ETV Bharat / city

ಅಕ್ರಮ ಗಣಿಗಾರಿಕೆ: ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು

author img

By

Published : Apr 27, 2022, 6:09 PM IST

bail to Gali Janardhana Reddy under Illegal mining case
ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ನೀಡಿದ ಕೋರ್ಟ್

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ದೇವಿ ಎಂಟರ್‌ಪ್ರೈಸಸ್‌ ಪಾಲುದಾರ ಕೆ.ಮೆಹಫೂಜ್‌ ಅಲಿ ಖಾನ್‌ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.

ಬೆಂಗಳೂರು: ಅಕ್ರಮವಾಗಿ ಕಬ್ಬಿಣದ ಅದಿರು ಮಾರಾಟ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ನಷ್ಟ ಮಾಡಿದ ಆರೋಪದಡಿ ದಾಖಲಿಸಿರುವ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಕಾರ್ಯದರ್ಶಿಯೂ ಆದ ದೇವಿ ಎಂಟರ್‌ಪ್ರೈಸಸ್‌ ಪಾಲುದಾರ ಕೆ.ಮೆಹಫೂಜ್‌ ಅಲಿ ಖಾನ್‌ಗೆ ಜಾಮೀನು ನೀಡಿದೆ.

ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಆದೇಶ ಮಾಡಿದೆ. ಜನಾರ್ದನ ರೆಡ್ಡಿ, ಮೆಹಫೂಜ್‌ ಅಲಿ ಖಾನ್‌ ತಲಾ 50,000 ರೂ. ವೈಯಕ್ತಿಕ ಬಾಂಡ್‌ ಸಲ್ಲಿಸಬೇಕು. ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷ್ಯ ತಿರುಚಬಾರದೆಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಪ್ರಕರಣದ ಹಿನ್ನೆಲೆ ಹೀಗಿದೆ..: 2009-10ರಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಜನಾರ್ದನ ರೆಡ್ಡಿ, ಮೆಹಫೂಜ್‌ ಅಲಿ ಖಾನ್‌ ಮತ್ತು ಶ್ರೀನಿವಾಸ ರೆಡ್ಡಿ ಸೇರಿ ಮತ್ತಿತರರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ಕಬ್ಬಿಣದ ಅದಿರನ್ನು ಹೊರತೆಗೆದಿದ್ದರು. ಅದನ್ನು ಅಕ್ರಮವಾಗಿ ಸಾಗಿಸಲಾಗಿದೆಯೆಂಬ ಅಂಶ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯದೇ ಮತ್ತು ಸರ್ಕಾರಕ್ಕೆ ರಾಜಧನ ಮತ್ತಿತರೆ ಶುಲ್ಕ ಪಾವತಿಸದೇ ಆರೋಪಿಗಳು 1.25 ಲಕ್ಷ ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಮಾರಾಟ ಮಾಡಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು.

ಮೂವರ ವಿರುದ್ಧ ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ ಕಾಯ್ದೆ 1957ರ ಸೆಕ್ಷನ್‌ 21 ಮತ್ತು 23 ಜೊತೆಗೆ 4(1), 4(1ಎ) ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಪೋಷಕರು ಗದರಿದರೆಂದು ಬಳ್ಳಾರಿಯಲ್ಲಿ ಮನೆ ಬಿಟ್ಟ ಮಕ್ಕಳು ಬೆಂಗಳೂರಿನಲ್ಲಿ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.