ETV Bharat / business

ಸ್ವಿಗ್ಗಿ ಪ್ಲಾಟ್​ಫಾರ್ಮ್​ ಫೀ ಶೇ 50ರಷ್ಟು ಹೆಚ್ಚಳ; 2 ರಿಂದ 3 ರೂ.ಗೆ ಏರಿಕೆ

author img

By ETV Bharat Karnataka Team

Published : Oct 16, 2023, 3:52 PM IST

Swiggy raises platform fee by 50% to Rs 3 on food delivery orders
Swiggy raises platform fee by 50% to Rs 3 on food delivery orders

ಆಹಾರ ವಿತರಣಾ ಜಾಲ ಸ್ವಿಗ್ಗಿ ತನ್ನ ಪ್ಲಾಟ್​ಫಾರ್ಮ್​ ಶುಲ್ಕವನ್ನು 1 ರೂ. ಹೆಚ್ಚಿಸಿದೆ.

ಬೆಂಗಳೂರು : ಫುಡ್ ಡೆಲಿವರಿ ಪ್ಲಾಟ್​ಫಾರ್ಮ್ ಸ್ವಿಗ್ಗಿ ಈವರೆಗೆ ವಿಧಿಸುತ್ತಿದ್ದ ಪ್ಲಾಟ್​ಫಾರ್ಮ್ ಫೀಯನ್ನು 2 ರೂಪಾಯಿಗಳಿಂದ 3 ರೂಪಾಯಿಗೆ ಹೆಚ್ಚಿಸಿದೆ. ಅಕ್ಟೋಬರ್ 4 ರಿಂದ ಈ ಹೆಚ್ಚಳ ಜಾರಿಗೆ ಬಂದಿದೆ. ಆರಂಭದಲ್ಲಿ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಶುಲ್ಕವನ್ನು ಹೆಚ್ಚಿಸಲಾಗಿತ್ತು. ನಂತರ ದೇಶದ ಇತರ ನಗರಗಳಲ್ಲಿಯೂ ಫೀಯನ್ನು ಹೆಚ್ಚಿಸಲಾಯಿತು.

ಪ್ರಸ್ತುತ ಸ್ವಿಗ್ಗಿ 5 ರೂ.ಗಳ ಪ್ಲಾಟ್​ಫಾರ್ಮ್ ಫೀ ವಿಧಿಸಿದ ನಂತರ 2 ರೂ.ಗಳ ರಿಯಾಯಿತಿ ನೀಡುತ್ತದೆ. ಅಂದರೆ ಪ್ಲಾಟ್​ಫಾರ್ಮ್ ಫೀ ಮತ್ತೆ ಯಾವಾಗ ಬೇಕಾದರೂ ಹೆಚ್ಚಾಗಬಹುದು ಎಂಬುದನ್ನು ಇದು ಸೂಚಿಸುತ್ತದೆ. ಆರ್ಡರ್ ಮೌಲ್ಯ ಎಷ್ಟೇ ಇದ್ದರೂ ಏಪ್ರಿಲ್​ನಿಂದ ಸ್ವಿಗ್ಗಿ ತನ್ನ ಗ್ರಾಹಕರಿಗೆ ಪ್ಲಾಟ್​ಫಾರ್ಮ್ ಫೀ ವಿಧಿಸುತ್ತಿದೆ.

ಡೆಲಿವರಿ ಶುಲ್ಕದೊಂದಿಗೆ ಸೇರಿಸಿ ಪ್ಲಾಟ್​ ಫಾರ್ಮ್ ಫೀ ವಿಧಿಸಲಾಗುತ್ತದೆ. ಆದರೆ ಸ್ವಿಗ್ಗಿಯ ಲಾಯಲ್ಟಿ ಪ್ರೋಗ್ರಾಂ ಸ್ವಿಗ್ಗಿ ಒನ್​ಗೆ ಚಂದಾದಾರರಾಗಿರುವ ಗ್ರಾಹಕರಿಗೆ ಇದನ್ನು ಮನ್ನಾ ಮಾಡಲಾಗುತ್ತದೆ. ಸ್ವಿಗ್ಗಿ ಒನ್ ಕಾರ್ಯಕ್ರಮದ ಅಡಿಯಲ್ಲಿ, ಗ್ರಾಹಕರು ನಿರ್ದಿಷ್ಟ ಮುಂಗಡ ಪಾವತಿ ಮಾಡಿದ ನಂತರ ಆಹಾರ ಮತ್ತು ದಿನಸಿ ವಸ್ತುಗಳ ಉಚಿತ ವಿತರಣೆಯ ಚಂದಾದಾರಿಕೆಯನ್ನು ಪಡೆಯಬಹುದು.

