ETV Bharat / city

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಐವರು ಆರೋಪಿಗಳು ಎನ್​ಐಎ ವಶಕ್ಕೆ

author img

By

Published : Aug 19, 2022, 12:58 PM IST

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಐವರು ಆರೋಪಿಗಳು ಎನ್​ಐಎ ವಶಕ್ಕೆ
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಐವರು ಆರೋಪಿಗಳು ಎನ್​ಐಎ ವಶಕ್ಕೆ

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳನ್ನು ಎನ್​ಐಎ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ.

ಸುಳ್ಯ (ದಕ್ಷಿಣ ಕನ್ನಡ): ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಗುರುವಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಮ್ಮ ಕಸ್ಟಡಿಗೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಪ್ರಕರಣದ ಆರೋಪಿಗಳಾದ ನೌಫಲ್ (28), ಸೈನುಲ್ ಆಬಿದ್ (22), ಮೊಹಮ್ಮದ್ ಸೈಯದ್ (32), ಅಬ್ದುಲ್ ಬಶೀರ್ (29) ಮತ್ತು ರಿಯಾಜ್ (27) ಅವರನ್ನು ಎನ್‌ಐಎ ಆರು ದಿನಗಳ ಕಾಲ (ಆ.23ರ ವರೆಗೆ) ವಶಕ್ಕೆ ಪಡೆದುಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ಅವರನ್ನು ರಸ್ತೆಯಲ್ಲಿ ಭೀಕರವಾಗಿ ಆರೋಪಿಗಳು ಹತ್ಯೆ ಮಾಡಿದ್ದರು. ಕಾನೂನುಬಾಹಿರ ಚಟುವಟಿಕೆಗಳ ತಡೆ (ಯುಎಪಿಎ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳ್ಳಾರೆ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿರುವ ಎನ್‌ಐಎ ಅಧಿಕಾರಿಗಳು, ಗುರುವಾರ ಐವರು ಆರೋಪಿಗಳನ್ನು ಆರು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಐವರು ಆರೋಪಿಗಳು ಮಂಗಳೂರು ಜೈಲಿನಲ್ಲಿದ್ದು, ಅಲ್ಲಿಂದಲೇ ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತನಿಖೆ ಚುರುಕುಗೊಳಿಸಿದ ಎನ್​​ಐಎ: ಆರೋಪಿಗಳು ಹತ್ಯೆ ಮಾಡಿದ ಬಳಿಕ ಕೇರಳದ ಕಾಸರಗೋಡು ವಿನ ಬೇಕಲ ರೋಡ್​​ನಲ್ಲಿರುವ ಮಾಲಿಕುದ್ದೀನ್ ಮಸೀದಿಯಲ್ಲಿ ತಂಗಿದ್ದರು. ಆ ಬಳಿಕ ಅವರು ಎಲ್ಲಿಗೆ ಹೋಗಿದ್ದರು ಎಂಬುದನ್ನು ತನಿಖೆ ಮಾಡಬೇಕಾಗಿದೆ. ಎಲ್ಲೆಲ್ಲಿ ಬಚ್ಚಿಟ್ಟುಕೊಂಡಿದ್ದರು, ಅವರಿಗೆ ಯಾರು ಆಶ್ರಯ ನೀಡಿದರು, ಯಾವ ಉದ್ದೇಶಕ್ಕಾಗಿ ಪ್ರವೀಣ್ ಹತ್ಯೆ ಮಾಡಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ಮಾಡಬೇಕಾಗಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಶಫೀಕ್ ಎಂಬಾತನ ತಂದೆ ಇಬ್ರಾಹಿಂ ಅವರು ಪ್ರವೀಣ್ ನೆಟ್ಟಾರು ಅವರ ಚಿಕನ್ ಶಾಪ್​ನಲ್ಲಿ ಹಿಂದೆ ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದರು.

ಇನ್ನು ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆಗಳು ನಡೆಯುತ್ತಿದೆ. ಮುಖ್ಯ ಆರೋಪಿಗಳ ನಾಪತ್ತೆಗಾಗಿ ಸಹಕಾರ ಮಾಡಿದವರ ವಿರುದ್ಧವೂ ಕ್ರಮ ಆಗಲಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದರು. ಪ್ರವೀಣ್ ಹತ್ಯೆಯ ಆರೋಪಿಗಳನ್ನು ಕೊಲೆ ಮಾಡಿದ ಸ್ಥಳಕ್ಕೆ ಕರೆತಂದು ಈಗಾಗಲೇ ಮಹಜರು ಮಾಡಲಾಗಿದೆ.

ಹಾಗೆಯೇ ರಾಜ್ಯಾದ್ಯಂತ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕ್ರಮಕ್ಕೆ ಆಗ್ರಹಿಸಿದ್ದರು. ಪರಿಣಾಮವಾಗಿ ಪ್ರಕರಣವನ್ನು ಕರ್ನಾಟಕ ಸರ್ಕಾರ ಎನ್​ಐಎಗೆ ವಹಿಸಿತ್ತು. ಜೊತೆಗೆ ಸರ್ಕಾರ ಹಾಗೂ ಬಿಜೆಪಿ ಪಕ್ಷದಿಂದ ತಲಾ 25 ಲಕ್ಷ ರೂ ಪರಿಹಾರವನ್ನು ಪ್ರವೀಣ್ ಕುಟುಂಬಕ್ಕೆ ವಿತರಿಸಲಾಗಿದೆ.

ಪ್ರವೀಣ್ ಹತ್ಯೆಯಾದ ಬಳಿಕ ದಕ್ಷಿಣ ಕನ್ನಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಸುದ್ದಿ ಮಾಸುವ ಮುನ್ನವೇ ಮಂಗಳೂರಲ್ಲಿ ಸಾರ್ವಜನಿಕರ ಮಧ್ಯೆಯೇ ಅಲ್ಪಸಂಖ್ಯಾತ ಯುವಕನೋರ್ವನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಆ ಬಳಿಕ ಮಂಗಳೂರು ಉದ್ವಿಗ್ನಗೊಂಡಿದ್ದರಿಂದ ಜಿಲ್ಲಾಡಳಿತ ನಿಷೇಧಾಜ್ಞೆ ವಿಧಿಸಿತ್ತು.

(ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೈದ ಪ್ರಮುಖ ಮೂವರು ಆರೋಪಿಗಳು ಅರೆಸ್ಟ್)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.