ETV Bharat / city

ಮನೆಗೆ ಮುತ್ತಿಗೆ ಹಾಕಿದವರು ನಮ್ಮವರೇ, ಕರೆದು ಬುದ್ಧಿ ಹೇಳುತ್ತೇವೆ: ಗೃಹ ಸಚಿವ ಆರಗ ಜ್ಞಾನೇಂದ್ರ

author img

By

Published : Jul 30, 2022, 8:15 PM IST

Updated : Jul 30, 2022, 10:49 PM IST

ಗೃಹ ಸಚಿವ
ಗೃಹ ಸಚಿವ

ಮನೆಗೆ ಮುತ್ತಿಗೆ ಹಾಕಿದವರೆಲ್ಲ ನಮ್ಮವರೇ, ಕರೆದು ಬುದ್ಧಿ ಹೇಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ: ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಖಂಡಿಸಿ ಮನೆಗೆ ಮುತ್ತಿಗೆ ಹಾಕಿದವರೆಲ್ಲರೂ ನಮ್ಮ ಹುಡುಗರೇ, ಕರೆದು ಅವರಿಗೆ ಬುದ್ಧಿ ಹೇಳುತ್ತೇವೆ ಎಂದು ಸಂಜೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತಿಭಟನೆಗೆ ಬಂದಾಗ ಕೆಲವರು ಅತಿರೇಕದಿಂದ ವರ್ತಿಸಿದ್ದಾರೆ. ಅದರಲ್ಲಿ ಕೆಲವರು ಒಂದೆರಡು ಪಾಟ್ ಒಡೆದು ಹಾಕಿದ್ದಾರೆ. ಅವರೆಲ್ಲಾ ಬಂದಿದ್ದು, ಎಸ್​​ಎಫ್​​ಐ ಹಾಗೂ ಮತಾಂಧ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ಬಂದಿದ್ದರು. ನಾನು ಮನೆಯಲ್ಲಿ ಇಲ್ಲದಾಗ ಸಹಜವಾಗಿ ಮನೆಯಲ್ಲಿ ಯಾರೂ ಇರಲ್ಲ, ಒಂದಿಬ್ಬರು ಪೊಲೀಸರು ಇರ್ತಾರಷ್ಟೇ. ಭದ್ರತೆಗೆ ನಾನು ಮೊದಲೇ ಹೆಚ್ಚಿನ ಪೊಲೀಸ್ ಬೇಡ ಎಂದು ಹೇಳಿದ್ದೇನೆ.‌ ಆದರೆ, ಗೃಹ ಸಚಿವರಿಗೆ ನೀಡಬೇಕಾದ ಭದ್ರತೆ ನೀಡಿದ್ದಾರೆ. ಇಂದು ನಮ್ಮ ಮನೆಗೆ ಬಂದವರು ಸಲುಗೆಯಿಂದ ಬಂದಿದ್ದಾರೆ ಎಂದು ಸಚಿವರು ನಕ್ಕರು.

ಗೃಹ ಸಚಿವರ ಪ್ರತಿಕ್ರಿಯೆ

ನಾವು ಫಾಝಿಲ್ ಮನೆಗೆ ಹೋಗಬಾರದೆಂದು ಇಲ್ಲ: ನಾವು ಅಂದು ಮಂಗಳೂರಿಗೆ ಹೋದಾಗ ರಾತ್ರಿ ಕೊಲೆ ಆಗಿದೆ. ಅಲ್ಲದೆ ನಾವು ಬೆಂಗಳೂರಿಗೆ ವಾಪಸ್ ಹೋಗಬೇಕಾಗಿದ್ದ ಕಾರಣ ಫಾಝಿಲ್ ಮನೆಗೆ ಹೋಗಲು ಆಗಿಲ್ಲ. ಅವರ ಮನೆಗೆ ಹೋದ್ರೆ ನಮ್ಮದೇನು ಘನತೆ ಹೋಗಲ್ಲ. ಅಲ್ಲದೆ, ಅಲ್ಲಿನ ಪರಿಸ್ಥಿತಿ ಸರಿ ಇಲ್ಲದ ಕಾರಣ ನಾವು ಹೋಗಲು ಆಗಲಿಲ್ಲ ಎಂದು ಗೃಹ ಸಚಿವರು ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ 32 ಜನ ಹಿಂದೂ ಕಾರ್ಯಕರ್ತರ ಕೊಲೆಯಾದಾಗ ಅವರೇನು ರಾಜೀನಾಮೆ ನೀಡಿದ್ರಾ ಎಂದು ತಮ್ಮ‌ ರಾಜೀನಾಮೆ ಕೇಳಿದ್ದಕ್ಕೆ ಸಚಿವ ಜ್ಞಾನೇಂದ್ರ ಖಾರವಾಗಿ ಪ್ರತಿಕ್ರಿಯಿಸಿದರು.

(ಇದನ್ನೂ ಓದಿ: ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ: ಎಬಿವಿಪಿಯ 30 ಜನರ ವಿರುದ್ಧ ಎಫ್ಐಆರ್, ಇಬ್ಬರು ಪಿಎಸ್​ಐ ಅಮಾನತು)

ಪತ್ರಕರ್ತರ ಮೇಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಲ್ಲೆ, ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಪತ್ರಕರ್ತರಿಂದ ಮನವಿ: ಕೋಲಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ವರದಿ ಮಾಡಲು ಹೋಗಿದ್ದ ವರದಿಗಾರರ ಮೇಲೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹಲ್ಲೆ ಮಾಡಿರುವುದನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಶಿವಮೊಗ್ಗ ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸಿದೆ. ಪತ್ರಕರ್ತರ ಮೇಲಿನ ಇಂತಹ‌ ಹಲ್ಲೆ ಮತ್ತು ದೌರ್ಜನ್ಯಗಳನ್ನು ಸಂಘವು ಸಹಿಸುವುದಿಲ್ಲ. ಕೂಡಲೇ ರಮೇಶ್ ಕುಮಾರ್ ಕ್ಷಮೆ ಕೇಳಬೇಕು ಹಾಗೂ ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ಗೃಹ ಸಚಿವರಿಗೆ ಮನವಿ
Last Updated :Jul 30, 2022, 10:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.