ETV Bharat / entertainment

ಬಿಡುಗಡೆಗೂ ಮುನ್ನ 100 ಕಡೆಗಳಲ್ಲಿ 777 ಚಾರ್ಲಿ ಚಿತ್ರದ ಪ್ರೀಮಿಯರ್ ಶೋ : ರಕ್ಷಿತ್ ಶೆಟ್ಟಿ

author img

By

Published : Jun 6, 2022, 10:27 PM IST

777-charlie-100-premier-show-in-karnataka
ಬಿಡುಗಡೆಗೂ ಮುನ್ನ ಕರ್ನಾಟಕದಾದ್ಯಂತ 100 ಕಡೆಗಳಲ್ಲಿ 777 ಚಾರ್ಲಿ ಚಿತ್ರದ ಪ್ರೀಮಿಯರ್ ಶೋ : ರಕ್ಷಿತ್ ಶೆಟ್ಟಿ

777 ಚಾರ್ಲಿ ಸಿನಿಮಾದ ಬಿಡುಗಡೆಗೆ ನಾಲ್ಕು ದಿನ ಬಾಕಿ ಇದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿಯಲ್ಲಿ ಜೂನ್ 10ಕ್ಕೆ ವಿಶ್ವದಾದ್ಯಂತ ತೆರೆ ಕಾಣುತ್ತಿದೆ.

ಟ್ರೈಲರ್ ಹಾಗು ಹಾಡುಗಳಿಂದಲೇ ದಕ್ಷಿಣ ಭಾರತದಲ್ಲಿ ಸುದ್ದಿಯಾಗಿರುವ ಸಿನಿಮಾ 777 ಚಾರ್ಲಿ. ಅವನೇ ಶ್ರೀಮನ್ನಾರಾಯಣ ಸಿನಿಮಾ ಬಳಿಕ, ರಕ್ಷಿತ್ ಶೆಟ್ಟಿ ಅಭಿನಯಿಸಿರೋ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ. ಬಿಡುಗಡೆಗೂ ಮುನ್ನ 21 ನಗರಗಳಲ್ಲಿ ಪ್ರಾಣಿಪ್ರಿಯರಿಗಾಗಿ ಪ್ರೀಮಿಯರ್ ಶೋ ಮಾಡಲಾಗಿದ್ದು, ದೆಹಲಿ, ಮುಂಬಯಿ, ಅಹಮದಾಬಾದ್, ಅಮೃತಸದಲ್ಲಿ ಅದ್ಭುತ ಪ್ರದರ್ಶನ ಕಂಡಿದೆ. 777 ಚಾರ್ಲಿ ಸಿನಿಮಾದ ಬಿಡುಗಡೆಗೆ ನಾಲ್ಕು ದಿನ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ನಟ ರಕ್ಷಿತ್ ಶೆಟ್ಟಿ, ನಟಿ ಸಂಗೀತಾ ಶೃಂಗೇರಿ, ಬೇಬಿ ಶಾರ್ವರಿ, ನಿರ್ದೇಶಕ ಕಿರಣ್ ರಾಜ್, ಸಂಗೀತ ನಿರ್ದೇಶಕ ನೊಬಿನ್ ಪೌಲ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಹಾಗು ಕರ್ನಾಟಕದ ಜೊತೆಗೆ ವಿದೇಶಗಳಲ್ಲಿ ಬಿಡುಗಡೆ ಹೊಣೆ ಹೊತ್ತಿರುವ ವಿತರಕ ಕಾರ್ತೀಕ್‌ ಈ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದ್ದಾರೆ.

