ETV Bharat / entertainment

'ಯು ಐ ಚಿತ್ರದ ಪ್ರಮೋಷನ್‌ ಯಾಕೆ ಮಾಡಬೇಕು?': ನಿರ್ಮಾಪಕರಿಗೆ ಟಾಂಗ್ ಕೊಟ್ಟ ರಿಯಲ್ ಸ್ಟಾರ್

author img

By ETV Bharat Karnataka Team

Published : Aug 28, 2023, 3:15 PM IST

Updated : Aug 28, 2023, 3:52 PM IST

real star upendras UI movie update
ರಿಯಲ್​ ಸ್ಟಾರ್​ ಉಪೇಂದ್ರ

UI movie update: 'ಯುಐ' ಚಿತ್ರತಂಡ ಫಸ್ಟ್​ ಲುಕ್​ ಅಥವಾ ಟೀಸರ್​ ಬಿಡುಗಡೆಗೊಳಿಸುವ ಬದಲು ನಿರ್ಮಾಪಕರಾದ ಕೆ.ಪಿ ಶ್ರೀಕಾಂತ್​ ಮತ್ತು ನವೀನ್​ ಜೊತೆ ಉಪೇಂದ್ರ ಮಾತನಾಡುತ್ತಿರುವ ವಿಡಿಯೋವನ್ನು ಬಿಡುಗಡೆಗೊಳಿಸಿದೆ.

ರಿಯಲ್​ ಸ್ಟಾರ್​ ಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾ

ರಿಯಲ್​ ಸ್ಟಾರ್​ ಉಪೇಂದ್ರ ನಟನೆಯ ಜೊತೆಗೆ ಅವರ ನಿರ್ದೇಶನಕ್ಕೂ ದೊಡ್ಡ ಮಟ್ಟದ ಅಭಿಮಾನಿಗಳಿದ್ದಾರೆ. ಈ ಮಾತು ಈಗಲ್ಲ, ಹಿಂದಿನಿಂದಲೂ ಸಿನಿ ಪ್ರಿಯರು ಪ್ರೂವ್​ ಮಾಡುತ್ತಲೇ ಬಂದಿದ್ದಾರೆ. ಇದುವರೆಗೆ ಉಪ್ಪಿ ಆ್ಯಕ್ಷನ್​ ಕಟ್​ ಹೇಳಿರುವ ಚಿತ್ರಗಳು ಸೋತಿರೋದೇ ವಿರಳ. ಇದೀಗ, ಉಪ್ಪಿ 2 ಸಿನಿಮಾದ ಬಳಿಕ ಎಂಟು ವರ್ಷಗಳಾದ ಮೇಲೆ ರಿಯಲ್‌ ಸ್ಟಾರ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಅಖಾಡಕ್ಕೆ ಇಳಿದಿದ್ದಾರೆ. 'ಯುಐ' ಎಂಬ ಹೆಸರಿನಿಂದ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.

ಅದ್ಧೂರಿಯಾಗಿ ಸೆಟ್ಟೇರಿದ 'ಯುಐ' ಸಿನಿಮಾ, ಸೈಲೆಂಟ್​ ಆಗಿ ಚಿತ್ರೀಕರಣ ಮುಗಿಸಿದ್ದು, ಸದ್ಯ ಪೋಸ್ಟ್​ ಪ್ರೊಡಕ್ಷನ್​​ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇದೀಗ ಸಿನಿಮಾದಿಂದ ವಿಡಿಯೋವೊಂದು ಹೊರಬಿದ್ದಿದೆ. 'ಯುಐ' ಚಿತ್ರದ ಫಸ್ಟ್​ ಲುಕ್​ ಅಥವಾ ಟೀಸರ್​ ಬಿಡುಗಡೆಗೊಳಿಸುವ ಬದಲು ನಿರ್ಮಾಪಕರಾದ ಕೆ ಪಿ ಶ್ರೀಕಾಂತ್​ ಮತ್ತು ನವೀನ್​ ಜೊತೆ ಉಪೇಂದ್ರ ಮಾತನಾಡುತ್ತಿರುವ ದೃಶ್ಯ ಇದಾಗಿದೆ. ರಿಯಲ್​ ಸ್ಟಾರ್ ಯುಐ​ ಸಿನಿಮಾದ ಪ್ರಮೋಷನ್​ ಮಾಡಲ್ಲ ಎಂದು ನಿರ್ಮಾಪಕರಲ್ಲಿ ಹೇಳುತ್ತಿದ್ದಾರೆ.

