ETV Bharat / entertainment

ಆರ್​ಆರ್​ಆರ್​ ಬಾಲಿವುಡ್​ ಸಿನಿಮಾವಲ್ಲ, ಅಪ್ಪಟ ತೆಲುಗು ಚಿತ್ರ: ಅಮೆರಿಕದಲ್ಲಿ ರಾಜಮೌಳಿ ಪ್ರತಿಕ್ರಿಯೆ

author img

By

Published : Jan 15, 2023, 1:20 PM IST

Rajamouli
ನಿರ್ದೇಶಕ ರಾಜಮೌಳಿ

ಖ್ಯಾತ ನಿರ್ದೇಶಕ ರಾಜಮೌಳಿ ತಮ್ಮ ಭಾಷೆಯ ಬಗ್ಗೆ ಅಭಿಮಾನ ತೋರಿಸಿದ್ದಾರೆ. ಅಮೆರಿಕದಲ್ಲಿ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಆರ್​ಆರ್​ಆರ್​​ ದಕ್ಷಿಣ ಭಾರತದ ತೆಲುಗು ಚಿತ್ರವೆಂದು ಒತ್ತಿ ಹೇಳಿದ್ದಾರೆ.

ತೆಲುಗು ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರಿಗೆ ಸಲ್ಲುತ್ತದೆ. ಬಾಹುಬಲಿ ಸಿನಿಮಾದ ಮೂಲಕ ಗುರುತಿಸಿಕೊಂಡಿದ್ದ ರಾಜಮೌಳಿ ಬಳಿಕ ಆರ್​ಆರ್​ಆರ್​ ಸಿನಿಮಾದಿಂದ ಭಾರತ ಮಾತ್ರವಲ್ಲದೇ, ವಿದೇಶದ ಥಿಯೇಟರ್​ಗಳಲ್ಲಿಯೂ ಧೂಳೆಬ್ಬಿಸಿದ್ದರು. 2022 ರಲ್ಲಿ ದಕ್ಷಿಣ ಚಿತ್ರರಂಗ ಕಂಡ ಸೂಪರ್​ ಹಿಟ್​ ಸಿನಿಮಾ ಇದಾಗಿತ್ತು.

ಜನಪ್ರಿಯ ತಾರೆಯರಾದ ರಾಮ್​ಚರಣ್ ಮತ್ತು ಜೂನಿಯರ್​ ಎನ್​ಟಿಆರ್​ ಅದ್ಭುತ ಅಭಿನಯಕ್ಕೆ ಫ್ಯಾನ್ಸ್​ ಫುಲ್​ ಮಾರ್ಕ್ಸ್ ನೀಡಿದ್ದರು. 1,200 ಕೋಟಿ ರೂ.ಗೂ ಅಧಿಕೆ ಗಳಿಕೆ ಮಾಡಿರುವ ಈ ಸಿನಿಮಾ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಅಲ್ಲದೇ ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಗೋಲ್ಡನ್​ ಗ್ಲೋಬ್​ ಪ್ರಶಸ್ತಿ ಕೂಡ ಸಿಕ್ಕಿದೆ.