ಒಬ್ಬ ಮನುಷ್ಯ ಹಾಗು ಶ್ವಾನದ ನಡುವಿನ ಬಾಂಧವ್ಯದ ಕಥೆಯನ್ನು ಹೊಂದಿರುವ 777 ಚಾರ್ಲಿ ಸಿನಿಮಾದಲ್ಲಿ, ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿಯ ನಟನೆ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಒಬ್ಬ ಮನುಷ್ಯನ ಬಾಳಲ್ಲಿ ಚಾರ್ಲಿ ಎಂಬ ನಾಯಿಯ ಆಗಮನದಿಂದ ಏನೆಲ್ಲ ಆಗುತ್ತೆ ಅನ್ನೋದು 777 ಚಾರ್ಲಿ ಚಿತ್ರದ ಕಥೆ.

ಈ ಬಗ್ಗೆ ಮಾತನಾಡಿದ ರಕ್ಷಿತ್ ಶೆಟ್ಟಿ, ಈಗಾಗಲೇ ಹಲವು ನಗರಗಳಲ್ಲಿ 777 ಚಾರ್ಲಿ ಸಿನಿಮಾದ ಪ್ರಿಮಿಯರ್ ಶೋ ಮಾಡಿದ್ದೇವೆ. ಚಿತ್ರದ ವಿಷಯವಸ್ತು ಚೆನ್ನಾಗಿದ್ದರೆ ದೇಶದೆಲ್ಲಡೆ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ. ಈಗ ಸಿನಿಮಾ ಪ್ರೇಕ್ಷಕರು ಯಾವ ಸಿನಿಮಾ, ಚಿತ್ರಮಂದಿರಗಳಲ್ಲಿ ನೋಡಬೇಕು, ಯಾವ ಸಿನಿಮಾವನ್ನು ಓಟಿಟಿಯಲ್ಲಿ ನೋಡಬೇಕು ಎಂದು ಯೋಚನೆ ಮಾಡುತ್ತಾರೆ. ಸಿನಿಮಾದ ಚಿತ್ರೀಕರಣ ಮುಗಿದ ಮೇಲೆ, ಶ್ವಾನ ಚಾರ್ಲಿ ತುಂಬಾನೇ ಕಾಡುತ್ತದೆ ಎಂದು ಹೇಳಿದರು. ಈ ಚಿತ್ರದಲ್ಲಿ ಅಭಿನಯಿಸಿರುವ ಬೇಬಿ ಶಾರ್ವರಿ ಮಾತನಾಡಿ, ರಕ್ಷಿತ್ ಶೆಟ್ಟಿ ಅವರ ಜೊತೆ ಅಭಿನಯಿಸಿದ್ದು ಖುಷಿಯಾಗಿದೆ ಎಂದು ಹೇಳಿದರು.

ನಟಿ ಸಂಗೀತ ಶೃಂಗೇರಿ ಮಾತನಾಡಿ, ಈ ಸಿನಿಮಾ ಬಿಡುಗಡೆಗೂ ಮುನ್ನ ದೆಹಲಿ, ಹೈದರಾಬಾದ್, ಚೆನ್ನೈ, ಕೇರಳದಲ್ಲಿ ಪ್ರೀಮಿಯರ್ ಶೋ ಮಾಡಲಾಗಿದೆ. ಸಿನಿಮಾ ‌ನೋಡಿದ ಜನರು ತುಂಬಾನೇ ಇಷ್ಟ ಪಟ್ಟಿದ್ದಾರೆ. ಅದರಲ್ಲಿ ದೆಹಲಿಯಲ್ಲಿ ಮೇನಕಾ ಗಾಂಧಿ ಮೇಡಂ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು, ನಮ್ಮ ಸಿನಿಮಾಗೆ ಸಿಕ್ಕ ಪ್ರತಿಫಲ ಅಂದರು. ಸಂಗೀತ ನಿರ್ದೇಶಕ ನೊಬಿನ್ ಪೌಲ್ ಹಾಗು ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಕೂಡ ಇಂತಹ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ತುಂಬಾನೇ ನೆನಪಿನಲ್ಲಿ ಉಳಿಯುವ ಕ್ಷಣಗಳು ಎಂದು ಹೇಳಿದ್ದಾರೆ. ಈ ಚಿತ್ರದಲ್ಲಿ ರಾಜ್‌ ಬಿ. ಶೆಟ್ಟಿ, ಡ್ಯಾನ್​, ಬಾಬಿ ಸಿಂಹ, ಬೇಬಿ ಶಾರ್ವರಿ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ.

