ETV Bharat / city

ಚಲನಚಿತ್ರೋತ್ಸವ, ಏರ್ ಶೋ ದುಂದು ವೆಚ್ಚವಲ್ಲ : ಸಚಿವ ಜಗದೀಶ್ ಶೆಟ್ಟರ್

author img

By

Published : Mar 16, 2021, 2:16 PM IST

ಗೋವಾದಲ್ಲಿಯೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಅದೇ ರೀತಿ ಬೆಂಗಳೂರಿನಲ್ಲಿಯೂ ನಡೆಯುತ್ತದೆ. ವಿದೇಶದ ಗಣ್ಯರು ಇದರಲ್ಲಿ ಭಾಗಿಯಾಗಲಿದ್ದಾರೆ. ಅದೇ ರೀತಿ ಏರ್ ಶೋಗೆ ಮಾಡುವ ವೆಚ್ಚ ದುಂದು ವೆಚ್ಚ ಅಲ್ಲ. ದುಂದು ವೆಚ್ಚ ಮಾಡುವುದು ಸರ್ಕಾರದ ಉದ್ದೇಶವಲ್ಲ. ಅಂತಹದ್ದು ಮನಸ್ಸಿನಲ್ಲಿ ಇದ್ದರೆ ತೆಗೆದು ಹಾಕಿ, ತಜ್ಞರು ನೀಡಿದ ಸಲಹೆಯಂತೆ ಈ ಬಾರಿಯ ಚಿತ್ರೋತ್ಸವ ಮುಂದೂಡಿಕೆ ಮಾಡಲಾಗಿದೆ..

Film festival, air show is not Expenditure
ಚಲನಚಿತ್ರೋತ್ಸವ, ಏರ್ ಶೋ ದುಂದು ವೆಚ್ಚವಲ್ಲ: ಜಗದೀಶ್ ಶೆಟ್ಟರ್

ಬೆಂಗಳೂರು : ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಯಾಗಲಿ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಆಯೋಜನೆಯಾಗಲಿ ದುಂದುವೆಚ್ಚವಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ.

ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದ ವೇಳೆ ಮೋಹನ್ ಕುಮಾರ್ ಕೊಂಡಜ್ಜಿ ಅವರು ಚಲನಚಿತ್ರೋತ್ಸವದ ಹೆಸರಿನಲ್ಲಿ ದುಂದುವೆಚ್ಚ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2020ರಲ್ಲಿ ₹2.45 ಕೋಟಿ ಹಣವನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಗೆ ವೆಚ್ಚ ಮಾಡಲಾಗಿದೆ.

ನಮ್ಮ ಅವಧಿಯಲ್ಲಿ ಹೊಸದಾಗಿ ಚಿತ್ರೋತ್ಸವ ನಡೆಯಿತ್ತಿಲ್ಲ. ಅದು ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಅದಕ್ಕೆ‌ ಸಮಿತಿ‌ ವೆಚ್ಚ ನಿಗದಿ ಮಾಡಲಿದೆ. ಅದು ದುಂದುವೆಚ್ಚ ಅಲ್ಲ. ಹಾಗಾದರೆ, ಇಷ್ಟು ವರ್ಷ ನಡೆಸಿದ್ದಕ್ಕೆ ಕೊಂಡಜ್ಜಿ ಅವರ ಉತ್ತರವೇನು? ದುಂದು ವೆಚ್ಚ ಮಾಡುವುದು ಸರ್ಕಾರದ ಉದ್ದೇಶವಲ್ಲ. ಅಗತ್ಯವಿರುವ ವೆಚ್ಚವನ್ನು ಸರ್ಕಾರ ಮಾಡುತ್ತಿದೆ ಎಂದರು.

ಗೋವಾದಲ್ಲಿಯೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಅದೇ ರೀತಿ ಬೆಂಗಳೂರಿನಲ್ಲಿಯೂ ನಡೆಯುತ್ತದೆ. ವಿದೇಶದ ಗಣ್ಯರು ಇದರಲ್ಲಿ ಭಾಗಿಯಾಗಲಿದ್ದಾರೆ. ಅದೇ ರೀತಿ ಏರ್ ಶೋಗೆ ಮಾಡುವ ವೆಚ್ಚ ದುಂದು ವೆಚ್ಚ ಅಲ್ಲ. ದುಂದು ವೆಚ್ಚ ಮಾಡುವುದು ಸರ್ಕಾರದ ಉದ್ದೇಶವಲ್ಲ. ಅಂತಹದ್ದು ಮನಸ್ಸಿನಲ್ಲಿ ಇದ್ದರೆ ತೆಗೆದು ಹಾಕಿ, ತಜ್ಞರು ನೀಡಿದ ಸಲಹೆಯಂತೆ ಈ ಬಾರಿಯ ಚಿತ್ರೋತ್ಸವ ಮುಂದೂಡಿಕೆ ಮಾಡಲಾಗಿದೆ ಎಂದರು.

