ETV Bharat / city

ನನ್ನ ಹೇಳಿಕೆಯಿಂದ ದೆವ್ವ ಬಂದಂಗೆ ಕುಣೀತಿರೋ ಕಾಂಗ್ರೆಸ್ಸಿಗರು: ಸಚಿವ ಕಾರಜೋಳ ಗೇಲಿ

author img

By

Published : Jan 3, 2022, 3:58 PM IST

belagavi
ಗೋವಿಂದ ಕಾರಜೋಳ

ಕಾಂಗ್ರೆಸ್​ ಪಾದಯಾತ್ರೆ ಕೇವಲ ರಾಜಕೀಯ ಗಿಮಿಕ್. ಜನರಿಗೆ ಮೋಸ ಮಾಡುವ ತಂತ್ರ ಅಲ್ಲದೇ ಏನೂ ಇಲ್ಲ. 2023ರ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಬೆಳಗಾವಿ: ಮೇಕೆದಾಟು ಯೋಜನೆ ವಿಳಂಬಕ್ಕೆ ಹೊಣೆಗಾರರು ಯಾರು ಎಂಬ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಕ್ಕೆ, ಕಾವೇರಿಯಿಂದ ಭೀಮಾ ನದಿವರೆಗೂ ಕಾಂಗ್ರೆಸ್​ನವರು ಮೈಮೇಲೆ ದೆವ್ವ ಬಂದಂಗೆ ಕುಣಿದಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಗೇಲಿ ಮಾಡಿದರು.

ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯೋಜನೆ ಜಾರಿಯ ವಿಳಂಬಕ್ಕೆ ಯಾರು ಹೊಣೆಗಾರರು ಎಂಬುದನ್ನಷ್ಟೇ ನಾನು ಹೇಳಿದ್ದೇನೆ. ಕೆಲ ಪುಡಿ ರಾಜಕಾರಣಿಗಳ ನಾಲಿಗೆಗೆ ಸಂಸ್ಕಾರ ಇಲ್ಲದಂಗೆ ಹೇಳಿಕೆ ನೀಡುತ್ತಿದ್ದಾರೆ. ನನ್ನ ಬಗ್ಗೆ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ. ಮೇಕೆದಾಟು ಯೋಜನೆ ಸಂಬಂಧ ಇಂದು ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಇದೆ. ಹೀಗಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ಇಂದು ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಬುದ್ದಿ ಹೇಳಬೇಕು ಎಂಬ ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ. ಕಾಂಗ್ರೆಸ್ ತಮಿಳುನಾಡಿನಲ್ಲಿ ಡಿಎಂಕೆ ಜತೆಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಮಾಡುತ್ತಿದೆ. ನೀವು ಸರ್ಕಾರ ನಡೆಸುವವರಿಗೆ ಬುದ್ದಿ ಹೇಳಿ. ಅಣ್ಣಾಮಲೈ ಅಧಿಕಾರದಿಂದ ಹೊರಗಿದ್ದಾರೆ. ಡಿಎಂಕೆ ನೆರಳಲ್ಲಿ ನೀವು ಆಡಳಿತ ಮಾಡುತ್ತಿದ್ದೀರಿ. ಯೋಜನೆ ಕುರಿತು ಮೊದಲು ಅವರಿಗೆ ತಿಳಿ ಹೇಳುವ ಕೆಲಸ ಮಾಡಿ ಎಂದು ತಿರುಗೇಟು ನೀಡಿದರು.

2013 ರಲ್ಲಿ ಕಾಂಗ್ರೆಸ್​ ನಡಿಗೆ ಕೃಷ್ಣೆ ಕಡೆಗೆ ಪಾದಯಾತ್ರೆ ಮಾಡಿದ್ದರು. ಇದಾದ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕೃಷ್ಣಾ ಯೋಜನೆಗಾಗಿ ಪ್ರತಿವರ್ಷ 10 ಸಾವಿರ ಕೋಟಿ ಮೀಸಲಿಡುವುದಾಗಿ ಕೂಡಲಸಂಗಮದಲ್ಲಿ ದೇವರ ಮೇಲೆ ಆಣೆ ಮಾಡಿದ್ದರು. 15 ಲಕ್ಷ ಭೂಮಿಗೆ ನೀರಾವರಿ ಮಾಡುತ್ತೇವೆ ಎಂದು ಘೋಷಿಸಿದ್ದರು. ಅವರು ತಮ್ಮ 5 ವರ್ಷದ ಆಡಳಿತದಲ್ಲಿ ಏನು ಮಾಡಿದ್ದಾರೆ ಹೇಳಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್​ ಪಾದಯಾತ್ರೆ ಕೇವಲ ರಾಜಕೀಯ ಗಿಮಿಕ್. ಜನರಿಗೆ ಮೋಸ ಮಾಡುವ ತಂತ್ರ ಅಲ್ಲದೇ ಏನೂ ಇಲ್ಲ. 2023ರ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದರು.

ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಸೂಚನೆ

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಚೆಕ್​ಪೋಸ್ಟ್​ಗಳನ್ನು ಹಾಕಿ ಕಟ್ಟುನಿಟ್ಟಿನ ತಪಾಸಣೆಗೆ ಸೂಚನೆ ನೀಡಿದ್ದೇನೆ. ಮುನ್ನೂರಕ್ಕಿಂತಲೂ ಹೆಚ್ಚು ಜನರು ಸಭೆ ಸಮಾರಂಭಗಳಲ್ಲಿ ಸೇರಬಾರದು. ಜನ ಸಹಕಾರ ನೀಡದಿದ್ರೆ ಹೆಚ್ಚಿನ ಕ್ರಮ ತೆಗೆದುಕೊಳ್ಳುತ್ತೇವೆ. ಸರ್ಕಾರ ನೀಡಿರುವ ನಿಯಮಗಳನ್ನು ಪಾಲಿಸಬೇಕು. ಅನಿವಾರ್ಯ ಬಂದರೆ ಜಾತ್ರೆಗಳಿಗೆ ನಿರ್ಬಂಧ ಹಾಕುತ್ತೇವೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಕಠಿಣ ಕ್ರಮ ಕುರಿತು ನಾಳೆ ತಜ್ಞರ ಜೊತೆ ಸಭೆ, ಗುರುವಾರ ಸಂಪುಟ ಸಭೆಯಲ್ಲಿ ಚರ್ಚೆ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.