ETV Bharat / entertainment

50 ದೇಶ, 5 ಭಾಷೆ: ಎರಡೇ ದಿನಕ್ಕೆ 100‌ ಕೋಟಿ ರೂಪಾಯಿ ಕ್ಲಬ್ ಸೇರಿದ‌ 'ಕಬ್ಜ'

author img

By

Published : Mar 20, 2023, 12:31 PM IST

kabzaa-movie-joined-100-crore-club-in-two-days
50 ದೇಶ, 5 ಭಾಷೆಗಳು : ಎರಡೇ ದಿನಕ್ಕೆ 100‌ ಕೋಟಿ ಕ್ಲಬ್ ಸೇರಿದ‌ ಕಬ್ಜ

ದೇಶ, ವಿದೇಶಗಳಲ್ಲಿ ಕಬ್ಜ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಇದೀಗ ಎರಡೇ ದಿನದಲ್ಲಿ ₹100 ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿದೆ ಎನ್ನುತ್ತಿದೆ ಗಾಂಧಿನಗರ.

ವರನಟ ಡಾ. ರಾಜ್‌ಕುಮಾರ್ ಅವರ ಮಾತಿನಂತೆ ಒಂದು ಸಿನಿಮಾ‌ ಬಂದರೆ ಸಾವಿರಾರು ತಂತ್ರಜ್ಞರು, ಕಲಾವಿದರಿಗೆ ಕೈ ತುಂಬಾ ಕೆಲಸ ಸಿಗುತ್ತದೆ. ಈಗಂತೂ ಪ್ಯಾನ್ ಇಂಡಿಯಾ ಸಿನಿಮಾ ಜಮಾನ. ಒಂದು ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಯಾದರೆ ಒಂದು ಸಿನಿಮಾದಿಂದ ಲಕ್ಷಾಂತರ ಜನರಿಗೆ ಕೆಲಸ ಸಿಗುತ್ತದೆ. ಈ ಮಾತನ್ನು ಕನ್ನಡದ ಕಬ್ಜ ನಿಜ ಮಾಡಿದೆ. ಕಬ್ಜ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಕಬ್ಜ ವಿಶ್ವಾದ್ಯಂತ ಬಿಡುಗಡೆಯಾಗಿ ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ₹54 ಕೋಟಿ ಗಳಿಕೆ ಮಾಡಿತ್ತು. ಆದರೆ ಎರಡೇ ದಿನಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಎರಡನೇ ದಿನ ‌ಮಾಡಿದ ದಾಖಲೆಯ ಬಗ್ಗೆ ಚಿತ್ರತಂಡ ಸಕ್ಸಸ್ ಮೀಟ್ ಮಾಡಿ ಖುಷಿಪಟ್ಟಿದೆ. ಚಿತ್ರದ ಯಶಸ್ಸಿನ ಖುಷಿಯಲ್ಲಿ ಉಪೇಂದ್ರ ಇದ್ರೆ, ಸಾಧಿಸಿದೆ ಎಂಬ ಛಲದಲ್ಲಿ ನಿರ್ಮಾಪಕ ಹಾಗು ನಿರ್ದೇಶಕ ಆರ್.ಚಂದ್ರು ಇದ್ದಾರೆ.

ಖಾಸಗಿ ಹೊಟೇಲ್‌‌ನಲ್ಲಿ ನಡೆದ ಸಕ್ಸಸ್ ಮೀಟ್‌ನಲ್ಲಿ ಉಪೇಂದ್ರ,‌ ಆರ್.ಚಂದ್ರು, ‌ವಿತರಕರಾದ ಮೋಹನ್, ಚಂದ್ರು, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ನಟರಾದ ಬಿ.ಸುರೇಶ್, ಅನೂಪ್ ರೇವಣ್ಣ, ತಮಿಳು ನಟ ಕಾಮರಾಜನ್, ನೀನಾಸಂ ಅಶ್ವತ್, ಕೋಟೆ ಪ್ರಭಾಕರ್, ಪೋಷಕ ನಟಿಯರಾದ ಶೋಭಾ ರಾಘವೇಂದ್ರ ಸೇರಿದಂತೆ ಸಿನಿಮಾ ತಂಡ ಭಾಗಿಯಾಗಿತ್ತು.