ಬೋವಿ ಕಲ್ಲುಕುಟಕರಿಗೆ ಅನುಕೂಲದ ಭರವಸೆ : ನೂತನ ಗಣಿ ನೀತಿಯಲ್ಲಿ ಬೋವಿ ಸಮುದಾಯದ ಕಲ್ಲುಕುಟಿಕ ವೃತ್ತಿನಿರತ ಬಡವರಿಗೆ ಅನುಕೂಲ ಕಲ್ಪಿಸುವ ಅಂಶವನ್ನು ಸೇರಿಸಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಗೋವಿಂದರಾಜು ಅವರು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಪ್ಪಡಿಗಲ್ಲು ಹೊಡೆದ ಜೀವನ ಸಾಗಿಸುತ್ತಿರುವವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೋವಿ ಸಮುದಾಯದವರು ರಾಜ್ಯದಲ್ಲಿ ವಂಶಪಾರಂಪರ್ಯವಾಗಿ ಕಲ್ಲುಗಣಿ ಮಾಡಿಕೊಂಡು ಬಂದಿದ್ದಾರೆ.

ಅವರಿಗೆ ತೊಂದರೆಯಾಗಿದೆ. ಇದು ಸರ್ಕಾರದ ಗಮನಕ್ಕೆ ಬಂದಿದೆ. ಹೊಸ ಗಣಿನೀತಿ ತರಲಾಗುತ್ತಿದೆ. ಅದರಲ್ಲಿ ಇವರಿಗೆಲ್ಲಾ ಅನುಕೂಲ ಮಾಡಿಕೊಡುವ ಕೆಲಸ ಮಾಡಲಾಗುತ್ತದೆ ಎಂದರು. ಪರವಾನಗಿ ಇಲ್ಲದಿದ್ದರೆ, ಕಾನೂನುಬಾಹಿರ ಗಣಿಗಾರಿಕೆ ಎನ್ನಲಾಗುತ್ತದೆ. ಹಾಗಾಗಿ, ಹರಾಜು ಇಲ್ಲದೆ ಸರ್ಕಾರಿ ಜಮೀನಿನಲ್ಲಿ ಉಪ ಖನಿಜ ನಿಕ್ಷೇಪಗಳನ್ನು ತೆಗೆಯಲು ಹಾಗೂ ಗಣಿಗಾರಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಆದರೆ, ಸಂಬಂಧಪಟ್ಟವರಿಂದ ಎನ್ಒಸಿ ಪಡೆದುಕೊಳ್ಳಬೇಕು. ಬೋವಿ ಸಮುದಾಯಕ್ಕೆ ದುಬಾರಿ ದಂಡದ ಬಗ್ಗೆ ಗಮನಕ್ಕೆ ಬಂದಿದೆ. ಅದಕ್ಕಾಗಿಯೇ ಸಣ್ಣ-ಸಣ್ಣ ಗಣಿಗಾರಿಕೆ, ಹೊಲಗಳಲ್ಲಿ ಗಣಿಗಾರಿಕೆ ಮಾಡುತ್ತಿರುವ ಮಾಹಿತಿ ತರಿಸಿಕೊಳ್ಳಲಾಗುತ್ತದೆ. ಗಣಿ‌ ನೀತಿಯಲ್ಲಿ ಸಮಸ್ಯೆ ಪರಿಹರಿಸಿ, ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.

ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್​ನಲ್ಲಿ ಬದಲಾವಣೆ : ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್​ನಲ್ಲಿ ಬದಲಾವಣೆ ತರಲು ಸರ್ಕಾರ ನಿರ್ಧರಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರನ್ನು ಸೇರಿಸುವುದು ಹಾಗೂ ಪರಿಷತ್ ಸದಸ್ಯರಿಗೆ ಅವರ ವ್ಯಾಪ್ತಿಯ ಎಲ್ಲಾ ತಾಲೂಕುಗಳಲ್ಲಿ ಅವಕಾಶ ಕಲ್ಪಿಸುವ ಕುರಿತು ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಶ್ರೀಕಂಠೇಗೌಡ ಅವರು 2015-16ನೇ ಸಾಲಿನಿಂದ ಈವರೆಗೆ ರಾಜ್ಯದಲ್ಲಿ ಕಿರು ಖನಿಜಗಳ ಗಣಿಗಾರಿಕೆಯಿಂದ ಸಂಗ್ರಹವಾಗುವ ಅಭಿವೃದ್ಧಿ ನಿಧಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈವರೆಗೂ 2336 ಕೋಟಿ ಸಂಗ್ರಹವಾಗಿದೆ 700ಕ್ಕೂ ಹೆಚ್ಚು ಕೋಟಿ ಹಣವನ್ನು ನಾವು ಕವರ್ ಮಾಡಿದ್ದೇವೆ ಎಂದರು.

