ETV Bharat / city

'ಮೂಢನಂಬಿಕೆಗೆ ಯಾವುದೇ ಅರ್ಥವಿಲ್ಲ, ಅಧಿಕಾರ ಹೋದ್ರೆ ಚೆನ್ನಮ್ಮನ ಸಲುವಾಗಿ ಹೋಯ್ತೆಂದು ಸಂತೋಷ ಪಡುವೆ'

author img

By

Published : Oct 24, 2021, 7:55 AM IST

Updated : Oct 24, 2021, 8:24 AM IST

cm basavaraja bommai
ಸಿಎಂ ಬಸವರಾಜ ಬೊಮ್ಮಾಯಿ

ಕಿತ್ತೂರು ರಾಣಿ ಚೆನ್ನಮ್ಮನ ಸಲುವಾಗಿ ಯಾವ ಮೂಢನಂಬಿಕೆಗಳೂ ನನಗೆ ಅಡ್ಡ ಬರುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಬೆಳಗಾವಿ: ಕಿತ್ತೂರಲ್ಲಿ ಕಾಕತಾಳಿಯವಾಗಿ, ಆಕಸ್ಮಿಕವಾಗಿ ಕೆಲವು ಘಟನಾವಳಿಗಳು ನಡೆದಿರಬಹುದು. ಕಿತ್ತೂರು ರಾಣಿ ಚೆನ್ನಮ್ಮನ ಸಲುವಾಗಿ ಯಾವ ಮೂಢನಂಬಿಕೆಗಳೂ ನನಗೆ ಅಡ್ಡ ಬರುವುದಿಲ್ಲ. ಅಕಸ್ಮಾತ್ ಅಧಿಕಾರ ಹೋದ್ರೆ, ಕಿತ್ತೂರು ರಾಣಿ ಚೆನ್ನಮ್ಮನ ಸಲುವಾಗಿ ಹೋಯ್ತು ಅಂತ ಬಹಳ ಸಂತೋಷ ಪಡುತ್ತೇನೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮರಾಜನಗರಕ್ಕೆ ಹೋಗಬೇಡಿ ಅಂದಿದ್ರು, ಆದ್ರೆ ಹೋಗಿದ್ದೇನೆ. ಕಿತ್ತೂರಿಗೆ ಹಾಗೆಯೇ ಅಂದಿದ್ರು, ಬಂದಿದ್ದೇನೆ. ಇಲ್ಲಿ ಕೆಲವು ಘಟನಾವಳಿಗಳು ನಡೆದಿರಬಹುದು. ಆದ್ರೆ ಎಷ್ಟೋ ಜನ ಇಲ್ಲಿ ಬರದೇ ಇದ್ದರೂ ಯಾರೂ ಶಾಶ್ವತವಾಗಿ ಅಧಿಕಾರದಲ್ಲಿ ಇರಲು ಸಾಧ್ಯವಾಗಿಲ್ಲ. ಅಧಿಕಾರ ಯಾವತ್ತೂ ಶಾಶ್ವತವಲ್ಲ ಎಂಬ ಕಾಲಾತೀತ ಸತ್ಯವನ್ನು ಅರ್ಥ ಮಾಡಿಕೊಂಡು, ಈ ಮೂಢನಂಬಿಕೆಗೆ ಯಾವುದೇ ಅರ್ಥ ಇಲ್ಲವೆಂದು ನಂಬಿ ನಾನು ಬಂದಿದ್ದೇನೆ ಎಂದರು.

ನನಗೂ, ಕಿತ್ತೂರಿಗೂ ಅನ್ಯೋನ್ಯ ಸಂಬಂಧವನ್ನು ಆ ಭಗವಂತ ಸೃಷ್ಟಿಸಿದ್ದಾನೆ ಅನಿಸುತ್ತದೆ. ಇಲ್ಲಿ ಬಂದಾಗ ನಾನು ಸ್ಫೂರ್ತಿ ತಗೆದುಕೊಂಡು ಹೋಗುತ್ತೇನೆ. ನನ್ನ ವಿಚಾರಗಳು, ಗುರಿಗಳು, ಸಂಕಲ್ಪ ಇನ್ನಷ್ಟು ಗಟ್ಟಿಯಾಗುತ್ತವೆ. ಅದು ಚೆನ್ನಮ್ಮನ ಮಹಿಮೆ, ಅವಳ ಪರಿಶುದ್ಧ ದೇಶಭಕ್ತಿ, ತ್ಯಾಗ, ಬಲಿದಾನ ಎಲ್ಲ ನಮ್ಮ ಮನದಾಳದಲ್ಲಿವೆ. ಅದಕ್ಕೆಲ್ಲ ನಮ್ಮ ತಾಯಿ ಕಾರಣ. ನಾನು ಚಿಕ್ಕವನಿದ್ದಾಗ ಕಿತ್ತೂರು ಚೆನ್ನಮ್ಮನ ಕಥೆಯನ್ನು ಹತ್ತಾರು ಸೇರಿ ಹೇಳಿ ಚೆನ್ನಮ್ಮರ ಬಗ್ಗೆ ವಿಶೇಷ ಭಕ್ತಿ ಬಿತ್ತಿದ್ರು. ಅದು ಇನ್ನೂ ಜೀವಂತವಿದ್ದು, ಇಲ್ಲಿ ಬಂದು ಹೋದ ಮೇಲೆ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.

ಕಿತ್ತೂರಿನ ಅಭಿವೃದ್ಧಿ:

ಕಿತ್ತೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವ ಅಭಿಲಾಷೆ ಇದೆ. ಈಗಷ್ಟೇ ಪ್ರಾರಂಭವಾಗಿದೆ, ಭಗವಂತ ಅವಕಾಶ ಕೊಟ್ರೆ ಅದನ್ನು ಮಾಡುತ್ತೇನೆ. ಇನ್ನೂ ಕಿತ್ತೂರು ಕರ್ನಾಟಕ ಮರುನಾಮಕರಣ ಬಗ್ಗೆ ಕ್ಯಾಬಿನೆಟ್‌‌ನಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದರು.

ಬೆಳಗಾವಿಯಲ್ಲಿ ಅದ್ಧೂರಿ ರಾಜ್ಯೋತ್ಸವ ಬಗ್ಗೆ ಕೋವಿಡ್ ತಜ್ಞರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಏನಾದರೂ ಸಮಸ್ಯೆ ಇದ್ರೆ ಪರಿಹರಿಸುವ ಕೆಲಸ ಮಾಡುತ್ತೇವೆ ಎಂದರು. ಇನ್ನೂ ಜನಶಕ್ತಿ ನಮ್ಮ ಪರವಾಗಿದೆ. ಎರಡೂ ಉಪಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಸಿಎಂ ಹೇಳಿದರು.

ಇದನ್ನೂ ಓದಿ: ದೇಶದಲ್ಲಿ ಸ್ವದೇಶಿ ಕಲ್ಲಿದ್ದಲು ಬಳಕೆಗೆ ನಿರ್ಧಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Last Updated :Oct 24, 2021, 8:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.