ETV Bharat / city

ಪೇಪರ್ ತೂರಿದ ಮರಿತಿಬ್ಬೇಗೌಡ ಅಮಾನತಿಗೆ ಬಿಜೆಪಿ ಪಟ್ಟು: ಪರಿಷತ್​ನಲ್ಲಿ ಕೋಲಾಹಲ..!

author img

By

Published : Feb 4, 2021, 2:00 PM IST

jds-member-maritibbegowda-and-bjp-leaders-clash
ಪೇಪರ್ ತೂರಿದ ಮರಿತಿಬ್ಬೇಗೌಡರ ಅಮಾನತಿಗೆ ಬಿಜೆಪಿ ಪಟ್ಟು, ಪರಿಷತ್​ನಲ್ಲಿ ಗದ್ದಲ ಕೋಲಾಹಲ..!

ಪ್ರಶ್ನೋತ್ತರ ಕಲಾಪದ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಕೋಲಾಹಲ ಉಂಟಾದ ಕಾರಣ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಯಿತು. ಸದಸ್ಯ ಮರಿತಿಬ್ಬೇಗೌಡ ಸದನದಲ್ಲಿ ಪೇಪರ್​ ತೂರಿದ್ದರಿಂದ ಗದ್ದಲ ಉಂಟಾಯಿತು.

ಬೆಂಗಳೂರು: ಸದನದಲ್ಲಿ ಕಾಗದಪತ್ರ ಎಸೆದು ದುರ್ವರ್ತನೆ ತೋರಿದ ಆರೋಪದ ಮೇಲೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡರನ್ನು ಸದನದಿಂದ ಅಮಾನತುಗೊಳಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದ ಪರಿಣಾಮ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಕೋಲಾಹಲವುಂಟಾದ ಕಾರಣ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಯಿತು.

ಪ್ರಶ್ನೋತ್ತರ ಕಲಾಪದ ವೇಳೆ ಮಂಡ್ಯ ಜಿಲ್ಲೆ ನೀರಾವರಿ ಯೋಜನೆಗಳ ತಡೆ ಹಿಡಿದಿರುವ ಕುರಿತು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪರ ಉತ್ತರ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಹಣಕಾಸು ಲಭ್ಯತೆ ಮೇಲೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಮಂಜೂರಾದ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿಲ್ಲ ಎಂದ ಮಾತ್ರಕ್ಕೆ ಹಣ ನೀಡಿಲ್ಲ ಎಂದು ತಡೆ ಹಿಡಿಯಲಾಗಿದೆ ಎನ್ನುವುದು ಸರಿಯಲ್ಲ. ಒಂದು ವಾರದಲ್ಲಿ ಎಲ್ಲ ವಿವರ ಒದಗಿಸಿಕೊಡಲಾಗುತ್ತದೆ. ನಿಮ್ಮ ಜಿಲ್ಲೆಯ ಯಾವ ಯೋಜನೆಗೂ ತಡೆ ಹಿಡಿದಿಲ್ಲ. ಹಣಕಾಸು ಲಭ್ಯತೆ ಆಧಾರದಲ್ಲಿ ಯೋಜನೆಗಳ ಕಾಮಗಾರಿ ಆರಂಭ ಮಾಡಲಾಗುತ್ತದೆ ಎಂದರು.

ಗೃಹ ಸಚಿವರ ಉತ್ತರದಿಂದ ಅಸಮಧಾನ‌ಗೊಂಡ ಸದಸ್ಯ ಮರಿತಿಬ್ಬೇಗೌಡ, ವಿವರವಿದ್ದ ಕಾಗದವನ್ನು ಸದನದಲ್ಲಿ ತೂರಿ ಆಕ್ರೋಶ ವ್ಯಕ್ತಪಡಿಸಿದರು.‌ ಮರಿತಿಬ್ಬೇಗೌಡರ ಈ ವರ್ತನೆಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಆದರೂ ಟೀಕಾ ಪ್ರಹಾರ ನಡೆಸಿದ ಮರಿತಿಬ್ಬೇಗೌಡ ನಡೆಗೆ ಕೆರಳಿದ ಬೊಮ್ಮಾಯಿ, ಏನು ಹೆದರಿಸುತ್ತೀರಾ? ಆ ಕಾಲ ಹೋಗಿದೆ. ಈಗ ಅದೆಲ್ಲಾ ನಡೆಯಲ್ಲ‌ ಎಂದು ಏರು ದನಿಯಲ್ಲಿ ತಿರುಗೇಟು ನೀಡಿದರು. ಇದಕ್ಕೆ ಪ್ರತಿಯಾಗಿ ನಿಮಗೆಲ್ಲಾ ನಾನೂ ಬೆದರಲ್ಲ ಎಂದು ಮರಿತಿಬ್ಬೇಗೌಡ ಟಾಂಗ್ ನೀಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಪ್ರಶ್ನೆ ಕೇಳಲು, ಪ್ರತಿಕ್ರಿಯೆ ನೀಡಲು ರೀತಿ ನೀತಿ ಇದೆ. ಅಶಿಸ್ತು ತೋರಿ ಪೇಪರ್ ಎಸೆದಿದ್ದಾರೆ. ಸದನದಲ್ಲಿ ಹೇಗಿರಬೇಕು ಎಂದು ತಿಳಿಸುವ ಸಮಿತಿ ಅಧ್ಯಕ್ಷರಾಗಿದ್ದವರೇ, ಈಗ ಅಶಿಸ್ತು ತೋರಿದ್ದಾರೆ. ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಇದನ್ನು ಬಿಜೆಪಿ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು‌.

ಓದಿ: ಹಾರ ಕಿತ್ತು ಸಚಿವರ ವಿರುದ್ಧ ಅಸಮಾಧಾನ ಹೊರ ಹಾಕಿದ ಮಾಜಿ ಶಾಸಕ ಕಾಶಪ್ಪನವರ

ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಸಚಿವರು ಸರಿಯಾದ ಉತ್ತರ ಕೊಟ್ಟಿದ್ದಾರೆ. ಸದಸ್ಯರೂ ಸರಿಯಾಗಿಯೇ ಕೇಳಿದ್ದಾರೆ. ಎಮೋಷನಲ್​​ನಲ್ಲಿ ಒಮ್ಮೊಮ್ಮೆ ಹೀಗಾಗಲಿದೆ, ಇದನ್ನು ಇಲ್ಲಿಗೆ ಬಿಡಿ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಮರಿತಿಬ್ಬೇಗೌಡರು ಯಾವಾಗಲೂ ಇದೇ ರೀತಿಯ ವರ್ತನೆ ತೋರುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಸದನದಿಂದ ಅಮಾನತು ಮಾಡಿ ಎಂದು ಆಗ್ರಹಿಸಿದರು.

ಇದಕ್ಕೆ ಸಾಥ್​ ನೀಡಿದ ಸಚಿವ ಮಾಧುಸ್ವಾಮಿ, ಮರಿತಿಬ್ಬೇಗೌಡರನ್ನು ಅಮಾನತು ಮಾಡಬೇಕು. ಇಷ್ಟ ಬಂದ ಹಾಗೆ ವರ್ತಿಸಲು ಆಗಲ್ಲ. ಏನಾಗಲಿದೆಯೋ ಆಗಲಿ ಅಮಾನತು ಮಾಡಿ ಎಂದರು. ಈ ವೇಳೆ ಸದನದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದನ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಉಪ ಸಭಾಪತಿ ಪ್ರಾಣೇಶ್ ಸದನವನ್ನು 10 ನಿಮಿಷ ಮುಂದೂಡಿಕೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.