ನಿರ್ದೇಶಕ ಆರ್.ಚಂದ್ರು ಮಾತನಾಡಿ, "ಈ ಸಿನಿಮಾ ಆಗಲು ಮುಖ್ಯ ಕಾರಣ ಉಪೇಂದ್ರ ಸಾರ್. ಪುನೀತ್ ರಾಜ್‍ಕುಮಾರ್ ಸಾರ್ ನನ್ನ ಸಿನಿಮಾ ಚಿತ್ರೀಕರಣದ ಸೆಟ್​ಗೆ ಬಂದು ಹಾಲಿವುಡ್ ಶೈಲಿಯ ಮೇಕಿಂಗ್ ಮಾಡ್ತಾ ಇದ್ಯಾ ಚಂದ್ರು ಎಂದು ಹೇಳಿದಾಗಲೇ ನಾನು ಮೊದಲು ಗೆದ್ದೆ. ಎರಡನೇಯದು ನನ್ನ ಸಿನಿಮಾ ಮೇಕಿಂಗ್ ತೋರಿಸಿ ಟಿವಿ ಹಾಗು ಡಿಜಿಟಲ್ ರೈಟ್ಸ್ ಮಾರಾಟ ಮಾಡಿದಾಗ ಎರಡನೇ ಗೆಲುವು. ಈಗ ವಿಶ್ವಾದ್ಯಂತ ಸಿನಿಮಾ ಬಿಡುಗಡೆ ಆಗಿ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡ್ತಿರೋದು ನನ್ನ ಮೂರನೇ ಗೆಲುವು" ಎಂದರು.

"ಒಂದು ಟೈಮಲ್ಲಿ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅವರಿಗೆ ಒಂದು ಕಥೆ ಮಾಡಿ ನಿರ್ದೇಶನ ಮಾಡಬೇಕು ಎಂದು ಪಕ್ಕದ ರಾಜ್ಯ ತೆಲುಗು ‌ಇಂಡಸ್ಟ್ರಿಯ ನಿರ್ಮಾಪಕ ಹತ್ತಿರ ಹೋಗಿದ್ದೆ. ಆ ನಿರ್ಮಾಪಕ ನೀವು ಕನ್ನಡದ ಡೈರೆಕ್ಟರ್ ಅಲ್ವಾ ಎಂದು ವ್ಯಂಗ್ಯವಾಗಿ ಮಾತನಾಡಿದ್ರಂತೆ. ಆ ಮಾತಿನಿಂದ‌‌‌‌‌‌ ಬೇಸರ‌ವಾಗಿತ್ತು" ಎಂದು ಕಹಿ ಅನುಭವ ಹಂಚಿಕೊಂಡರು.

ಬಳಿಕ ಮಾತನಾಡಿದ ನಟ ಉಪೇಂದ್ರ, "ಆರ್.ಚಂದ್ರು ಅವರು ಕಬ್ಜ ಸಿನಿಮಾ ಮಾಡಿ ಗೆದ್ದಿದ್ದಾರೆ. ಈಗ ಕಬ್ಜ 2 ಮಾಡುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಕಬ್ಜದಿಂದ ಲಕ್ಷಾಂತರ ಜನರಿಗೆ ‌ಕೆಲಸ ಸಿಕ್ಕಿದೆ. ಅದು‌ ದೊಡ್ಡ ವಿಷಯ. ನಾನು ಕಬ್ಜ 2 ಚಿತ್ರಕ್ಕೆ ಕಾಯುತ್ತಿದ್ದೇನೆ" ಎಂದರು.

ಇನ್ನು, ಜರ್ಮನಿಯ ಬರ್ಲಿನ್, ಮಲೇಷಿಯಾ, ಇಂಡೋನೇಷಿಯಾ, ಯು.ಕೆ., ಯು.ಎಸ್, ಆಸ್ಟ್ರೇಲಿಯಾ, ಮಸ್ಕತ್ ಹೀಗೆ ವಿಶ್ವದ ಅನೆಕ ಕಡೆಗಳಲ್ಲಿ ಸಿನಿಮಾ ತೆರೆ ಕಂಡಿದೆ. ಈ ಎಲ್ಲಾ ಲೆಕ್ಕಾಚಾರದ ಪ್ರಕಾರ‌‌ ಮೊದಲ ದಿನ‌ 54 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಸಿನಿಮಾ ಎರಡನೇ ದಿನಕ್ಕೆ 46 ಕೋಟಿ ಕಲೆಕ್ಷನ್ ಮಾಡುವ ಮೂಲಕ‌ 100‌‌‌ಕೋಟಿ‌ ಕ್ಲಬ್ ಸೇರಿದೆ ಎಂದು ಗಾಂಧಿನಗರದ ಮೂಲಗಳು ಹೇಳುತ್ತಿವೆ.

ಇದನ್ನೂ ಓದಿ: 'ಆಪ್ತಮಿತ್ರ' ಇಲ್ಲಿ 300 ದಿನ ಪ್ರದರ್ಶನ ಕಂಡಿತ್ತು! ಇತಿಹಾಸದ ಪುಟ ಸೇರ್ತಿದೆ ಶಿವಮೊಗ್ಗದ ಲಕ್ಷ್ಮೀ ಟಾಕೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.