ETV Bharat / city

ಬಿಬಿಎಂಪಿ ವ್ಯಾಪ್ತಿಯ ವಿಶೇಷ ಲಸಿಕಾ ಮೇಳದ ಅಂಗವಾಗಿ ಸಭೆ ನಡೆಸಿದ ವಿಶೇಷ ಆಯುಕ್ತ

author img

By

Published : Oct 22, 2021, 3:44 AM IST

BBMP vaccine mela meeting by trilok chan
ಬಿಬಿಎಂಪಿ ವ್ಯಾಪ್ತಿಯ ವಿಶೇಷ ಲಸಿಕಾ ಮೇಳದ ಅಂಗವಾಗಿ ಸಭೆ ನಡೆಸಿದ ವಿಶೇಷ ಆಯುಕ್ತ

ಬೆಂಗಳೂರು ನಗರದ ಎಲ್ಲಾ ಅರ್ಹ ನಾಗರಿಕರು ವಿಶೇಷ ಲಸಿಕೆ ಮೇಳದ ಉಪಯೋಗ ಪಡೆದುಕೊಳ್ಳಬೇಕು ಎಂದು ವಿಶೇಷ ಆರೋಗ್ಯ ಆಯುಕ್ತ ತ್ರಿಲೋಕ್ ಚಂದ್ರ ಮನವಿ ಮಾಡಿದ್ದಾರೆ.

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಶೇಷ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಲಸಿಕೆ ಪಡೆಯದವರನ್ನು ಗುರುತಿಸಿ ಲಸಿಕೆ ನೀಡಲು ವಿಶೇಷ ಆರೋಗ್ಯ ಆಯುಕ್ತ ತ್ರಿಲೋಕ್ ಚಂದ್ರ ಎಲ್ಲಾ ವಲಯದ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಶೇಷ ಲಸಿಕಾ ಮೇಳದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ನಗರದಲ್ಲಿ ಶೇ. 86ರಷ್ಟು ಮೊದಲನೇ ಡೋಸ್, ಶೇ. 52ರಷ್ಟು ಎರಡನೇ ಡೋಸ್ ಲಸಿಕೆಯನ್ನು ನಗರದ ನಾಗರಿಕರಿಗೆ ಇದುವರೆಗೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕಾ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಬ್ಲಾಕ್ ಮತ್ತು ಲೇನ್ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತಿದೆ ಎಂದರು.

ನಗರದ ಎಲ್ಲಾ ಅರ್ಹ ನಾಗರಿಕರು ಸದರಿ ಮೇಳದ ಪ್ರಯೋಜನವನ್ನು ಪಡೆಯಬೇಕು ಹಾಗೂ ಕೊಳಗೇರಿ ಪ್ರದೇಶಗಳಲ್ಲಿನ ನಿವಾಸಿಗಳು, ಬೀದಿ ಬದಿ ವ್ಯಾಪಾರಿಗಳು, ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಕಟ್ಟಡ ನಿರ್ಮಾಣ ಮಾಡುವ ಸ್ಥಳಗಳಲ್ಲಿ, ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಇನ್ನಿತರೇ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳ ವ್ಯವಸ್ಥೆ ಮಾಡಿಕೊಂಡು ಲಸಿಕೆ ನೀಡಬೇಕು. ಇದಲ್ಲದೆ ಟ್ರೇಡರ್ಸ್ ಅಸೋಸಿಯೇಷನ್, ಹೋಟೆಲ್ ಅಸೋಸಿಯೇಷನ್, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಸಮನ್ವಯ ಸಾಧಿಸಿ ಲಸಿಕೆ ಪಡೆಯದವರಿಗೆ ಲಸಿಕೆ ನೀಡಬೇಕು ಎಂದು ಸಲಹೆ ನೀಡಿದರು.

ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಲಸಿಕಾ ಕೇಂದ್ರ, ಮೊಬೈಲ್ ಲಸಿಕಾ ಕೇಂದ್ರಗಳು, ಬ್ಲಾಕ್ ಮತ್ತು ಲೇನ್ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಎಲ್ಲಾ ನಾಗರಿಕರು ಇದರ ಉಪಯೋಗ ಪಡಿಸಿಕೊಳ್ಳಬೇಕೆಂದು ತ್ರಿಲೋಕ್ ಚಂದ್ರ ಹೇಳಿದರು.

ಈ ಸಭೆಯಲ್ಲಿ ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು, ಎಲ್ಲಾ ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಸಿಂದಗಿ, ಹಾನಗಲ್ ಉಪಸಮರ: ಮುಂದಿನ ಫಲಿತಾಂಶಕ್ಕೆ ಜನರೇ ನಿರ್ಣಾಯಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.