ETV Bharat / city

4ನೇ ಅಭ್ಯರ್ಥಿ ಗೆಲುವಿಗೆ ಮೂರೂ ಪಕ್ಷಗಳಲ್ಲಿಯೂ ಸಿದ್ಧವಾಗಿದೆ ಕಾರ್ಯತಂತ್ರ: ಗರಿಗೆದರಿದ ಕುತೂಹಲ

author img

By

Published : Jun 10, 2022, 11:30 AM IST

ರಾಜ್ಯಸಭೆ ಚುನಾವಣೆಯಲ್ಲಿ ನಾಲ್ಕನೇ ಅಭ್ಯರ್ಥಿ ಗೆಲುವಿಗಾಗಿ ಮೂರು ಪಕ್ಷಗಳಲ್ಲಿಯೂ ಕಾರ್ಯತಂತ್ರ ಸಿದ್ಧವಾಗಿದ್ದು, ಕುತೂಹಲ ಕೆರಳಿಸಿದೆ.

Three parties Strategy for fourth candidate winning, Rajya Sabha election, Rajya Sabha voting, Rajya Sabha polls 2023, ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಮೂರು ಪಕ್ಷಗಳ ತಂತ್ರ, ರಾಜ್ಯಸಭಾ ಚುನಾವಣೆ, ರಾಜ್ಯಸಭಾ ಮತದಾನ, ರಾಜ್ಯಸಭಾ ಚುನಾವಣೆ 2023,
ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಮೂರು ಪಕ್ಷಗಳಲ್ಲಿಯೂ ಸಿದ್ಧವಾಗಿದೆ ಕಾರ್ಯತಂತ್ರ

ಬೆಂಗಳೂರು: ರಾಜ್ಯಸಭೆ ಚುನಾವಣೆ ಅಖಾಡ ಕ್ಷಣದಿಂದ ಕ್ಷಣಕ್ಕೆ ತೀವ್ರ ಕುತೂಹಲ ಮೂಡಿಸುತ್ತಿದೆ. 122 ಸದಸ್ಯರ ಬಲ ಹೊಂದಿರುವ ಬಿಜೆಪಿ ಗೆಲುವಿಗಾಗಿ ತನ್ನ ಲೆಕ್ಕಾಚಾರ ಹೆಣೆಯುತ್ತಿದೆ. ಕಾಂಗ್ರೆಸ್ ಪಕ್ಷ ತನ್ನದೇ ಆದ ತಂತ್ರಗಾರಿಕೆ ರೂಪಿಸುತ್ತಿದೆ. ಆದರೆ, ಮತದಾನ ಪ್ರಕ್ರಿಯೆ ಆರಂಭವಾಗಿ ಎರಡು ಗಂಟೆ ಕಳೆದರೂ ಜೆಡಿಎಸ್ ಸದಸ್ಯರು ಮಾತ್ರ ಮತದಾನ ಕೇಂದ್ರದ ಬಳಿ ಬಾರದೇ ಕುತೂಹಲ ಮೂಡಿಸುತ್ತಿದ್ದಾರೆ.

ಮತದಾನ ಆರಂಭವಾದ ಎರಡು ಗಂಟೆಯ ನಂತರ ಬಿಜೆಪಿಯ 105, ಕಾಂಗ್ರೆಸ್ 39 ಹಾಗೂ ಜೆಡಿಎಸ್ ನ 07 ಸದಸ್ಯರು ಮತದಾನ ಮಾಡಿದ್ದಾರೆ. ಜೆಡಿಎಸ್ ಸದಸ್ಯರ ನಿರಾಸಕ್ತಿ ಸಾಕಷ್ಟು ಕುತೂಹಲ ಮೂಡಿಸುತ್ತಿದ್ದು, ಗೆಲುವಿಗಾಗಿ ರಾಜಕೀಯ ನಾಯಕರು ರೂಪಿಸುತ್ತಿರುವ ತಂತ್ರಗಾರಿಕೆ ಅಚ್ಚರಿಯಾಗಿದೆ.

