ETV Bharat / city

ಜನರಲ್ಲಿ ಜಾಗೃತಿ ಮೂಡಿಸಿ ಸರಗಳ್ಳತನಕ್ಕೆ ಕಡಿವಾಣ : ತುಮಕೂರು ಪೊಲೀಸರಿಂದ ವಿಭಿನ್ನ ಪ್ರಯತ್ನ

author img

By

Published : Aug 1, 2021, 6:33 PM IST

Tumkur
ಜನರಲ್ಲಿ ಜಾಗೃತಿ ಮೂಡಿಸಿ ಸರಗಳ್ಳತನಕ್ಕೆ ಕಡಿವಾಣ

ಇಲ್ಲದಿದ್ದರೆ ಸರಗಳ್ಳರ ಬಂದು ಹೇಗೆ ಆಭರಣಗಳನ್ನು ಕಸಿದುಕೊಂಡು ಹೋಗುತ್ತಾರೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಅಲ್ಲದೆ ಮನೆ ಮುಂದೆ ಸಿಸಿಟಿವಿ ಕ್ಯಾಮೆರಾಗಳಿದ್ದರೆ ಅವುಗಳಲ್ಲಿ ಸರಗಳ್ಳರ ಕುರಿತು ಮಾಹಿತಿ ಇದ್ದರೆ ಅದನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಳ್ಳಿ ಎಂದು ತಿಳಿಸುತ್ತಿದ್ದಾರೆ..

ತುಮಕೂರು : ರಾಜ್ಯದಲ್ಲಿ ಕೋವಿಡ್ ಅಬ್ಬರ ತಗ್ಗಿದ್ದು, ಲಾಕ್‌ಡೌನ್ ತೆರವುಗೊಳಿಸಲಾಯಿತು ಎನ್ನುತ್ತಿದ್ದಂತೆ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸುವುದು ಪೊಲೀಸ್ ಇಲಾಖೆಗೆ ಸವಾಲಿನ ಕೆಲಸವಾಗಿದೆ. ಮುಖ್ಯವಾಗಿ ಸರಗಳ್ಳತನಕ್ಕೆ ಇಳಿದಿರುವ ದುಷ್ಕರ್ಮಿಗಳ ತಂಡವನ್ನು ಹೆಡೆಮುರಿ ಕಟ್ಟಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಸರಗಳ್ಳತನಕ್ಕೆ ಕಡಿವಾಣ ಹಾಕಲು ವಿಭಿನ್ನ ಪ್ರಯತ್ನ…

ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 7 ಸರಗಳ್ಳತನ ಪ್ರಕರಣ ನಡೆದಿವೆ. ಕುಣಿಗಲ್ ತಾಲೂಕು ವ್ಯಾಪ್ತಿಯಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಸರಗಳ್ಳತನ ಪ್ರಕರಣ ವರದಿಯಾಗಿವೆ. ಅದರಲ್ಲಿ 2 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ಹುಲಿಯೂರು ದುರ್ಗ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬೈಕ್​​ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಸರಗಳ್ಳತನ ಮಾಡಿದ್ದ ವೇಳೆ ಮಹಿಳೆ ಬೈಕ್​​ನಿಂದ ಬಿದ್ದು ಮೃತಪಟ್ಟಿದ್ದರು. ಕೇವಲ ಸರಗಳ್ಳರನ್ನು ಸೆರೆಹಿಡಿದು ಮಾತ್ರವಲ್ಲ.

ಬದಲಾಗಿ ಜನರು ಇಂತಹ ಪ್ರಕರಣಗಳಿಂದ ಪಾರಾಗುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಇದನ್ನು ಮನಗಂಡ ಜಿಲ್ಲಾ ಪೊಲೀಸ್ ಇಲಾಖೆ ವಿಭಿನ್ನ ಯೋಜನೆಯೊಂದನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದೆ.

ಜನರಲ್ಲಿ ಜಾಗೃತಿ : ನಿತ್ಯ ತುಮಕೂರು ನಗರದ ಒಂದಿಲ್ಲೊಂದು ಪ್ರದೇಶದಲ್ಲಿ ಜನರನ್ನು ಒಟ್ಟುಗೂಡಿಸಿ ಸರಗಳ್ಳರಿಂದ ಪಾರಾಗುವುದು ಹೇಗೆ? ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ದಿನ ವಾಕಿಂಗ್ ಹೋಗುವ ಸಂದರ್ಭದಲ್ಲಿ, ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ತಾವು ಧರಿಸಿರುವ ಚಿನ್ನಾಭರಣಗಳನ್ನು ಸುರಕ್ಷಿತವಾಗಿ ಇರಿಸಿಕೊಂಡು ಓಡಾಡಬೇಕು.

ಇಲ್ಲದಿದ್ದರೆ ಸರಗಳ್ಳರ ಬಂದು ಹೇಗೆ ಆಭರಣಗಳನ್ನು ಕಸಿದುಕೊಂಡು ಹೋಗುತ್ತಾರೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಅಲ್ಲದೆ ಮನೆ ಮುಂದೆ ಸಿಸಿಟಿವಿ ಕ್ಯಾಮೆರಾಗಳಿದ್ದರೆ ಅವುಗಳಲ್ಲಿ ಸರಗಳ್ಳರ ಕುರಿತು ಮಾಹಿತಿ ಇದ್ದರೆ ಅದನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಳ್ಳಿ ಎಂದು ತಿಳಿಸುತ್ತಿದ್ದಾರೆ.

ತಂಡ ರಚನೆ : ತುಮಕೂರು ನಗರದಲ್ಲಿ ನಡೆದಿರುವ ಪ್ರಕರಣಗಳ ಆರೋಪಿಗಳನ್ನು ಒಂದು ವಾರದೊಳಗೆ ಪತ್ತೆ ಹಚ್ಚಲು ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದರು.

ಲಾಕ್​​ಡೌನ್‌ನಿಂದ ಕೆಲಸವಿಲ್ಲದೆ ಓಡಾಡುತ್ತಿರುವ ವ್ಯಕ್ತಿಗಳು ಸಹ ಸರಗಳ್ಳತನಕ್ಕೆ ಮುಂದಾಗಿರುವುದು ಬೆಳಕಿಗೆ ಬಂದಿದೆ. ಸುಲಭವಾಗಿ ಹಣ ಸಂಪಾದನೆ ಮಾಡುವಂತಹ ಮಾರ್ಗವನ್ನು ದುಷ್ಕರ್ಮಿಗಳು ಕಂಡುಕೊಂಡಿದ್ದಾರೆ. ಎರಡು ಪ್ರಕರಣಗಳಲ್ಲಿ ಬಂಧಿತರಾಗಿರುವ ಆರೋಪಿಗಳು ಕೆಲಸವಿಲ್ಲದೆ ಜೀವನ ನಡೆಸಲು ಸರಗಳ್ಳತನಕ್ಕೆ ಇಳಿದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಬನಶಂಕರಿ ದೇವಾಲಯದಲ್ಲಿ ಕಳ್ಳತನ ಮಾಡಿರುವ ಆರೋಪ: ಪ್ರಧಾನ ಅರ್ಚಕರ ಮನೆಗೆ ನುಗ್ಗಿ ದಾಂಧಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.