ETV Bharat / business

ಮತ್ತೆ ಚಲಾವಣೆಗೆ ಬರುತ್ತಾ 1,000 ರೂಪಾಯಿ ನೋಟು?: ಹೀಗೊಂದು ವದಂತಿ

author img

By ETV Bharat Karnataka Team

Published : Oct 20, 2023, 5:39 PM IST

RBI is not in consideration of the re introduction of Rs 1000 note: Sources
1000 ರೂ. ನೋಟುಗಳು ಮತ್ತೆ ಚಲಾವಣೆ?: ಹೀಗೊಂದು ವದಂತಿ

2016ರಲ್ಲಿ ರದ್ದಾಗಿರುವ 1,000 ರೂ. ನೋಟುಗಳು ಮತ್ತೆ ಚಲಾವಣೆಗೆ ಬರಲಿವೆ ಎಂಬ ವದಂತಿ ಹರಡಿದೆ.

ನವದೆಹಲಿ: ಏಳು ವರ್ಷಗಳ ಹಿಂದೆ ರದ್ದಾದ 1,000 ರೂಪಾಯಿ ಮುಖಬೆಲೆಯ ನೋಟುಗಳು ಮತ್ತೆ ಚಲಾವಣೆಗೆ ಬರಲಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರೊಂದಿಗೆ ಭಾರತೀಯ ರಿಸರ್ವ್​​ ಬ್ಯಾಂಕ್​ (ಆರ್​ಬಿಐ) ಹಳೆಯ ನೋಟನ್ನು ಮತ್ತೆ ಪರಿಚಯಿಸುವ ಆಲೋಚನೆಯಲ್ಲಿಲ್ಲ ಎಂದೂ ವರದಿಯಾಗಿದೆ.

2016ರಲ್ಲಿ ನವೆಂಬರ್​ನಲ್ಲಿ ಕೇಂದ್ರ ಸರ್ಕಾರ 500 ಹಾಗೂ 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯ ಎಂದು ಘೋಷಿಸಿತ್ತು. ಆರ್​ಬಿಐ 500 ರೂ.ಗಳ ಹೊಸ ನೋಟುಗಳು ಹಾಗೂ 2000 ರೂ. ಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು. ಇದೇ ಮೇ ತಿಂಗಳಲ್ಲಿ 2,000 ನೋಟುಗಳ ಚಲಾವಣೆಯನ್ನು ಹಿಂಪಡೆದಿದೆ. ಇದರ ನಡುವೆ 1,000 ರೂ. ನೋಟುಗಳು ಮತ್ತೆ ಚಲಾವಣೆಗೆ ಬರಲಿವೆ ಎಂಬ ವದಂತಿ ಆಗಾಗ್ಗೆ ಹಬ್ಬುತ್ತಲಿದೆ.

  • RBI is not in consideration of the re-introduction of Rs 1000 note: Sources

    — ANI (@ANI) October 20, 2023 " class="align-text-top noRightClick twitterSection" data=" ">

ಈಗ ಕೂಡ ಅಂತಹದ್ದೇ ಸುದ್ದಿ ಹರಿದಾಡುತ್ತಿದೆ. ಆದರೆ, ಈ 1,000 ರೂ. ಮುಖ ಬೆಲೆಯ ನೋಟುಗಳನ್ನು ಮರು ಚಲಾವಣೆಗೆ ತರುವುದನ್ನು ಆರ್​ಬಿಐ ಪರಿಗಣಿಸುತ್ತಿಲ್ಲ ಎಂಬುದಾಗಿ ಮೂಲಗಳು ತಿಳಿಸಿವೆ ಎಂದು ಎಎನ್​ಐ ಸುದ್ದಿಸಂಸ್ಥೆ ಶುಕ್ರವಾರ ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಪೋಸ್ಟ್​ ಮಾಡಿದೆ.

ಇದನ್ನೂ ಓದಿ: 500 ರೂ ನೋಟುಗಳನ್ನ ವಾಪಸ್​ ಪಡೆಯುವ ಮಾತೇ ಇಲ್ಲ..1000 ರೂ ನೋಟುಗಳ ಜಾರಿಯೂ ಇಲ್ಲ: ಆರ್​​​ಬಿಐ

