ETV Bharat / business

ಲಾಭದತ್ತ ತೈಲ ಮಾರುಕಟ್ಟೆ ಕಂಪನಿಗಳು: ಪೆಟ್ರೋಲ್​, ಡೀಸೆಲ್​ ದರ ಇಳಿಕೆ ಸಾಧ್ಯತೆ

author img

By

Published : Jun 8, 2023, 10:57 AM IST

ಪೆಟ್ರೋಲ್​, ಡೀಸೆಲ್​ ದರ ಇಳಿಕೆ ಸಾಧ್ಯತೆ
ಪೆಟ್ರೋಲ್​, ಡೀಸೆಲ್​ ದರ ಇಳಿಕೆ ಸಾಧ್ಯತೆ

ತೈಲ ಮಾರಾಟ ಕಂಪನಿಗಳು ಆರ್ಥಿಕ ನಷ್ಟದಿಂದ ಚೇತರಿಸಿಕೊಂಡಿವೆ. ಹೀಗಾಗಿ ಪೆಟ್ರೋಲ್​, ಡೀಸೆಲ್​ ದರ ಕಡಿಮೆ ಮಾಡುವ ಯೋಚನೆ ಮಾಡಿವೆ ಎಂದು ತಿಳಿದು ಬಂದಿದೆ.

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಲಾಭದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಕಂಪನಿಗಳು ಆರ್ಥಿಕ ನಷ್ಟದಿಂದ ಚೇತರಿಸಿಕೊಂಡಿವೆ. ಧನಾತ್ಮಕ ಆರ್ಥಿಕ ಪ್ರಗತಿ ಕಂಡ ಕಾರಣ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಣೆ ಮಾಡುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ತೈಲ ಮಾರುಕಟ್ಟೆ ಕಂಪನಿಗಳು ತ್ರೈಮಾಸಿಕದಲ್ಲಿ ಉತ್ತಮ ಲಾಭ ಗಳಿಸಿವೆ. ಮುಂದಿನ ಕ್ವಾರ್ಟರ್​ನಲ್ಲೂ ಇಷ್ಟೇ ಲಾಭ ನಿರೀಕ್ಷೆ ಇದೆ. ಹೀಗಾಗಿ ದುಬಾರಿಯಾಗಿರುವ ಪೆಟ್ರೋಲ್​, ಡೀಸೆಲ್​ ದರವನ್ನು ಪರಿಷ್ಕರಣೆ ಮಾಡಲು ಚಿಂತನೆ ನಡೆಸಿವೆ ಎಂದು ತಿಳಿದು ಬಂದಿದೆ. ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಸಂಘಟನೆಯ (OPEC) ಸದಸ್ಯ ರಾಷ್ಟ್ರವೊಂದು ತೈಲ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಇದು ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಂದಾಜಿಸಲಾಗಿದೆ.

ತೈಲ ಪೂರೈಕೆಯಲ್ಲಿ ಕೊರತೆ ಇಲ್ಲ: ಪೆಟ್ರೋಲಿಯಂ ಮತ್ತು ಅನಿಲ ಸಚಿವಾಲಯದ ಅಧಿಕಾರಿಯ ಪ್ರಕಾರ, ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೈಲ ಪೂರೈಕೆ ಮಾಡಲಾಗಿದೆ. ಹೀಗಾಗಿ ಯಾವುದೇ ದೇಶದ ತೈಲ ಉತ್ಪನ್ನ ಸ್ಥಗಿತ ಪರಿಣಾಮ ಬೀರುವುದಿಲ್ಲ. OPEC ದೇಶಗಳು ಅವುಗಳ ವರ್ಷದ ಯೋಜಿತ ತೈಲ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

