ETV Bharat / city

ರಸ್ತೆ ಹೊಂಡದಿಂದ ಯುವಕನ‌ ಸಾವು: ಪಾಲಿಕೆ ಮುಂದೆ ಸ್ನೇಹಿತನ ಏಕಾಂಗಿ ಪ್ರತಿಭಟನೆ

author img

By

Published : Aug 12, 2022, 8:17 PM IST

Likhit Rai protesting in front of the corporation
ಪಾಲಿಕೆ ಮುಂದೆ ಪ್ರತಿಭಟಿಸುತ್ತಿರುವ ಲಿಖಿತ್​ ರೈ

ಗೆಳೆಯನ ಸಾವಿನ ಬಳಿಕ 'ಪಾಟ್ ಹೋಲ್​ ಸೆ ಆಝಾದಿ' ಎಂಬ ಅಭಿಯಾನವನ್ನು ಆರಂಭಿಸಿರುವ ಲಿಖಿತ್ ರೈ, ಬಂಟ್ವಾಳದಿಂದ ಸುರತ್ಕಲ್ ಎನ್​ಐಟಿಕೆ ಟೋಲ್‌ಗೇಟ್​ವರೆಗಿನ ಹೆದ್ದಾರಿಯಲ್ಲದೆ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಿಸಲು ಆಗ್ರಹಿಸುತ್ತಿದ್ದಾರೆ.

ಮಂಗಳೂರು: ನಗರದ ಬಿಕರ್ನಕಟ್ಟೆ ಸಮೀಪ ಕಂಡೆಟ್ಟು ಕ್ರಾಸ್ ಬಳಿ ಆಗಸ್ಟ್​ 5 ರಂದು ರಸ್ತೆಯಲ್ಲಿದ್ದ ಹೊಂಡದಿಂದ ಅಪಘಾತಕ್ಕೀಡಾಗಿ ದ್ವಿಚಕ್ರ ವಾಹನ ಸವಾರ ಅತೀಶ್ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಸ್ನೇಹಿತ ಲಿಖಿತ್ ರೈ ಗುರುವಾರ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ಏಕಾಂಗಿಯಾಗಿ ಪ್ರತಿಭಟಿಸಿದ್ದಾರೆ.

ಗೆಳೆಯನ ಸಾವಿನ ಬಳಿಕ 'ಸುಗಮ ಸಂಚಾರಕ್ಕಾಗಿ ಉತ್ತಮ ರಸ್ತೆ ನಿರ್ಮಿಸಿ' ಎಂಬ ಆಗ್ರಹದೊಂದಿಗೆ ನಾಗರಿಕರ ಸಹಕಾರದೊಂದಿಗೆ 'ಪಾಟ್ ಹೋಲ್​ ಸೆ ಆಝಾದಿ' (ರಸ್ತೆ ಗುಂಡಿಗಳಿಂದ ಸ್ವಾತಂತ್ರ್ಯ) ಎಂಬ ಅಭಿಯಾನವನ್ನು ಆರಂಭಿಸಿರುವ ಲಿಖಿತ್ ರೈ ಅವರು ಬಂಟ್ವಾಳದಿಂದ ಸುರತ್ಕಲ್ ಎನ್​ಐಟಿಕೆ ಟೋಲ್‌ಗೇಟ್​ವರೆಗಿನ ಹೆದ್ದಾರಿಯಲ್ಲದೆ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಿಸಲು ಆಗ್ರಹಿಸುತ್ತಿದ್ದಾರೆ.

ಸ್ನೇಹಿತ ಅತೀಶ್ ರಸ್ತೆ ಹೊಂಡದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಕೇವಲ ಪ್ರಕರಣ ದಾಖಲಿಸಿದರೆ ಸಾಲದು, ಅತೀಶ್‌ಗೆ ಸೂಕ್ತ ನ್ಯಾಯ ಸಿಗಬೇಕು. ರಾಜಕಾರಣಿಗಳ, ಅಧಿಕಾರಿಗಳ ಮಕ್ಕಳಿಗೆ ಇಂತಹ ಸ್ಥಿತಿ ಬಂದಿದ್ದರೆ ಅವರು ಇದನ್ನೆಲ್ಲಾ ಸಹಿಸಿಕೊಳ್ಳುತ್ತಿದ್ದರಾ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮನಪಾ ಜಂಟಿ ಆಯುಕ್ತ ರವಿಕುಮಾರ್, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಹೊಂಡ ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಅತೀಶ್ ಆ.5 ರಂದು ಸಂಜೆ ನಂತೂರು ಜಂಕ್ಷನ್ ಕಡೆಯಿಂದ ಬಿಕರ್ನಕಟ್ಟೆ ಕೈಕಂಬ ಕಡೆಯ ರಸ್ತೆಯಲ್ಲಿ ತೆರಳುತ್ತಿದ್ದಾಗ ಕಂಡೆಟ್ಟು ಕ್ರಾಸ್ ಬಳಿ ಡಿವೈಡರ್ ಪಕ್ಕದಲ್ಲಿದ್ದ ಮಳೆನೀರು ತುಂಬಿದ್ದ ಹೊಂಡವನ್ನು ಗಮನಿಸದೆ ಕೊನೆಯ ಕ್ಷಣದಲ್ಲಿ ಹೊಂಡ ತಪ್ಪಿಸಲು ಯತ್ನಿಸಿದ್ದರು. ಈ ವೇಳೆ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದು ಸುಮಾರು 50 ಅಡಿ ದೂರಕ್ಕೆ ಎಸೆಯಲ್ಪಟ್ಟು ಮೃತಪಟ್ಟಿದ್ದರು.

ಇದನ್ನೂ ಓದಿ : ರಸ್ತೆ ಗುಂಡಿ ನೀರಲ್ಲೇ ಸ್ನಾನ, ಧ್ಯಾನ ಮಾಡಿದ ವ್ಯಕ್ತಿ; ದುರವಸ್ಥೆ ವಿರೋಧಿಸಿ ಹೀಗೊಂದು ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.