ಹಣದುಬ್ಬರದ ಮೇಲೆ ಅರ್ಜುನನ ಕಣ್ಣು-ಆರ್​ಬಿಐ: ಮತ್ತೊಂದೆಡೆ, ಆರ್​ಬಿಐ ಗವರ್ನರ್​ ಶಕ್ತಿಕಾಂತ ದಾಸ್ ಇಂದು 'ಕೌಟಿಲ್ಯ ಆರ್ಥಿಕ ಸಮಾವೇಶ' 2023ರಲ್ಲಿ ಬಡ್ಡಿದರ ಹಾಗೂ ಹಣದುಬ್ಬರ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದರು. ''ಈ ಕ್ಷಣಕ್ಕೆ ಬಡ್ಡಿದರವು ಅಧಿಕವಾಗಿ ಉಳಿಯುವ ಸಾಧ್ಯತೆಯಿದೆ. ಕೇಂದ್ರೀಯ ಬ್ಯಾಂಕ್​ ಹೆಚ್ಚಿನ ಜಾಗರೂಕತೆ ಹೊಂದಿರುತ್ತದೆ. ಹಣದುಬ್ಬರದಲ್ಲಿ ನಿರಂತರ ಕುಸಿತವನ್ನು ಖಚಿತಪಡಿಸಿಕೊಳ್ಳಲು ಅರ್ಜುನನ ಕಣ್ಣು ಇರಿಸುತ್ತದೆ'' ಎಂದು ಒತ್ತಿ ಹೇಳಿದರು.

''ಬಡ್ಡಿ ದರ ಹೆಚ್ಚಾಗಿರುತ್ತದೆ. ಅದು ಎಷ್ಟು ಕಾಲ ಇದೇ ಇರುತ್ತದೆ ಎಂಬುವುದನ್ನು ಸಮಯ ಮತ್ತು ಜಗತ್ತಿನ ಪರಿಸ್ಥಿತಿ ಮಾತ್ರ ಹೇಳಲು ಸಾಧ್ಯ ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ನಾವು ಹೆಚ್ಚು ಜಾಗರೂಕರಾಗಿದ್ದೇವೆ. ತೆಗೆದುಕೊಳ್ಳಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಸಿದ್ಧ. ಹಣದುಬ್ಬರದಲ್ಲಿ ನಿರಂತರ ಇಳಿಕೆಯನ್ನು ನಾವು ನೋಡಬೇಕಾಗಿದೆ. ಇದನ್ನು ಶೇ.4ಕ್ಕೆ ತಲುಪುವುದು ನಮ್ಮ ಉದ್ದೇಶ'' ಎಂದು ವಿವರಿಸಿದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಬಗ್ಗೆ ಮಾತನಾಡಿ, ''ಭಾರತದಲ್ಲಿನ ಪೆಟ್ರೋಲ್ ಮತ್ತು ಡೀಸೆಲ್‌ನ ಪಂಪ್​ಗಳಲ್ಲಿ ಎಷ್ಟು ಬೆಲೆ ಇದೆ ಎಂಬುವುದು ಪ್ರಮುಖವಾಗಿವೆ'' ಎಂದರು. ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನ ಪ್ರಭಾವದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಕಳೆದ 15 ದಿನಗಳಲ್ಲಿ ಅಮೆರಿಕ ಬಾಂಡ್ ಗಳಿಕೆ ಪ್ರಮಾಣ ಹೆಚ್ಚಿದೆ. ಇದು ಇತರ ಆರ್ಥಿಕತೆಗಳ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರಿದೆ'' ಎಂದು ಹೇಳಿದರು.

ಮುಂದುವರೆದು, ''ನಮ್ಮ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಸುಭದ್ರವಾಗಿಯೇ ಮುಂದುವರಿದಿವೆ. ಅಂತಿಮವಾಗಿ ಈ ಅನಿಶ್ಚಿತ ಕಾಲದಲ್ಲಿ ನಿಮ್ಮ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಎಷ್ಟು ಪ್ರಬಲವಾಗಿವೆ. ನಿಮ್ಮ ಆರ್ಥಿಕ ವಲಯ ಎಷ್ಟು ಪ್ರಬಲವಾಗಿದೆ ಎಂಬುದು ಮುಖ್ಯ. ಈ ಎರಡೂ ನಿಯತಾಂಕಗಳಲ್ಲಿ ಭಾರತವು ಉತ್ತಮ ಸ್ಥಾನದಲ್ಲಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲದೇ, ನೀವು ಭಾರತೀಯ ರೂಪಾಯಿಯ ಏರಿಳಿತವನ್ನು ಗಮನಿಸಿದರೆ, ಜನವರಿ 1ರಿಂದ ಇಲ್ಲಿಯವರೆಗೆ ರೂಪಾಯಿ ಕುಸಿತವು ಶೇ.0.6 ರಷ್ಟಿದ್ದರೆ, ಮತ್ತೊಂದೆಡೆ, ಅದೇ ಅವಧಿಯಲ್ಲಿ ಯುಎಸ್ ಡಾಲರ್ ಮೌಲ್ಯವು ಶೇ.3ರಷ್ಟಿದೆ. ಆದ್ದರಿಂದ ರೂಪಾಯಿ ಸ್ಥಿರವಾಗಿದೆ'' ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ವಿಶ್ವ ವ್ಯಾಪಾರದ ಮೇಲೆ ಪರಿಣಾಮ ಬೀರದ ಇಸ್ರೇಲ್​-ಹಮಾಸ್​ ಯುದ್ಧ: ಹೂಡಿಕೆದಾರರಿಗೆ ಲಾಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.