ETV Bharat / entertainment

ಶ್ರೀದೇವಿ 5ನೇ ವರ್ಷದ ಪುಣ್ಯತಿಥಿ: ಮರೆಯಲಾದಿತೇ ಲೇಡಿ ಸೂಪರ್​ಸ್ಟಾರ್​ ಸಿನಿಗಾಥೆ!

author img

By

Published : Feb 24, 2023, 10:59 AM IST

Sridevi
ಶ್ರೀದೇವಿ

ಬಾಲಿವುಡ್​ ನಟಿ, ಮೊದಲ ಮಹಿಳಾ ಸೂಪರ್​ಸ್ಟಾರ್ ಶ್ರೀದೇವಿ ಲೌಕಿಕ ಜಗತ್ತಿಗೆ ವಿದಾಯ ಹೇಳಿದ ದಿನವಿಂದು.

ಇಂದು ಬಾಲಿವುಡ್​ನ ಮೊದಲ ಮಹಿಳಾ ಸೂಪರ್​ಸ್ಟಾರ್​ ಶ್ರೀದೇವಿ ಅವರ 5ನೇ ವರ್ಷದ ಪುಣ್ಯತಿಥಿ. 2018ರ ಫೆಬ್ರವರಿ 24, ಬೆಳ್ಳಂಬೆಳಗ್ಗೆ ಸಿನಿಪ್ರಿಯರಿಗೆ ಅಘಾತಕಾರಿ ಸುದ್ದಿಯೊಂದು ಕೇಳಿಬಂದಿತ್ತು. ಅತಿಲೋಕ ಸುಂದರಿ, ನಟಿ ಶ್ರೀದೇವಿ ಇನ್ನಿಲ್ಲ ಎಂಬ ವಿಷಯ ಬರಸಿಡಿಲಿನಂತೆ ಬಡಿದಿತ್ತು. ಸಿನಿಮಾ ಲೋಕದಲ್ಲಿ ಇನ್ನಷ್ಟು ಸಾಧಿಸಬೇಕೆಂಬ ತುಡಿತ ಇಟ್ಟುಕೊಂಡಿದ್ದ ಅವರ ಬದುಕಲ್ಲಿ ವಿಧಿ ಕ್ರೂರವಾಗಿ ಆಟವಾಡಿತ್ತು.

ಶ್ರೀದೇವಿ ನಿಧನರಾಗುವ ಒಂದು ವಾರಕ್ಕೂ ಮುನ್ನ ಸೋದರ ಸಂಬಂಧಿ ಮದುವೆಗೆಂದು ಗಂಡ ಬೋನಿ ಕಪೂರ್​ ಮತ್ತು ಮಕ್ಕಳೊಂದಿಗೆ ದುಬೈಗೆ ತೆರಳಿದ್ದರು. ಮದುವೆ ಮುಗಿಸಿ ಬೋನಿ ಕಪೂರ್​ ಮತ್ತು ಮಕ್ಕಳು ಭಾರತಕ್ಕೆ ವಾಪಸಾದರೂ ಶ್ರೀದೇವಿ ಮಾತ್ರ ಕೆಲಸದ ನಿಮಿತ್ತ ಅಲ್ಲೇ ಉಳಿದುಕೊಂಡಿದ್ದರು. ಫೆಬ್ರವರಿ 24ರಂದು ರಾತ್ರಿ ಸ್ನಾನಕ್ಕೆಂದು ತೆರಳಿದ್ದ ಶ್ರೀದೇವಿ ಹೃದಯಾಘಾತವಾಗಿ ಬಾತ್​ಟಬ್​ನಲ್ಲಿ ಬಿದ್ದು ಕೊನೆಯುಸಿರೆಳೆದಿದ್ದರು.

ವಿಚಾರ ತಿಳಿದ ಕೂಡಲೇ ಬೋನಿ ಕಪೂರ್​ ಮತ್ತು ಮಕ್ಕಳು ದುಬೈಗೆ ತೆರಳಿದ್ದರು. ಬಳಿಕ ಮರುದಿನ ವಿಶೇಷ ವಿಮಾನದ ಮೂಲಕ ಶ್ರೀದೇವಿ ಮೃತದೇಹವನ್ನು ಮುಂಬೈಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಆದರೆ, ಶ್ರೀದೇವಿ ಸಾವಿನ ಬಗ್ಗೆ ಕೆಲವೊಂದು ಸಂಶಯಗಳು ಇನ್ನೂ ಹಾಗೆಯೇ ಉಳಿದುಕೊಂಡಿದೆ. ತಮ್ಮ ಸಾವಿನಲ್ಲೂ ನಿಗೂಢವಾಗಿಯೇ ಉಳಿದಿದ್ದಾರೆ. ನೆಚ್ಚಿನ ನಟಿಯನ್ನು ನೆನೆಯುತ್ತಾ ಇಂದಿಗೂ ಅಭಿಮಾನಿಗಳು ಕಣ್ಣೀರು ಮಿಡಿಯುತ್ತಿದ್ದಾರೆ.