ಬಳಿಕ ಸಿನಿಮಾದ ನಿರ್ದೇಶಕ ಕಿರಣ್ ರಾಜ್ ಮಾತನಾಡಿ, ಉತ್ತರಭಾರತದಲ್ಲಿ ನಮ್ಮ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ತುಂಬಾ ಶ್ರಮಪಟ್ಟು ಸಿನಿಮಾ ಮಾಡಿದ್ದೇವೆ. ಇದರ ಜೊತೆಗೆ ಚಾರ್ಲಿ ಬಗ್ಗೆ ಒಂದು ಗಂಟೆಯ ಡಾಕ್ಯುಮೆಂಟರಿ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಚಿತ್ರವನ್ನು ಕರ್ನಾಟಕ ಅಲ್ಲದೇ ವಿದೇಶಗಳಲ್ಲಿ ಬಿಡುಗಡೆ ಹೊಣೆ ಹೊತ್ತಿರುವ ಕಾರ್ತಿಕ್ ಗೌಡ, ಹೇಳುವ ಹಾಗೇ ಕರ್ನಾಟಕದಲ್ಲಿ 300, ತೆಲುಗಿನಲ್ಲಿ 100, ತಮಿಳಿನಲ್ಲಿ 100, ಮಲೆಯಾಳಂ ನಲ್ಲಿ 100, ನೇಪಾಳದಲ್ಲಿ 100 ಅಮೆರಿಕ ಸೇರಿದಂತೆ, ವಿಶ್ವಾದ್ಯಂತ 1000 ಚಿತ್ರಮಂದಿರಗಳಲ್ಲಿ 777 ಚಾರ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಬಿಡುಗಡೆಗೂ ಮುನ್ನ, ತಾರೀಕು 8 ಮತ್ತು 9 ರಂದು, ಬೆಂಗಳೂರಿನಲ್ಲಿ 55 ಹಾಗು ಇತರೆ ಜಿಲ್ಲೆಗಳಲ್ಲಿ 45 ಸೇರಿದಂತೆ ಒಟ್ಟು 100 ಕಡೆಗಳಲ್ಲಿ ಪ್ರಿಮಿಯರ್ ಶೋ ಮಾಡ್ತಾ ಇರೋದು, ಇದೇ ಮೊದಲು ಎಂದು ಹೇಳಿದರು. ಈ ಮೂಲಕ 777 ಚಾರ್ಲಿ ಸಿನಿಮಾದ ಹೊಸ ದಾಖಲೆ ಬರೆಯಲಿದೆ ಎಂದು ಹೇಳಿದರು‌. ಪರಮ್ ಸ್ಟುಡಿಯೋಸ್ ಅಡಿಯಲ್ಲಿ ಜಿ‌.ಎಸ್ ಗುಪ್ತಾ ಹಾಗು ರಕ್ಷಿತ್ ಶೆಟ್ಟಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗು ಹಿಂದಿಯಲ್ಲಿ 777 ಚಾರ್ಲಿ ಸಿನಿಮಾ, ಜೂನ್ 10ಕ್ಕೆ ವಿಶ್ವಾದ್ಯಂತ ತೆರೆ ಕಾಣುತ್ತಿದೆ.

ಓದಿ :ಚಾರ್ಲಿ ಸಿನಿಮಾ ನೋಡಿದ ಮೇಲೆ ಪ್ರತಿಯೊಬ್ಬರು ಶ್ವಾನವನ್ನು ಪ್ರೀತಿಸುತ್ತಾರೆ : ರಕ್ಷಿತ್ ಶೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.