ಅಮೆರಿಕದ ಸ್ಕ್ರೀನಿಂಗ್​ ಸಮಯದಲ್ಲಿ ರಾಜಮೌಳಿ ತಮ್ಮ ಸಿನಿಮಾದಲ್ಲಿ ಹಾಡುಗಳನ್ನು ಹೇಗೆ ಬಳಸಿದರು ಎಂಬುದರ ಕುರಿತು ಮಾತನಾಡಿದ್ದಾರೆ. ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ರಾಜಮೌಳಿ, ಆರ್​ಆರ್​ಆರ್​ ಬಾಲಿವುಡ್​ ಸಿನಿಮಾವಲ್ಲ ಎಂದು ಒತ್ತಿ ಹೇಳಿದ್ದಾರೆ. 'ಇದು ದಕ್ಷಿಣ ಭಾರತದ ತೆಲುಗು ಚಿತ್ರ. ಆದರೆ ಚಿತ್ರವನ್ನು ನಿಲ್ಲಿಸಿ ಸಂಗೀತ ಮತ್ತು ನೃತ್ಯದ ತುಣುಕನ್ನು ನೀಡುವುದಕ್ಕಿಂತ ಕಥೆಯನ್ನು ಮುಂದಕ್ಕೆ ಸಾಗಿಸಲು ನಾನು ಹಾಡನ್ನು ಬಳಸುತ್ತೇನೆ. ಅಲ್ಲದೇ ಮೂರು ತಾಸಿನ ಸಿನಿಮಾ ಅಭಿಮಾನಿಗಳಿಗೆ ಖುಷಿ ಕೊಟ್ಟಿಲ್ಲ ಅಂದ್ರೆ ನಾನು ಸೋತಿದ್ದೇನೆ ಎಂದರ್ಥ. ಆದ್ರೆ ಈ ಸಿನಿಮಾದಲ್ಲಿ ನಾನು ಖಂಡಿತ ಗೆದ್ದಿದ್ದೇನೆ' ಎಂದಿದ್ದಾರೆ. ಇವರ ಈ ಹೇಳಿಕೆ ಸಖತ್​ ವೈರಲ್​ ಆಗಿದ್ದು, ಸೌತ್​ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ವಿದೇಶದಲ್ಲೂ ಆರ್​ಆರ್​ಆರ್​ ಸದ್ದು: ಜಾಗತಿಕ ಮಟ್ಟದ ಖ್ಯಾತಿ ಗಳಿಸಿರುವ ಆರ್​ಆರ್​ಆರ್​ ಸಿನಿಮಾ ಅಮೆರಿಕದ ಥಿಯೇಟರ್​ಗಳಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡಿದೆ. ಸಿನಿಮಾವನ್ನು ಜನವರಿ 9ರಂದು ಪ್ರದರ್ಶಿಸಲಾಗಿದ್ದು, ಟಿಕೆಟ್​ ಬುಕ್ಕಿಂಗ್​ ಓಪನ್​ ಆದ ಕೂಡಲೇ ಅಂದರೆ ಕೇವಲ 98 ಸೆಕೆಂಡ್ಸ್​ನಲ್ಲಿ ಎಲ್ಲಾ ಟಿಕೆಟ್​ಗಳು ಸೋಲ್ಡ್​ ಔಟ್ ಆಗಿದ್ದವು. ಭಾರತದ ಸಿನಿಮಾವೊಂದು ವಿದೇಶದಲ್ಲಿ ಆ ಮಟ್ಟಿಗೆ ಸದ್ದು ಮಾಡಿದ್ದು ನಿಜಕ್ಕೂ ವಿಶೇಷ. ಗಮನಾರ್ಹ ವಿಷಯವೆಂದರೆ ಕಳೆದ ವರ್ಷ ಅಕ್ಟೋಬರ್ 21 ರಂದು ಜಪಾನ್‌ ಅಲ್ಲಿ ಆರ್​ಆರ್​ಆರ್​ ಚಿತ್ರ ಬಿಡುಗಡೆ ಆಗಿತ್ತು. ಇದು ಜಪಾನ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ಚಲನಚಿತ್ರವಾಗಿದೆ.

ನಾಟು ನಾಟು ಹಾಡಿಗೆ ಸಂದ ಗರಿಮೆ: ಆರ್​ಆರ್​ಆರ್​ ಸಿನಿಮಾದ ಸೂಪರ್​ ಹಿಟ್​ ನಾಟು ನಾಟು ಹಾಡು ಗೋಲ್ಡನ್​ ಗ್ಲೋಬ್​ ಪ್ರಶಸ್ತಿ ಪಡೆದಿರುವುದು ದೊಡ್ಡ ವಿಷಯ. ಚಂದ್ರಬೋಸ್​ ಅವರು ಈ ಹಾಡನ್ನು ರಚಿಸಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಶೇ.90 ರಷ್ಟು ಹಾಡನ್ನು ಅರ್ಧ ದಿನದಲ್ಲಿ ಬರೆದು ಮುಗಿಸಿದ ಅವರು, ಉಳಿದ ಶೇ.10 ರಷ್ಟನ್ನು ಪೂರ್ಣಗೊಳಿಸಲು ಸುಮಾರು 1 ವರ್ಷ 7 ತಿಂಗಳು (19 ತಿಂಗಳು) ವ್ಯಯಿಸಿದ್ದಾರೆ. ಕೊನೆಗೆ ಅವರ ಕಠಿಣ ಪರಿಶ್ರಮ, ತಾಳ್ಮೆಗೆ ಫಲ ಸಿಕ್ಕಿದೆ.

ಇದನ್ನೂ ಓದಿ: ಆರ್‌ಆರ್‌ಆರ್‌ ಚಿತ್ರದ 'ನಾಟು ನಾಟು' ಹಾಡಿಗೆ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.