ಓದಿ: ರಾಜ್ಯಸಭೆ ಚುನಾವಣೆ: ನಿರ್ಮಲಾ ಸೀತಾರಾಮನ್​​​ಗೆ 46 ಪ್ರಥಮ ಪ್ರಾಶಸ್ತ್ಯದ ಮತ ಚಲಾವಣೆ

ಬಿಜೆಪಿ ಲೆಕ್ಕಾಚಾರ: ತಮ್ಮ ಅಭ್ಯರ್ಥಿ ಗೆಲುವಿಗೆ ಬಿಜೆಪಿ ವಿಶೇಷ ತಂತ್ರಗಾರಿಕೆ ರೂಪಿಸಿದ್ದು, ನಿರ್ಮಲಾ ಸೀತಾರಾಮನ್ ಗೆಲುವಿಗೆ ಮೊದಲ ಪ್ರಾಶಸ್ತ್ಯದ 46 ಸದಸ್ಯರ ಮತ ಚಲಾಯಿಸಿದೆ. ಪಕ್ಷದ ಎರಡನೇ ಅಭ್ಯರ್ಥಿ ಜಗ್ಗೇಶ್​ಗೆ ಮೊದಲ ಪ್ರಾಶಸ್ತ್ಯ ದ 44 ಹಾಗೂ ದ್ವಿತೀಯ ಪ್ರಾಶಸ್ತ್ಯ 32 ಮತ ನೀಡಲು ತಂತ್ರಗಾರಿಕೆ ಹೆಣೆಯಲಾಗಿದೆ. ಮೂರನೇ ಅಭ್ಯರ್ಥಿ ಲೆಹರ್ ಸಿಂಗ್​​​​ಗೆ 32 ಮೊದಲ ಪ್ರಾಶಸ್ತ್ಯದ ಹಾಗೂ ದ್ವಿತೀಯ ಪ್ರಾಶಸ್ತ್ಯದ 90 ಮತ ನೀಡಲು ತೀರ್ಮಾನಿಸಿದ್ದು, ಮೂವರ ಗೆಲುವಿಗೆ ತಂತ್ರಗಾರಿಕೆ ಸಿದ್ಧಪಡಿಸಲಾಗಿದೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಯಾವ ರೀತಿಯ ತಂತ್ರಗಾರಿಕೆ ರೂಪಿಸಲಿದೆ ಹಾಗೂ ಜೆಡಿಎಸ್ ಪಕ್ಷದ ನಿಲುವೇನು ಎನ್ನುವುದು ಇದುವರೆಗೂ ತಿಳಿದು ಬರುತ್ತಿಲ್ಲ. ಸದ್ಯ ಮತದಾನದಿಂದ ದೂರವೇ ಉಳಿದಿರುವ ಜೆಡಿಎಸ್ ಸದಸ್ಯರು ಯಾವ ಸಮಯಕ್ಕೆ ಬರಲಿದ್ದಾರೆ ಮತ್ತು ಎಷ್ಟು ಸದಸ್ಯರು ಮತದಾನ ಮಾಡಲಿದ್ದಾರೆ ಎಂಬುದು ಸ್ಪಷ್ಟವಾಗುತ್ತಿಲ್ಲ. ಎಲ್ಲ ಪಕ್ಷಗಳು ತಮ್ಮ ಸದಸ್ಯರಿಗೆ ವಿಪ್ ಜಾರಿಗೊಳಿಸಿದ್ದು, ನಿಯಮ ಮೀರಿದವರಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಕಾಂಗ್ರೆಸ್ ನತ್ತ ಮುಖ ಮಾಡಿರುವ ಜೆಡಿಎಸ್ ಶಾಸಕರ ನಿಲುವು ಏನು ಎನ್ನುವುದು ಇದುವರೆಗೂ ಬಗೆಹರಿದಿಲ್ಲ. ಮತದಾನಕ್ಕೆ ಆಗಮಿಸುತ್ತಾರೋ ಅಥವಾ ತಟಸ್ಥವಾಗಿ ಉಳಿಯುತ್ತಾರೆ ಎಂಬ ಮಾಹಿತಿಯೂ ಇಲ್ಲವಾಗಿದೆ. ದುಬೈಗೆ ತೆರಳಿದ್ದ ಜೆಡಿಎಸ್ ಶಾಸಕ ಗೌರಿಶಂಕರ್ ನಿನ್ನೆ ರಾತ್ರಿ ವಾಪಸಾಗಿದ್ದಾರೆ. ಈ ಹಿನ್ನೆಲೆ ಜೆಡಿಎಸ್ ಕೊಂಚ ನಿರಾಳವಾಗಿದೆ.

ಒಟ್ಟಾರೆ ರಾಜಕೀಯ ನಾಯಕರ ತಂತ್ರಗಾರಿಕೆ ಸಂಜೆಯ ಹೊತ್ತಿಗೆ ಸ್ಪಷ್ಟವಾಗಲಿದೆ. ನಾಲ್ಕನೇ ಅಭ್ಯರ್ಥಿಯಾಗಿ ಮೂವರಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಸ್ಪಷ್ಟತೆ ಲಭಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.