ಇದನ್ನೂ ಓದಿ: ಶ್ರೀ ದೇವಿಯ 59 ನೇ ಜನ್ಮದಿನ.. ತಾಯಿ ನೆನೆದು ಹೃದಯಸ್ಪರ್ಶಿ ಶ್ರದ್ದಾಂಜಲಿ ಅರ್ಪಿಸಿದ ಪುತ್ರಿಯರು

ಶ್ರೀದೇವಿ ಸಿನಿ ಪಯಣ: ಶ್ರೀದೇವಿ ಅವರು ಬಾಲ್ಯದಲ್ಲೇ ಬೆಳ್ಳಿತೆರೆಗೆ ಪರಿಚಯವಾದರು. 1967ರಲ್ಲಿ ಬಿಡುಗಡೆಯಾದ ಕಣ್ಣನ್​ ಕರುಣೈ ಎಂಬ ಸಿನಿಮಾದ ಮೂಲಕ ಮೊದಲಿಗೆ ಕಾಣಿಸಿಕೊಂಡರು. ಬಳಿಕ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡರು. ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿರಿಸಿ ಏಕಕಾಲದಲ್ಲಿ ಬಹುಭಾಷೆಗಳಲ್ಲಿ ನಟಿಸಿ ನಂಬರ್​ ಒನ್​ ಚಲನಚಿತ್ರ ತಾರೆಯಾದರು. 80 ಮತ್ತು 90ರ ದಶಕದ ಬ್ಯೂಟಿಫುಲ್​ ಹೀರೋಯಿನ್​ ಆಗಿ, ತಮ್ಮ ನಟನಾ ಕೌಶಲ್ಯದಿಂದಲೇ ಯಶಸ್ಸನ್ನು ಗಿಟ್ಟಿಸಿಕೊಂಡರು.

ಮೂಲತಃ ತಮಿಳು ಕುಟುಂಬಕ್ಕೆ ಸೇರಿದ ಶ್ರೀದೇವಿ ದೊಡ್ಡ ಹೆಸರು ಮಾಡಿದ್ದು ಮಾತ್ರ ಬಾಲಿವುಡ್​ ಅಂಗಳದಲ್ಲಿ. ಅವರ ಸೌಂದರ್ಯ, ನಟನೆ ಮತ್ತು ನೃತ್ಯಕ್ಕೆ ಮನಸೋಲದವರಿಲ್ಲ. ಬೋನಿ ಕಪೂರ್​ ಜೊತೆ ಮದುವೆಯಾದ ನಂತರ ಕೆಲವು ವರ್ಷಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ಅತಿಲೋಕ ಸುಂದರಿ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ಕನ್ನಡದಲ್ಲೂ ಛಾಪು ಮೂಡಿಸಿರುವ ಶ್ರೀದೇವಿ, ಭಕ್ತಕುಂಬಾರ, ಹೆಣ್ಣು ಸಂಸಾರದ ಕಣ್ಣು, ಬಾಲ ಭಾರತ, ಯಶೋಧ ಕೃಷ್ಣ, ಪ್ರಿಯಾ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಪ್ರಶಸ್ತಿ - ಪುರಸ್ಕಾರ: ಸಿನಿರಂಗದ ಲೇಡಿ ಸೂಪರ್​ಸ್ಟಾರ್​ಗೆ ಪ್ರಶಸ್ತಿ ಪುರಸ್ಕಾರಗಳು ಒಲಿದು ಬಂದಿವೆ. 1971ರಲ್ಲಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2013ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಶಾದ್ಮಾ ಚಿತ್ರಕ್ಕಾಗಿ ಮೊದಲ ಬಾರಿಗೆ ಅತ್ಯುತ್ತಮ ನಟಿ ಫಿಲ್ಮ್​ ಫೇರ್​ ಪ್ರಶಸ್ತಿಯನ್ನು ಶ್ರೀದೇವಿ ಗಿಟ್ಟಿಸಿಕೊಂಡಿದ್ದಾರೆ. ತಮಿಳು ಸ್ಟಾರ್​ ರಜನಿಕಾಂತ್​, ಕಮಲ್​ ಹಾಸನ್​, ಬಾಲಿವುಡ್​ ಸ್ಟಾರ್​ ಅಮಿತಾ ಬಚ್ಚನ್​ ಜೊತೆಗೂ ಸಾಕಷ್ಟು ಸಿನಿಮಾಗಳಿಗಾಗಿ ತೆರೆ ಹಂಚಿಕೊಂಡಿದ್ದಾರೆ. ಜೊತೆಗೆ 7 ಸಿನಿಮಾಗಳಲ್ಲಿ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: 'ನಾನು ಈಗಲೂ ನಿನ್ನನ್ನು ಎಲ್ಲೆಡೆ ಹುಡುಕುತ್ತೇನೆ ಅಮ್ಮಾ': ಜಾನ್ವಿ ಕಪೂರ್ ಭಾವನಾತ್ಮಕ ಪೋಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.