ಹಿಂದೆ ನಮ್ಮ ಸರ್ಕಾರ ಇರಲಿಲ್ಲ. ಗಣಿ ಭೂ ವಿಜ್ಞಾನ ಸಚಿವರು ಟ್ರಸ್ಟ್​ನ ಸದಸ್ಯರಲ್ಲ. ಡಿಸಿ, ಶಾಸಕರು, ಪರಿಷತ್​ನ ಓರ್ವ ಸದಸ್ಯರು ಸಮಿತಿಗೆ ಸದಸ್ಯರಿರಲಿದ್ದಾರೆ. ಮತದಾನದ ಹಕ್ಕು ಇರುವ ಜಿಲ್ಲೆಯ ಯಾವುದಾದರೂ ಒಂದು ತಾಲೂಕಿನಲ್ಲಿ ಸದಸ್ಯತ್ವ ಪಡೆಯಬಹುದು. ಇದು ಹಿಂದಿನಿಂದ ನಡೆದುಕೊಂಡು ಬಂದಿದೆ.

ಶಾಸಕರ ರೀತಿ ಪರಿಷತ್ ಸದಸ್ಯರು ಜಿಲ್ಲೆಯ ಎಲ್ಲಾ ಸಭೆಗೂ ಹೋಗುವ ಕುರಿತು ಸಿಎಂ ಜೊತೆ ಚರ್ಚೆ ನಡೆಸಿ ನಿರ್ಧರಿಸಲಾಗುತ್ತದೆ. ಅವಕಾಶ ಕಲ್ಪಿಸುವುದರಿಂದ ಏನೂ ಸಮಸ್ಯೆ ಆಗಲ್ಲ. ಅಧಿಕಾರಿಗಳ ಜೊತೆ‌ ಚರ್ಚಿಸಿ ಕ್ರಮಕೈಗೊಳ್ಳಲಾಗುತ್ತದೆ. ಸಮಿತಿಯಲ್ಲಿ ಬದಲಾವಣೆ ತರಲಾಗುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಪರಿಷತ್ ಸದಸ್ಯರ ಕ್ಷೇತ್ರ ವ್ಯಾಪ್ತಿಯ ಎಲ್ಲಾ ತಾಲೂಕಿನ ಸಮಿತಿಯಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಆರು ತಿಂಗಳಲ್ಲಿ ಮಹಿಳಾ ಪಾರ್ಕ್ : ಬೀದರ್ ಜಿಲ್ಲೆಯಲ್ಲಿ ಮೂರರಿಂದ ಆರು ತಿಂಗಳಿನಲ್ಲಿ ಮಹಿಳಾ ಪಾರ್ಕ್ ಅಭಿವೃದ್ಧಿಪಡಿಸಿ, ಮಹಿಳಾ ಉದ್ಯಮಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಅರುಣ್‌ಕುಮಾರ್ ಅರಳಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಹಿಳಾ ಪಾರ್ಕ್ ಅಭಿವೃದ್ಧಿ ಬಗ್ಗೆ ಸದಸ್ಯರು ಪ್ರಶ್ನೆ ಕೇಳಿದ್ದಾರೆ.

ಈಗಾಗಲೇ ಮೈಸೂರು, ಧಾರವಾಡ, ಹಾರೋಹಳ್ಳಿಯಲ್ಲಿ ಮಹಿಳಾ ಪಾರ್ಕ್ ಅಭಿವೃದ್ಧಿ ಮಾಡಲಾಗಿದೆ. ಗುಲ್ಬರ್ಗಾದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದರ ಜೊತೆಯಲ್ಲಿ ಬೀದರ್​ನಲ್ಲಿ ಮಹಿಳಾ ಪಾರ್ಕ್​ಗಾಗಿ 42.57 ಎಕರೆ ಮೀಸಲಿರಿಸಲಾಗಿದೆ. ಅದನ್ನು ಅಭಿವೃದ್ಧಿ ಪಡೆಪಸಲು ₹13.93 ಕೋಟಿ ಮಂಜೂರು ಮಾಡಲಾಗಿದೆ. ಆದಷ್ಟು ಬೇಗ ಮಹಿಳಾ ಉದ್ಯಮಿದಾರರಿಗೆ ನಿವೇಶನ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.