ETV Bharat / city

ಸಾಮೂಹಿಕ‌ ನಾಯಕತ್ವದಲ್ಲಿ‌ ಚುನಾವಣೆ ಎದುರಿಸುತ್ತೇವೆ: ಡಿಕೆಶಿ

author img

By

Published : Jun 3, 2022, 9:15 PM IST

congress Leaders press meet in Bangalore
ಸಾಮೂಹಿಕ‌ ನಾಯಕತ್ವದಲ್ಲಿ‌ ಚುನಾವಣೆ ಎದುರಿಸುತ್ತೇವೆ: ಡಿಕೆಶಿ

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಕಸ್ತೂರಿ ರಂಗನ್ ವರದಿ ವಾಪಸ್ ಪಡೆಯುತ್ತೇವೆ. ರೈತರನ್ನು ಒಕ್ಕಲೆಬ್ಬಿಸುವುದಕ್ಕೆ ಕಡಿವಾಣ ಹಾಕುತ್ತೇವೆ. ಅರಣ್ಯ ಕಾಯ್ದೆ ಹಕ್ಕನ್ನು ತಿದ್ದುಪಡಿ‌ಮಾಡ್ತೇವೆ ಎಂದು ಡಿಕೆಶಿ ಘೋಷಿಸಿದ್ದಾರೆ.

ಬೆಂಗಳೂರು: ಹೊರವಲಯದ ಖಾಸಗಿ ರೆಸಾರ್ಟ್​ನಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ನವ ಸಂಕಲ್ಪ ಶಿಬಿರ ಸಮಾರೋಪದ ನಂತರ ಕೈಗೊಂಡ ತೀರ್ಮಾನಗಳ ಕುರಿತು ವಿವರಿಸಲು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿಯಲ್ಲಿ ಡಿ.ಕೆ ಶಿವಕುಮಾರ್​ ಮಾತನಾಡಿ, ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶವಾಗಿದ್ದು, ಹೈಕಮಾಂಡ್ ನೀಡಿರುವ ಗುರಿಯೂ ಅದೇ ಆಗಿದೆ. ಪಕ್ಷದ ಎಲ್ಲ ನಾಯಕರು ಒಗ್ಗಟ್ಟಾಗಿ ಚುನಾವಣೆ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದರು.

ಸಾಮೂಹಿಕ‌ ನಾಯಕತ್ವದಲ್ಲಿ‌ ಚುನಾವಣೆ ಎದುರಿಸುತ್ತೇವೆ: ಡಿಕೆಶಿ

ಎಐಸಿಸಿಯಿಂದ ರಾಜಸ್ತಾನದಲ್ಲಿ ಶಿಬಿರವಿತ್ತು. ಅದೇ ರೀತಿ ಇಲ್ಲಿಯೂ ಶಿಬಿರ ನಡೆದಿದೆ. ಆರು ತಂಡಗಳನ್ನು ರಚನೆ ಮಾಡಿದ್ದೆವು. ರೈತರು, ಸಾಮಾಜಿಕ ನ್ಯಾಯ, ಯುವಕರ ಉದ್ಯೋಗ, ಆರ್ಥಿಕ, ಪಕ್ಷ ಸಂಘಟನೆ, ರಾಜಕೀಯ ಕಮಿಟಿ‌ ರಚನೆ ಮಾಡಿದ್ದೆವು. ಈ ಕಮಿಟಿಗಳಿಗೆ ಹಿರಿಯ ನಾಯಕರನ್ನ ನೇಮಿಸಿದ್ದೆವು. ಆ ಆರು ಕಮಿಟಿಗಳು ಸಭೆ ನಡೆಸಿದ್ದವು ಎಂದು ತಿಳಿಸಿದರು.

ರಾಜ್ಯದ ಗೌರವಕ್ಕೆ‌ ಧಕ್ಕೆ ಎದುರಾಗಿದೆ. ಎಲ್ಲ ವರ್ಗದ ರಕ್ಷಣೆಗೆ ಪಕ್ಷ ಬದ್ಧವಾಗಿದೆ. ಇತಿಹಾಸ, ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ಕೋಮುವಿಚಾರದಲ್ಲಿ ವಿವಾದಕ್ಕೀಡಾಗುತ್ತಿದೆ. ಈ ವಿಚಾರಗಳಿಂದ ರಾಜ್ಯ ಉಳಿಸುವ ಪ್ರಯತ್ನ ಮಾಡಿದ್ದೇವೆ. ಮೂಲ ಹಕ್ಕುಗಳ ರಕ್ಷಣೆಗೆ ನಾವು ನಿಲ್ಲುತ್ತೇವೆ. ಮುಸ್ಲಿಂ, ಕ್ರೈಸ್ತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಹಾಗಾಗಿ ಈ ಸಮುದಾಯಗಳ ಪರ ನಾವು ನಿಲ್ಲುತ್ತೇವೆ ಎಂದರು.

