ETV Bharat / city

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಇಬ್ಬರು ಆರೋಪಿಗಳ ಬಂಧನ

author img

By

Published : Oct 27, 2021, 5:51 PM IST

Mysore
ಉದ್ಯೋಗ ಕೊಡಿಸುವುದಾಗಿ ವಂಚನೆ: ಇಬ್ಬರು ಆರೋಪಿಗಳ ಬಂಧನ

ಮೈಸೂರು ರೈಲ್ವೆ ವಿಭಾಗದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಹಳ್ಳಿ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಸಂಗ್ರಹಿಸಿ, ನಕಲಿ ನೇಮಕಾತಿ ಆದೇಶಗಳನ್ನು ಇವರು ನೀಡುತ್ತಿದ್ದರು..

ಮೈಸೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ನಕಲಿ ನೇಮಕಾತಿ ಪತ್ರ ನೀಡಿ ವಂಚಿಸುತ್ತಿದ್ದ, ಇಬ್ಬರು ಆರೋಪಿಗಳನ್ನು ಮೈಸೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಚಂದ್ರಗೌಡ.ಎಸ್.ಪಾಟೀಲ್ (44) ಹಾಗೂ ಗದಗ ಮೂಲದ ರೈಲ್ವೆ ಇಲಾಖೆಯ ನಿವೃತ್ತ ನೌಕರ ಶಿವಸ್ವಾಮಿ ಬಂಧಿತ ಆರೋಪಿಗಳು. ಈ ಆರೋಪಿಗಳು, ಮೈಸೂರು ರೈಲ್ವೆ ವಿಭಾಗದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಹಳ್ಳಿ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಸಂಗ್ರಹಿಸಿ, ನಕಲಿ ನೇಮಕಾತಿ ಆದೇಶಗಳನ್ನು ನೀಡುತ್ತಿದ್ದರು.

ವಂಚನೆ ನಡೆಯುತ್ತಿದ್ದದ್ದು ಹೇಗೆ?

ನಗರದ ಹೈವೇ ಸರ್ಕಲ್​ನ ಬಳಿ ಮನೆಯೊಂದರಲ್ಲಿ ಈ ನಕಲಿ ನೇಮಕಾತಿ ಪತ್ರ ನೀಡಿ ವಂಚಿಸುತ್ತಿದ್ದರು. ಆರೋಪಿಗಳು ರೈಲ್ವೆ ಆವರಣದಲ್ಲಿರುವ ಆಸ್ಪತ್ರೆಯ ಆವರಣದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದರು. ಈ ಸಂಬಂಧ ಮೈಸೂರಿನ ಮುಖ್ಯ ವೈದ್ಯಕೀಯ ಅಧೀಕ್ಷಕರು ಈ ಬಗ್ಗೆ ದೂರು ದಾಖಲಿಸಿದ್ದರು.

ದೂರಿನ ಆಧಾರದ ಮೇಲೆ ರೈಲ್ವೆ ಭದ್ರತಾ ವಿಭಾಗದ ಆಯುಕ್ತರ ಆದೇಶದ ಮೇರೆಗೆ ಕಾರ್ಯಾಚರಣೆ ನಡೆಸಿದ ರೈಲ್ವೆ ಭದ್ರತಾ ಪಡೆಯ ಸಿಬ್ಬಂದಿ, ಆರೋಪಿಗಳನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ಬಂಧಿತರು ಸುಮಾರು 400 ಅಭ್ಯರ್ಥಿಗಳಿಗೆ ವಂಚಿಸಿ ಸುಮಾರು 22 ಕೋಟಿಗೂ ಹೆಚ್ಚು ಹಣವನ್ನು ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ.

ಬಂಧಿತರಿಂದ 221 ಸಹಿ ಮಾಡಿದ ಖಾಲಿ ಚೆಕ್, ಅಭ್ಯರ್ಥಿಗಳ ಮೂಲ ದಾಖಲೆ, ಚೆಕ್ ಪುಸ್ತಕ, ಸುಮಾರು 100 ನಕಲಿ ರೈಲ್ವೆ ನೇಮಕಾತಿ ಆದೇಶಗಳು, 70 ಟಿಟಿಯಿಗಳ ನಕಲಿ ನಾಮಫಲಕಗಳು, ಒಂದು ಲ್ಯಾಪ್ ಟಾಪ್, ಒಂದು ಕಂಪ್ಯೂಟರ್ ಸೇರಿದಂತೆ 4,15,000 ರೂ. ನಗದು ವಶಕ್ಕೆ ಪಡೆಯಲಾಗಿದೆ. ಸದ್ಯ ಈ ಇಬ್ಬರು ಆರೋಪಿಗಳನ್ನು ಮೈಸೂರಿನ ಮಂಡಿಮೊಹಲ್ಲಾ ಪೊಲೀಸ್ ಠಾಣೆಗೆ ಮುಂದಿನ ಕಾನೂನು ಪ್ರಕ್ರಿಯೆಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ಮಂಡ್ಯ: ಮಾರಕಾಸ್ತ್ರಗಳಿಂದ ಕೊಚ್ಚಿ ಆಟೋ ಚಾಲಕನ ಹತ್ಯೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.