ETV Bharat / city

ಗಣಿಗಾರಿಕೆ ನಡೆಸಿದವರೇ ಗುಂಡಿ ತುಂಬಿಸುವುದು ಕಡ್ಡಾಯ;‌ ಸಚಿವ ಸಿ.ಸಿ. ಪಾಟೀಲ

author img

By

Published : Jan 7, 2021, 5:23 PM IST

strict-action-to-fill-the-soil-with-mining-place
ಸಿಸಿ ಪಾಟೀಲ್

ಗಣಿಗಾರಿಕೆ ನಡೆಸಿದವರು ಗಣಿಗಾರಿಕೆ ನಡೆಸಿದ ಪ್ರದೇಶವನ್ನು ಮಣ್ಣು ಹಾಕಿ ತುಂಬಿಸುವಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

ಮಂಗಳೂರು: ಸರಕಾರಿ ಜಮೀನಿನಲ್ಲಿ ಗಣಿಗಾರಿಕೆ ನಡೆಸುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಗಣಿಗಾರಿಕೆಯನ್ನು ಬಂದ್ ಮಾಡಿಸಲಾಗುತ್ತದೆ. ಅಲ್ಲದೆ, ಈಗಾಗಲೇ ಗಣಿಗಾರಿಕೆ ನಡೆಸಿದವರು ಗಣಿಗಾರಿಕೆ ನಡೆಸಿದ ಪ್ರದೇಶವನ್ನು ಮಣ್ಣು ಹಾಕಿ ತುಂಬಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಗಣಿಗಾರಿಕೆ ನಡೆಸಿದಲ್ಲಿ‌ ಮಣ್ಣು ಹಾಕಿ ತುಂಬಿಸಲು ಕಟ್ಟುನಿಟ್ಟಿನ ಕ್ರಮ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಟಾಸ್ಕ್ ಫೋರ್ಸ್ ಸಭೆಯ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಂಪು ಕಲ್ಲು ಕ್ವಾರಿಗಳಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಿ ಅರ್ಜಿ ಪಡೆಯಲಾಗಿದ್ದು, ಈಗಾಗಲೇ 250 ಮಂದಿ ಸರಕಾರಕ್ಕೆ ರಾಜಧನ ಸಲ್ಲಿಸಿ ಗಣಿಗಾರಿಕೆ ನಡೆಸುವ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಕಾರಣಕ್ಕೂ ಗಣಿಗಾರಿಕೆ ನಡೆಸಿದ ಮಣ್ಣು ಸಾಗಿಸುವಂತಿಲ್ಲ ಎಂದು ಹೇಳಿದರು.

ಮರಳು ಟೆಂಡರ್​​​

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹೊಸ ಮರಳು ನೀತಿಯನ್ನು ಜಾರಿಗೆ ತಂದಿದ್ದು, ಶಂಭೂರು ಹಾಗೂ ಅದ್ಯಪಾಡಿಯಲ್ಲಿ ಹೂಳೆತ್ತಲು ಟೆಂಡರ್ ಕರೆಯಲಾಗಿದೆ. ತುಂಬೆ ಅಣೆಕಟ್ಟಿನಲ್ಲಿ ಮರಳು ತೆಗೆಯಲು ಟೆಂಡರ್ ಕರೆಯಬೇಕೆಂದು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ 30 ಪ್ಲಾಂಟ್​ಗಳಲ್ಲಿ ಮರಳು ತೆಗೆಯಲು ಗುರುತಿಸಲಾಗಿದ್ದು, 10ಸಾವಿರ ಮೆಟ್ರಿಕ್ ಟನ್​ಗೂ ಹೆಚ್ಚು ಮರಳು ಇರುವಲ್ಲಿ ಎನ್ಎಂಎಲ್ ನಿಂದ ಟೆಂಡರ್ ಕರೆಯಲಾಗಿದೆ ಎಂದು ಸಿ.ಸಿ. ಪಾಟೀಲ ಹೇಳಿದರು.

ಕೆಂಪು ಕಲ್ಲು ತೆಗೆಯಲು 250 ಅರ್ಜಿ

ಉಡುಪಿ ಹಾಗೂ ದ.ಕ. ಜಿಲ್ಲೆಗಳಲ್ಲಿ ಅನುಮತಿ ಇಲ್ಲದೆ ಕೆಂಪು ಕಲ್ಲು ತೆಗೆಯುವ ಕ್ವಾರಿಗಳಿವೆ. ಈಗ ಕೆಂಪು ಕಲ್ಲು ಗಣಿಗಾರಿಕೆ ನಡೆಸಲು 250 ಮಂದಿ ಅನುಮತಿ ಕೇಳಿದ್ದು, ಅವರ ಅರ್ಜಿಗಳನ್ನು ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಿ ಕಾನೂನು ಚೌಕಟ್ಟು ಮೀರದಂತೆ ಗಣಿಗಾರಿಕೆ ನಡೆಸಲು ಪಟ್ಟಾ ಭೂಮಿಯಲ್ಲಿ ಅವಕಾಶ ನೀಡಲಾಗಿದೆ‌.

ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ಕ್ರಮ

ಸರಕಾರಿ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸ್ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ‌. ಈ ಮೂಲಕ‌ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಸಾಗಾಟ ಮಾಡುತ್ತಿರುವುದನ್ನು ಮುಂದಿನ‌ ದಿನಗಳಲ್ಲಿ ಸಂಪೂರ್ಣ ನಿಲ್ಲಿಸಲಾಗುತ್ತದೆ ಎಂದರು.

60 ಕ್ರಶರ್​​ ಆರಂಭಕ್ಕೆ ಸೂಚನೆ

ಸಿಆರ್ ಝಡ್ ನಲ್ಲಿ ಸಾಂಪ್ರದಾಯಿಕವಾಗಿ ಮರಳು ತೆಗೆಯಲು‌ 104 ಜನರಿಗೆ ಈಗಾಗಲೇ ಅನುಮತಿ ನೀಡಲಾಗಿತ್ತು. ಈಗ ಅದನ್ನು ಹೆಚ್ಚು ಮಾಡಲು ಆಲೋಚನೆ ನಡೆಸಲಾಗಿದೆ. ಉಡುಪಿಯಲ್ಲಿ ನಮ್ಮ ಸರಕಾರ ಬಂದ ಬಳಿಕ 37 ಕ್ರಶರ್​ಗಳನ್ನು ನಿಲ್ಲಿಸಲಾಗಿದೆ‌. ಉಡುಪಿ ಜಿಲ್ಲಾಧಿಕಾರಿ ಈ ಬಗ್ಗೆ ಕ್ರಮ ಕೈಗೊಂಡು 37 ಕ್ರಶರ್ ಗಳನ್ನು ಆರಂಭಿಸಿದ್ದಾರೆ‌. ಆದ್ದರಿಂದ ಅಲ್ಲಿನ ಜನರ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿದೆ. ಮಂಗಳೂರಿನಲ್ಲಿ 60 ಕ್ರಶರ್​ಗಳಿದ್ದು, ಇದನ್ನು ಆರಂಭಿಸಲು‌ ಜಿಲ್ಲಾಧಿಕಾರಿ 15 ದಿನಗಳಲ್ಲಿ ಕ್ರಮಕೈಗೊಳ್ಳಲಿದ್ದಾರೆ ಎಂದು ಸಿ.ಸಿ. ಪಾಟೀಲ ಹೇಳಿದರು.

ಹಿಂದಿನ ಸರ್ಕಾರದ ತಪ್ಪು ಮರುಕಳಿಸಲು ಬಿಡುವುದಿಲ್ಲ

ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಮಾತನಾಡಿ, ಹಿಂದಿನ ಸರಕಾರ ‌ಮಾಡಿರುವ ತಪ್ಪು ಮತ್ತೆ ಮರುಕಳಿಸದಂತೆ‌ ನಿಯಮಗಳನ್ನು ಮಾಡಲಾಗಿದೆ. ಎಲ್ಲಿ ಗಣಿಗಾರಿಕೆ ನಡೆದಿದೆಯೋ ಅದನ್ನು ಮಣ್ಣು ಹಾಕಿ ತುಂಬಿಸುವ ಕೆಲಸ ಗುತ್ತಿಗೆದಾರನದ್ದು, ಇಲ್ಲದಿದ್ದಲ್ಲಿ ಆತನ ಪರವಾನಿಗೆ ರದ್ದುಪಡಿಸಲಾಗುವುದು ಎಂದರು.

ಇದಲ್ಲದೆ ದ.ಕ. ಜಿಲ್ಲೆಯ ಮರಳು ಮಾಫಿಯಾವನ್ನು ಸಂಪೂರ್ಣ ನಿಲ್ಲಿಸಲಾಗಿದೆ. ‌ಈಗ ಯೂನಿಟ್​ಗೆ 2 ಸಾವಿರ ರೂ.ಗೆ ಮರಳು ನೀಡುತ್ತಿದ್ದೇವೆ. ಆದ್ದರಿಂದ ಮರಳು ಮಾಫಿಯಾ ಸಂಪೂರ್ಣ ಸ್ಥಗಿತಗೊಂಡಿದೆ. ಜೊತೆಗೆ ರೆಡ್ ಬಾಕ್ಸೈಟ್ ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸಲಾಗಿದೆ ಎಂದು ಹೇಳಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.