ವಿಶ್ವದ ಪ್ರಮುಖ ತೈಲ ರಫ್ತುದಾರ ರಾಷ್ಟ್ರವಾದ ಸೌದಿ ಅರೇಬಿಯಾ ಕೂಡ ಜುಲೈನಿಂದ ಉತ್ಪಾದನೆ ಕಡಿತ ಮಾಡುವ ನಿರ್ಧಾರಕ್ಕೆ ಬಂದಿದೆ. ತೈಲ ಉತ್ಪಾದಕ ರಾಷ್ಟ್ರದ ಈ ನಿರ್ಧಾರ ಕಚ್ಚಾ ತೈಲ ಪೂರೈಕೆಯ ಕೊರತೆಯನ್ನು ಉಂಟುಮಾಡುವ ಸಾಧ್ಯತೆಯಿಲ್ಲ ಎಂದು ಮೂಲಗಳು ಅಂದಾಜಿಸಿವೆ. ಕಚ್ಚಾ ತೈಲ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಮತ್ತಷ್ಟು ಉತ್ಪಾದನೆ ಕಡಿತವನ್ನು ತೆಗೆದುಕೊಳ್ಳುವ ತೈಲೋತ್ಪಾದನಾ ರಾಷ್ಟ್ರಗಳ ಈ ನಿರ್ಧಾರವು ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ನಾವು ಇಂಧನ ಲಭ್ಯತೆಯ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಸುಸ್ಥಿರತೆ ಮತ್ತು ಹಸಿರು ಪರಿವರ್ತನೆಯನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ಇಂದು, ನಾವು ಹಸಿರು ಹೈಡ್ರೋಜನ್ ಮಿಷನ್ ಕುರಿತು ತೈಲ ಮಾರಾಟ ಕಂಪನಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದರು.

ಪ್ರತಿಶತ 20 ರಷ್ಟು ಎಥೆನಾಲ್ ಉತ್ಪಾದನೆ ಸಾಧಿಸುವ ಸರ್ಕಾರದ ಯೋಜನೆಯು ಪ್ರಗತಿಯಲ್ಲಿದೆ. ನಿಗದಿತ ಎಥೆನಾಲ್​ನಷ್ಟು ಮಾತ್ರ ಉತ್ಪಾದನೆ ಮಾಡಬೇಕು ಎಂಬ ನಿರ್ಬಂಧವಿಲ್ಲ. ಆರಂಭದಲ್ಲಿ ಕೆಲವು ಸವಾಲುಗಳು ಇದ್ದವು. ಬಳಿಕ ಅವುಗಳನ್ನು ಮೆಟ್ಟಿನಿಂತು ಹೊಸ ತಂತ್ರಜ್ಞಾನದೊಂದಿಗೆ, ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಆಟೋ ಕಂಪನಿಗಳು ಎಂಜಿನ್ ತಂತ್ರಜ್ಞಾನದಲ್ಲಿ ಹೊಸ ಮಾದರಿಯಲ್ಲಿ ಬರುತ್ತಿವೆ ಎಂದು ಅವರು ಹೇಳಿದರು.

ಇಂದಿನ ಪೆಟ್ರೋಲ್​ ದರ ಹೀಗಿದೆ: ಇಂದಿನ ಪೆಟ್ರೋಲ್ ದರ ದೆಹಲಿಯಲ್ಲಿ ಲೀಟರ್‌ಗೆ 96.72. ರೂಪಾಯಿ ಇದೆ. ಹಾಗೆಯೇ ಮುಂಬೈನಲ್ಲಿ 106.31, ಕೋಲ್ಕತ್ತಾದಲ್ಲಿ 106.03 ಚೆನ್ನೈನಲ್ಲಿ 102.63 ರೂಪಾಯಿ ಇದೆ. ಡಿಸೇಲ್ ದರದಲ್ಲಿಯೂ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ 89.62, ಮುಂಬೈನಲ್ಲಿ 94.27, ಕೋಲ್ಕತ್ತಾ 92.76, ಚೆನ್ನೈನಲ್ಲಿ 94.24 ರೂಪಾಯಿ ಇದೆ. ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಪ್ರತಿ ತಿಂಗಳ 1 ರಿಂದ 16ರ ನಡುವೆ ಬದಲಾಗುತ್ತಿತ್ತು. ಆದಾಗ್ಯೂ ಜೂನ್‌ 2017ರ ನಂತರ ಜಾರಿಗೆ ಬಂದ ಹೊಸ ಯೋಜನೆಯಂತೆ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪೆಟ್ರೋಲ್‌ ಡಿಸೇಲ್ ದರಗಳಲ್ಲಿ ಬದಲಾವಣೆಯಾಗುತ್ತದೆ.

ಇದನ್ನೂ ಓದಿ: ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರ್​ಬಿಐ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.