ವಿಡಿಯೋದಲ್ಲೇನಿದೆ?: ಮೊದಲಿಗೆ ಉಪೇಂದ್ರ ಅವರನ್ನು ಭೇಟಿಯಾಗಲು ನಿರ್ಮಾಪಕರಾದ ಕೆ ಪಿ ಶ್ರೀಕಾಂತ್​ ಮತ್ತು ನವೀನ್​ ಬರುತ್ತಾರೆ. ಸಿನಿಮಾ ಸ್ಟಾರ್ಟ್​ ಆಗಿ ಒಂದೂವರೆ ವರ್ಷ ಆಗ್ತಾ ಬಂತು. ಯುಐ ಸಿನಿಮಾವನ್ನು ಪ್ರಮೋಷನ್ ಮಾಡುವುದಕ್ಕೆ ಒಂದು ಪೋಸ್ಟರ್​ ಅಥವಾ ಟೀಸರ್​ ಕೂಡ ಬಿಡುಗಡೆ ಮಾಡಿಲ್ಲ ಎಂದು ಅವರಿಬ್ಬರು ಉಪ್ಪಿಯನ್ನು ಕೇಳುತ್ತಾರೆ. ಅದಕ್ಕೆ ರಿಯಲ್​ ಸ್ಟಾರ್​, ಯಾಕೆ? ಫಸ್ಟ್​ ಲುಕ್​ ಟೀಸರ್​ ಅನ್ನು ಬಿಡಲೇಬೇಕಾ? ಎಂದು ನಿರ್ಮಾಪಕರಿಗೆ ಪ್ರಶ್ನಿಸುತ್ತಾರೆ.

ಮತ್ತೆ ನಮ್ಮ ಸಿನಿಮಾಗೆ ಹೇಗೆ ಸಾರ್​ ಜನರಿಗೆ ರೀಚ್​ ಆಗುತ್ತದೆ? ರಿಲೀಸ್​ ಡೇಟ್​ ಯಾವಾಗ ಅಂತ ಹೇಗೆ ಗೊತ್ತಾಗುತ್ತೆ? ನಮ್ಮ ಸಿನಿಮಾದ ಇಡೀ ಕಥೆಯನ್ನು ಒಂದು ನಿಮಿಷದ ವಿಡಿಯೋದಲ್ಲಿ ತೋರಿಸಬೇಕು ಅಲ್ವಾ ಸರ್​? ಎಂದು ನಿರ್ಮಾಪಕರು ಉಪ್ಪಿಗೆ ಕೇಳುತ್ತಾರೆ. ಸಿನಿಮಾಗೆ ಹೈಪ್​ ಬರಬೇಕು ಅಂದ್ರೆ ಟೀಸರ್​, ಪೋಸ್ಟರ್​ ಯಾಕೆ? ಸುಳ್ಳಿಗೆ ಹೈಪ್​ ಮಾಡಬೇಕು. ಆದರೆ ಸತ್ಯಕ್ಕೆ ತಾನಾಗಿಯೇ ಹೈಪ್​ ಸಿಗುತ್ತದೆ ಎಂದು ಪಂಚಿಂಗ್​ ಡೈಲಾಗ್​ ಹೇಳುವ ಮೂಲಕ ಉಪ್ಪಿ ರಾಕ್​ ಆದ್ರೆ, ನಿರ್ಮಾಪಕರು ಶಾಕ್​ ಆಗುತ್ತಾರೆ. ಹೊಸ ರೀತಿಯಲ್ಲೇ ಚಿತ್ರತಂಡ 'ಯುಐ' ಸಿನಿಮಾ ಪ್ರಮೋಷನ್​ ಮಾಡುತ್ತಿದೆ.

