಸ್ಕರಿಸಲ್ಪಟ್ಟಿರುವುದನ್ನು ನೆನಪಿಸಿಕೊಂಡರು. "ನನ್ನ ಮೊದಲ ಮ್ಯೂಸಿಕ್​ ವಿಡಿಯೋ ಚಿತ್ರೀಕರಣಕ್ಕಾಗಿ ಹೋದಾಗ ನಾನು ತಿರಸ್ಕರಿಸಲ್ಪಟ್ಟೆ. ಇಷ್ಟು ಸಣ್ಣ ಹುಡುಗಿ ನಮಗೆ ಬೇಡ, ಅವಳನ್ನು ಹಿಂದಕ್ಕೆ ಕರೆದುಕೊಂಡು ಹೋಗಿ ಎಂದು ಅಲ್ಲಿ ಹೇಳಿದ್ದರು. ನಾನು ಮನೆಗೆ ಬಂದು ಜೋರಾಗಿ ಅತ್ತಿದ್ದೆ. ಆಗ ನನ್ನ ತಾಯಿ, ನೀನು ಯಾಕೆ ಅಳುತ್ತಿದ್ದೀಯಾ? ಒಂದು ದಿನ ನೀನು ಸಲ್ಮಾನ್​ ಖಾನ್​ ಜೊತೆ ಚಿತ್ರದಲ್ಲಿ ನಟಿಸುತ್ತೀಯಾ ಎಂದು ಹೇಳಿದ್ದರು. ಅದರಂತೆ ಸರ್​ ನನಗೆ ಒಂದು ಅವಕಾಶ ನೀಡಿದರು. ಅಮ್ಮನ ಮಾತು ಯಾವಾಗಲೂ ನಿಜವಾಗುತ್ತದೆ ಎಂಬುದು ಸಾಬೀತಾಗಿದೆ" ಎಂದರು.

ರಾಘವ್ ಮತ್ತು ಶೆಹನಾಜ್​ ಡೇಟಿಂಗ್​!?: ಈ ಹಿಂದೆ ನೃತ್ಯ ಸಂಯೋಜಕ, ನಟ ರಾಘವ್​ ಜುಯಲ್​ ಮತ್ತು ಶೆಹನಾಜ್​ ಗಿಲ್​ ಪರಸ್ಪರ ಡೇಟಿಂಗ್​ನಲ್ಲಿದ್ದಾರೆ ಎಂಬ ವರದಿಗಳು ವೈರಲ್​ ಆಗಿದ್ದವು. ಅದರ ನಂತರ ಅವರಿಬ್ಬರು ವದಂತಿಗಳನ್ನು ನಿರಾಕರಿಸಿ, ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡಿದ್ದರು. ಇದೀಗ 'ಕಿಸಿ ಕಾ ಬಾಯ್​ ಕಿಸಿ ಕಿ ಜಾನ್​' ಚಿತ್ರದ ಟ್ರೇಲರ್​ ಲಾಂಚ್​ ವೇಳೆ ಸಲ್ಮಾನ್​ ಖಾನ್​ ಅವರಿಬ್ಬರನ್ನು ತಮಾಷೆ ಮಾಡಿರುವುದು ಡೇಟಿಂಗ್​ ವದಂತಿಗಳಿಗೆ ಪುನರ್​ಜ್ಜೀವನ ನೀಡಿದಂತಿದೆ. "ನೀವು ಹೀಗೆ ಯೋಚಿಸುವುದಿಲ್ಲವೇ? ನಾನು ಈ ಕೆಮಿಸ್ಟ್ರಿ ನೋಡಿದ್ದೇನೆ. ನೀವು ಕೂಡ ನೋಡಿದ್ದೀರಿ ಅಲ್ಲವೇ? ಒಬ್ಬರು ಒಂದು ಸ್ಟೆಪ್​ ಮುಂದಿಟ್ಟರೆ, ಮತ್ತೊಬ್ಬರು ಎರಡು ಹೆಜ್ಜೆ ಹಿಂದೆ ಇಡುತಿದ್ದೀರಾ" ಎಂದು ಹೇಳಿದ್ದಾರೆ. ಇದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ: ವೇದಿಕೆ ಮೇಲೆ ಸಿಕ್ಸ್​ ಪ್ಯಾಕ್​ ಪ್ರದರ್ಶಿಸಿದ ಸಲ್ಲು: ಧೂಳೆಬ್ಬಿಸಿದ ವೈರಲ್​ ವಿಡಿಯೋ

'ಕಿಸಿ ಕಾ ಬಾಯ್​ ಕಿಸಿ ಕಿ ಜಾನ್​' ಚಿತ್ರದ ಟ್ರೇಲರ್​ ನಿನ್ನೆ (ಏಪ್ರಿಲ್​ 10) ರಂದು ಬಿಡುಗಡೆಗೊಂಡಿದೆ. ಫರ್ಹಾದ್​ ಸಾಮ್​ಜಿ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್​ ಖಾನ್​, ಪೂಜಾ ಹೆಗ್ಡೆ, ವೆಂಕಟೇಶ್​ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್​ ಸಿಂಗ್​, ಅಭಿಮನ್ಯು ಸಿಂಗ್​, ರಾಘವ್​ ಜುಯಲ್​, ಸಿದ್ದಾರ್ಥ್​ ನಿಗಮ್​, ಜಸ್ಸಿ ಗಿಲ್​, ಶೆಹನಾಜ್​ ಗಿಲ್​, ಪಾಲಕ್​ ತಿವಾರಿ ಮತ್ತು ವಿನಾಲಿ ಭಟ್ನಾಗರ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಕಿಸಿ ಕಾ ಬಾಯ್​ ಕಿಸಿ ಕಿ ಜಾನ್​' ಏಪ್ರಿಲ್​ 21ರಂದು ತೆರೆ ಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.