ಕೃಷಿಕಾಯ್ದೆ ವಾಪಸ್ ಪಡೆಯುವಂತೆ ಹೊರಾಟ: ಮೂರು ಕೃಷಿಕಾಯ್ದೆಗಳನ್ನ ಕೇಂದ್ರ ವಾಪಸ್ ಪಡೆದಿದೆ. ಆದರೆ ರಾಜ್ಯದಲ್ಲಿ ಕಾಯ್ದೆ ವಾಪಸ್ ಪಡೆದಿಲ್ಲ. ಇದರ ಬಗ್ಗೆ ಹೋರಾಟ ಹಮ್ಮಿಕೊಳ್ಳುತ್ತೇವೆ. ಮುಂದೆ ನಮ್ಮ ಸರ್ಕಾರ ಬರಲಿದೆ. ಬಂದ ತಕ್ಷಣವೇ ಕಾಯ್ದೆ ವಾಪಸ್ ಪಡೆಯುತ್ತೇವೆ. ಪಕ್ಷವನ್ನ ಬೂತ್ ಮಟ್ಟದಿಂದ ಕಟ್ಟುತ್ತೇವೆ. ಬೂತ್ ಮಟ್ಟದ ಪದಾಧಿಕಾರಿಗಳನ್ನ ನೇಮಕ ಮಾಡುತ್ತಿದ್ದೇವೆ. ಕೆಲವು ಕಡೆಗಳಲ್ಲಿ ಬದಲಾವಣೆ ಮಾಡುತ್ತೇವೆ. ಜೂನ್ 25 ರೊಳಗೆ ಚುನಾವಣೆ ನಡೆಯಲಿವೆ. ಮಹಿಳೆಯರಿಗೆ ಶೇ 33ರಷ್ಟು ಅಧಿಕಾರ ಕೊಡುವ ತೀರ್ಮಾನ. ಸರ್ಕಾರ ಅಧಿಕಾರಕ್ಕೆ ಬಂದಾಗ ನೀಡ್ತೇವೆ. ಸ್ಥಾನಮಾನ ನೀಡುವಾಗ ಅರ್ಹತೆ ಪರಿಗಣನೆ. ಪಂಚಾಯತ್ ಮಟ್ಟದಲ್ಲಿ ಸಮಿತಿಗಳ ರಚನೆ ಮಾಡುತ್ತೇವೆ. ಎಲ್ಲಾ ವರ್ಗಕ್ಕೂ ಸ್ಥಾನಮಾನ ನೀಡುವ ನಿರ್ಧಾರ ಮಾಡುವುದಾಗಿ ತಿಳಿಸಿದರು.

ಪಾರದರ್ಶಕ ಉದ್ಯೋಗ ಭರ್ತಿ: ನಗರ, ಗ್ರಾಮೀಣ ಯುವಕರಿಗೆ ಉದ್ಯೋಗ ಸಿಗಬೇಕು. ಮುಂದಿನ ದಿನಗಳಲ್ಲಿ ಇದನ್ನ ಜಾರಿಗೆ ತರುತ್ತೇವೆ. ಬಿಜೆಪಿ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಾಗ್ತಿದೆ. ಪಾರದರ್ಶಕ ಉದ್ಯೋಗ ಭರ್ತಿಗೆ ಕಾರ್ಯಕ್ರಮ ಮಾಡುತ್ತೇವೆ. ಸರ್ಕಾರಿ ನೇಮಕಾತಿಯಲ್ಲಿ ಕಮೀಷನ್​ಗೆ ಬ್ರೇಕ್ ಹಾಕುತ್ತೇವೆ. ಕ್ರೀಡಾ ನೀತಿಗೆ ರೂಪುರೇಷೆ ಸಿದ್ದಪಡಿಸುತ್ತೇವೆ. ರೈತರ ವಿಚಾರದಲ್ಲಿ ಹೋರಾಟ ನಡೆಯಲಿವೆ. ನೀರಾವರಿ ಹೋರಾಟಕ್ಕೆ ನಿರ್ಣಯ ಮಾಡಿದ್ದೇವೆ. ಸರ್ಕಾರ ಅಧಿಕಾರಕ್ಕೆ ಬಂದರೆ 2 ಲಕ್ಷ ಕೋಟಿ ಇಡ್ತೇವೆ. ಮೇಕೆದಾಟು, ಕೃಷ್ಣಾ ಎಲ್ಲ ನೀರಾವರಿಗೆ ಒತ್ತು ಕೊಡುತ್ತೇವೆ. ಪ್ರತಿವರ್ಷ 40 ಸಾವಿರ ಕೋಟಿ ಮೀಸಲಿಡ್ತೇವೆ ಎಂದರು.