ಕಂಪನಿಗಳು ತಮ್ಮ ಒಟ್ಟಾರೆ ಆದಾಯವನ್ನು ಸುಧಾರಿಸಲು ಪ್ಲಾಟ್​ಫಾರ್ಮ್ ಶುಲ್ಕಗಳನ್ನು ಹೆಚ್ಚಿಸುತ್ತವೆ. ಉಬರ್, ಬಿಗ್​ ಬಾಸ್ಕೆಸ್​ನ ಬಿಬಿ ನೌ ಮತ್ತು ಜೆಪ್ಟೊ ಕೂಡ ಯುನಿಟ್ ಆದಾಯವನ್ನು ಹೆಚ್ಚಿಸಲು ಪ್ರತಿ-ಆರ್ಡರ್ ಶುಲ್ಕವನ್ನು ವಿಧಿಸುತ್ತಿವೆ. ಜೂನ್​ನಲ್ಲಿ ಬಂದ ವರದಿಗಳ ಪ್ರಕಾರ ಸ್ವಿಗ್ಗಿಯ ನಷ್ಟವು ವರ್ಷದಿಂದ ವರ್ಷಕ್ಕೆ ಶೇಕಡಾ 80 ರಷ್ಟು ಏರಿಕೆಯಾಗಿ 2022 ರಲ್ಲಿ ಸುಮಾರು 540 ಮಿಲಿಯನ್ ಡಾಲರ್​ಗೆ ತಲುಪಿದೆ. ಆಹಾರ ವಿತರಣೆಗಾಗಿ ಸ್ವಿಗ್ಗಿಯ ಒಟ್ಟು ಸರಕು ಮೌಲ್ಯವು ವರ್ಷದಿಂದ ವರ್ಷಕ್ಕೆ ಶೇಕಡಾ 26 ರಷ್ಟು ಹೆಚ್ಚಾಗಿದೆ ಎಂದು ತಂತ್ರಜ್ಞಾನ ಹೂಡಿಕೆದಾರ ನಾಸ್ಪರ್ಸ್ ಈ ಹಿಂದೆ ಹೇಳಿತ್ತು.

ಮಾರ್ಚ್ 2023 ರ ವೇಳೆಗೆ ಸ್ವಿಗ್ಗಿಯ ಆಹಾರ ವಿತರಣಾ ವ್ಯವಹಾರವು ಲಾಭದಾಯಕವಾಗಿದೆ ಎಂದು ಸ್ವಿಗ್ಗಿಯ ಮುಖ್ಯ ಕಾರ್ಯನಿರ್ವಾಹಕ ಶ್ರೀಹರ್ಷ ಮಜೆಟಿ ಮೇ ತಿಂಗಳಲ್ಲಿ ಹೇಳಿದ್ದರು. ಕಂಪನಿಯು ತನ್ನ ದಿನಸಿ ವಿತರಣಾ ವ್ಯವಹಾರವಾದ ಇನ್​ಸ್ಟಾ ಮಾರ್ಟ್ ನಲ್ಲಿ ಹೆಚ್ಚುವರಿ ಹೂಡಿಕೆಗಳನ್ನು ಮಾಡಿದೆ ಮತ್ತು ಆ ವಿಭಾಗವು ಲಾಭ ಗಳಿಸಲಾರಂಭಿಸಿದ ನಂತರ ಹೂಡಿಕೆಗಳನ್ನು ಕಡಿಮೆ ಮಾಡಲಾಗುವುದು ಎಂದು ಮಜೆಟಿ ಹೇಳಿದ್ದರು.

ಇದನ್ನೂ ಓದಿ : ಉದ್ಯೋಗಕ್ಕಾಗಿ ಲಂಚ: 16 ನೌಕರರನ್ನು ವಜಾಗೊಳಿಸಿದ ಟಿಸಿಎಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.