ಸದ್ಯ ಯುಐ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಎಡಿಟಿಂಗ್​ ಕೆಲಸ ನಡೆಯುತ್ತಿದೆ. ಉಪೇಂದ್ರ ಈ ಚಿತ್ರದಲ್ಲಿ 3ಡಿ ಬಾಡಿ ಸ್ಕ್ಯಾನ್​ ಅನ್ನು ಬಳಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಕ್ಯಾಮರಾಗಳನ್ನು ಬಳಸಿ ಶೂಟ್​ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಷ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ಈ ತಂತ್ರಜ್ಞಾನವನ್ನು ಜೇಮ್ಸ್​ ಕ್ಯಾಮರಾನ್​ 'ಅವತಾರ್​ 2' ಸಿನಿಮಾಗೆ ಬಳಸಲಾಗಿತ್ತು. ಇಷ್ಟೇ ಅಲ್ಲದೇ ಸುಮಾರು 14 ಸಾವಿರ ವಿಎಫ್​ಎಕ್ಸ್​ ಶಾಟ್ಸ್​ ಅನ್ನು ಬಳಸಲಾಗಿದೆ. ಹಿಂದೆಂದೂ ಕನ್ನಡದಲ್ಲಿ ಈ ಟೆಕ್ನಾಲಜಿ ಬಳಸಿಲ್ಲ ಅನ್ನೋದು ಗಮನಾರ್ಹ.

ಇನ್ನು ಉಪ್ಪಿ ನಿರ್ದೇಶಿಸಿದ ಈವರೆಗಿನ ಸಿನಿಮಾಗಳಲ್ಲಿ ಇದು ದುಬಾರಿ ಎನ್ನಲಾಗಿದೆ. ಸಿನಿಮಾ ಬಜೆಟ್​ ಸುಮಾರು 100 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಅಲ್ಲದೇ ತಾಂತ್ರಿಕವಾಗಿಯೂ ಈ ಚಿತ್ರ ಅಡ್ವಾನ್ಸ್​ ಆಗಿರುತ್ತೆ ಅನ್ನೋದು ಗೊತ್ತಾಗಿದೆ. ಮತ್ತೊಂದೆಡೆ ಯುಐ ಚಿತ್ರ ರಿಲೀಸ್​ ಯಾವಾಗ? ಅನ್ನೋ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿದೆ. ನಿರ್ಮಾಪಕರ ಮೂಲಗಳ ಪ್ರಕಾರ, ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿರುವ ಹೈ ಬಜೆಟ್​ ಚಿತ್ರಗಳಲ್ಲಿ ಯುಐ ಕೂಡ ಒಂದು. ಹಲವಾರು ಸ್ಪೆಷಾಲಿಟಿಗಳಿಗೆ ಸೌತ್​ ಇಂಡಸ್ಟ್ರಿಯಲ್ಲಿ ಟಾಕ್​ ಆಗುತ್ತಿರುವ ಈ ಚಿತ್ರದ ಮೂಲಕ ಉಪ್ಪಿ ಪ್ರೇಕ್ಷಕರಿಗೆ ಏನು ಹೇಳಲು ಹೊರಟಿದ್ದಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಉಪ್ಪಿ ನಿರ್ದೇಶನದ UI ಸಿನಿಮಾ ಎಡಿಟಿಂಗ್​ ಶುರು: 8 ವರ್ಷಗಳ ಬಳಿಕ ಮಾನಿಟರ್​ ಮುಂದೆ ಕುಳಿತ ರಿಯಲ್​ ಸ್ಟಾರ್​

Last Updated :Aug 28, 2023, 3:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.