ಕಸ್ತೂರಿ ರಂಗನ್ ವರದಿ ವಾಪಸ್: ಕರಾವಳಿ, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಬಯಲುಸೀಮೆ, ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ರಚಿಸುತ್ತೇವೆ. ಕರಾವಳಿಯಲ್ಲಿ‌ ಉದ್ಯೋಗ ಸೃಷ್ಟಿಗೆ ಗಮನಹರಿಸಿದ್ದೇವೆ. ಗ್ರಾಮೀಣ ಭಾಗದಲ್ಲಿ ಎರಡು ಬೆಡ್ ರೂಂ ಮನೆ ನಿರ್ಮಾಣ ಮಾಡುತ್ತೇವೆ. ಸಿಂಗಲ್ ಬೆಡ್ ಎರಡು ಬೆಡ್ ಗೆ ವಿಸ್ತರಿಸ್ತೇವೆ. ನಮ್ಮ ಸರ್ಕಾರ ಬಂದರೆ ಇವನ್ನೆಲ್ಲಾ ಕೊಡ್ತೇವೆ. ಕಸ್ತೂರಿ ರಂಗನ್ ವರದಿ ವಾಪಸ್ ಪಡೆಯಬೇಕು. ರೈತರನ್ನ ಒಕ್ಕಲೆಬ್ಬಿಸುವುದಕ್ಕೆ ಕಡಿವಾಣ ಹಾಕ್ತೇವೆ. ಅರಣ್ಯ ಕಾಯ್ದೆ ಹಕ್ಕನ್ನು ತಿದ್ದುಪಡಿ‌ ಮಾಡ್ತೇವೆ ಎಂದು ವಿವರಿಸಿದರು.

ಆಗಸ್ಟ್ 9 ರಿಂದ 15ರವರೆಗೆ 75ಕಿ.ಮೀ ರ‍್ಯಾಲಿ: ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತೇವೆ. 10-15 ದಿನದಲ್ಲಿ ಇದೇ ಕಾರ್ಯಕ್ರಮ ಮಾಡ್ತೇವೆ. ಪ್ರಣಾಳಿಕೆ‌ತರುವ ಉದ್ದೇಶದಿಂದ ಚರ್ಚಿಸ್ತೇವೆ. ಸ್ಥಳೀಯ ಸಮಸ್ಯೆ ಇಟ್ಟುಕೊಂಡು ತರ್ತೇವೆ. 75 ವರ್ಷದ ಸಂಭ್ರಮಾಚರಣೆ, ಆಗಸ್ಟ್ 9 ರಿಂದ 15ರವರೆಗೆ 75ಕಿ.ಮೀ ರ‍್ಯಾಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು.

ಖಾಸಗಿ ಕ್ಷೇತ್ರದಲ್ಲಿ ಕೂಡ ಮೀಸಲು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್‌ ಪಕ್ಷ ಸಾಮಾಜಿಕ ನ್ಯಾಯದ ಪರವಾದ ಪಕ್ಷ. ಎಐಸಿಸಿ ಈಗಾಗಲೇ ಸ್ಪಷ್ಟಪಡಿಸಿದ್ದು, ಖಾಸಗಿ ಕ್ಷೇತ್ರದಲ್ಲಿ ಕೂಡ ಮೀಸಲಾತಿ ತರಲು ಪಕ್ಷ ಬದ್ಧವಾಗಿದೆ. ಮುಂದೆ ನಾವು ಅಧಿಕಾರಕ್ಕೆ ಬಂದಮೇಲೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಜಾತಿಗಳ ಬ್ಯಾಕ್‌ ಲಾಗ್‌ ಹುದ್ದೆಗಳ ಭರ್ತಿ ಹಾಗೂ ಖಾಸಗಿ ಕ್ಷೇತ್ರದಲ್ಲೂ ಮೀಸಲು ಜಾರಿಗೆ ತರುತ್ತೇವೆ ಎಂದರು.

ಔಟ್‌ ಸೋರ್ಸ್‌ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಕೂಡ ಮೀಸಲಾತಿಯನ್ನು ಜಾರಿಗೊಳಿಸಲು ನಾವು ಪ್ರಯತ್ನ ಮಾಡುತ್ತೇವೆ, ಜೊತೆಗೆ ಹೊರಗುತ್ತಿಗೆ ಹುದ್ದೆಗಳ ಭರ್ತಿ ಕಾರ್ಯವನ್ನು ನಾವು ಆರಂಭಿಸುತ್ತೇವೆ. ಸಾಂಸ್ಕ್ರತಿಕ ದೌರ್ಜನ್ಯಗಳು, ಸಾಂಸ್ಕ್ರತಿಕ ಭಯೋತ್ಪಾದನೆ ವಿರುದ್ಧ ಪಕ್ಷ ಹೋರಾಟ ಮಾಡಲಿದೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುವುದನ್ನು ನಾವು ಖಂಡಿಸುತ್ತೇವೆ ಮತ್ತು ಆ ಜನರೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಸರ್ವರಿಗೂ ರಕ್ಷಣೆ ಕೊಡುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್, ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಭಾಗಿಯಾಗಿದ್ದರು.

ಇದನ್ನೂ ಓದಿ: ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿ: ಸಾರಿಗೆ ನಿಗಮಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.