ETV Bharat / city

ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಅವಿರೋಧ ಆಯ್ಕೆ: ತಂದೆಯ ನೆನೆದು ಹೆಚ್‌ಡಿಕೆ ಕಣ್ಣೀರು

author img

By

Published : Aug 3, 2022, 9:54 PM IST

cm-ibrahim
ರಾಜ್ಯಾಧ್ಯಕ್ಷರಾಗಿ ಸಿ ಎಂ ಇಬ್ರಾಹಿಂ ಅವಿರೋಧ ಆಯ್ಕೆ

ಜೆಡಿಎಸ್​ನ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ನೂತನವಾಗಿ ಆಯ್ಕೆಯಾದ ರಾಜ್ಯಾಧ್ಯಕ್ಷರನ್ನು ಸನ್ಮಾನಿಸಿದರು.

ಬೆಂಗಳೂರು: ಜಾತ್ಯತೀತ ಜನತಾದಳ ಪಕ್ಷದ ರಾಜ್ಯ ಮಟ್ಟದ ಸಾಂಸ್ಥಿಕ ಚುನಾವಣೆ ಪೂರ್ಣಗೊಂಡಿದ್ದು, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಪಕ್ಷದ ರಾಜ್ಯ ಕಾರ್ಯಕಾರಿಣಿ ಮಂಡಳಿಯ ಸದಸ್ಯರಾಗಿ 65 ಮಂದಿ ಆಯ್ಕೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಚುನಾವಣಾಧಿಕಾರಿ ಹೆಚ್.ಸಿ.ನೀರಾವರಿ ಅವರು ಪ್ರಕಟಿಸಿ ಆಯ್ಕೆ ಪ್ರಮಾಣ ಪತ್ರ ನೀಡಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಅವಿರೋಧ ಆಯ್ಕೆ

ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಹೆಚ್.ಸಿ.ನೀರಾವರಿ ಅವರನ್ನು ಹೆಚ್.ಡಿ.ಕುಮಾರಸ್ವಾಮಿ, ಬಂಡೆಪ್ಪ ಕಾಷೆಂಪೂರ್, ಎನ್.ಎಂ.ನಬಿ, ರಾಜಾ ವೆಂಕಟಪ್ಪ ನಾಯಕ ಮುಂತಾದವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯದ ಸಾಂಸ್ಥಿಕ ಚುನಾವಣೆ ಪೂರ್ಣವಾಗಿ ಮತ್ತು ನಿಯಮಬದ್ಧವಾಗಿ ನಡೆಸಿದ ಹೆಚ್.ಸಿ.ನೀರಾವರಿ ಅಭಿನಂದನೆಗಳು. ಈವರೆಗೆ ಈ ಚುನಾವಣೆಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವ ನೋವು ದೇವೇಗೌಡರಿಗೆ ಇತ್ತು. ಆ ಕೊರತೆಯನ್ನು ನೀರಾವರಿ ಅವರು ನೀಗಿಸಿದ್ದಾರೆ ಎಂದರು.

ಭಾವುಕರಾದ ಹೆಚ್​ಡಿಕೆ: ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲರೂ ಪಕ್ಷ ಕಟ್ಟಬೇಕು. ಯಾರೂ ವಿಶ್ರಮಿಸಬಾರದು. ಈ ಸಭೆ ಅವರ ಸಮ್ಮುಖದಲ್ಲಿ ನಡೆಯಬೇಕಿತ್ತು ಎಂದಿರುವ ಕುಮಾರಸ್ವಾಮಿ, ತಮ್ಮ ತಂದೆಯವರನ್ನು ನೆನಪಿಸಿಕೊಂಡು ಭಾವುಕರಾದರು. ತಂದೆಯವರ ಆರೋಗ್ಯವನ್ನು ನೆನಪಿಸಿಕೊಂಡು ಸಭೆಯಲ್ಲಿ ಕಣ್ಣೀರಿಟ್ಟರು.

ಸಿದ್ದರಾಮೋತ್ಸವ ಸಪ್ಪೆ: ಕಾಂಗ್ರೆಸ್ ಪಕ್ಷ ದಾವಣಗೆರೆ ಸಮಾವೇಶ ಬಗ್ಗೆ ಮಾತನಾಡಿದ ಅವರು, ಅಲ್ಲಿ ಆ ಪಕ್ಷದ ಮೂಲ ನಾಯಕರು ಅಕ್ಕಪಕ್ಕದಲ್ಲಿ ಕೈಕಟ್ಟಿಕೊಂಡು ನಿಂತಿದ್ದರು. ಬೇರೆ ಪಕ್ಷಗಳಿಂದ ವಲಸೆ ಹೋಗಿರುವ ಮಿಂಚುತ್ತಿದ್ದಾರೆ. ನಮ್ಮ ಜಲಧಾರೆ ಸಮಾವೇಶದ ಮುಂದೆ ಸಿದ್ದರಾಮೋತ್ಸವ ಸಪ್ಪೆಯಾಗಿದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತಿಂಗಳುಗಟ್ಟಲೆ ಸಿದ್ಧತೆ ನಡೆಸಿದರೂ ಅದರ ಸಮಾವೇಶ ವಿಫಲವಾಗಿದೆ. ಅದರ ಶಕ್ತಿ ಪ್ರದರ್ಶನ ಏನೆಂಬುದು ಜನತೆಗೆ ಚೆನ್ನಾಗಿ ಗೊತ್ತಾಗಿದೆ. ಆದರೆ, ನಮ್ಮ ಜಲಧಾರೆ ಮುಂದೆ ಅದು ಏನೂ ಅಲ್ಲ. ನಮ್ಮ ಕಾರ್ಯಕರ್ತರಿಗೆ ಶಕ್ತಿ ಇದೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ಶುಭ ಸೂಚನೆ ಎಂದ ಇಬ್ರಾಹಿಂ: ಪಕ್ಷದ ನೂತನ ಅಧ್ಯಕ್ಷ ಇಬ್ರಾಹಿಂ ಮಾತನಾಡಿ, ಪಕ್ಷದ ಸಾಂಸ್ಥಿಕ ಚುನಾವಣೆ ಮುಗಿದು ನಾನು ಸೇರಿ ಕಾರ್ಯಕಾರಿಣಿ ಮಂಡಳಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುವುದು ಶುಭ ಸೂಚನೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ : ಕಾಂಗ್ರೆಸ್​ನವರ ವೀಕ್ನೆಸ್​ ಮೇಲೆ ನಾವು ರಾಜಕೀಯ ಮಾಡುವುದಿಲ್ಲ: ಹೆಚ್ ಡಿ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.