ETV Bharat / business

India Inflation:ಚಿಲ್ಲರೆ ಹಣದುಬ್ಬರ ಶೇ 6.7ಕ್ಕೆ ಏರಿಕೆ ಸಾಧ್ಯತೆ; ಅರ್ಥಶಾಸ್ತ್ರಜ್ಞರ ಅಂದಾಜು

author img

By

Published : Aug 8, 2023, 1:24 PM IST

India inflation Retail inflation
ಚಿಲ್ಲರೆ ಹಣದುಬ್ಬರ ಏರಿಕೆ

India Inflation: ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಜುಲೈನಲ್ಲಿ 6.7 ಕ್ಕೆ ಏರಬಹುದು ಎಂದು ಡಾಯಿಶ್​ ಬ್ಯಾಂಕ್ ಇಂಡಿಯಾದ ಅರ್ಥಶಾಸ್ತ್ರಜ್ಞರು ಅಂದಾಜು ಮಾಡಿದ್ದಾರೆ.

ಮುಂಬೈ: ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ತೀವ್ರವಾಗಿ ಏರಿಕೆಯಾಗುವ ಸಾಧ್ಯತೆಯಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಇದು ಶೇಕಡಾ 1.90 ರಿಂದ 6.7 ಕ್ಕೆ ಹೆಚ್ಚಾಗಬಹುದು. ಭಾರತದಲ್ಲಿನ ಚಿಲ್ಲರೆ ಹಣದುಬ್ಬರ ಹೆಚ್ಚಾಗಬಹುದು ಎಂದು ವಿದೇಶಿ ಬ್ಯಾಂಕುಗಳ ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಜುಲೈನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರವು ಶೇಕಡಾ 6.7 ಕ್ಕೆ ಹೆಚ್ಚಾಗಬಹುದು. ಇದು ಜೂನ್​ನಲ್ಲಿ ಶೇಕಡಾ 4.8 ಆಗಿತ್ತು ಎಂದು ಡಾಯಿಶ್ ಬ್ಯಾಂಕ್ ಇಂಡಿಯಾ ಅರ್ಥಶಾಸ್ತ್ರಜ್ಞರು ಸೋಮವಾರ ವರದಿಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ 10ರಂದು ಆರ್​ಬಿಐ ರೆಪೋ ದರ ಘೋಷಣೆ: ರಿಸರ್ವ್​ ಬ್ಯಾಂಕ್​ನ ಮುಖ್ಯ ಅರ್ಥಶಾಸ್ತ್ರಜ್ಞ ಕೌಶಿಕ್ ದಾಸ್ ನೇತೃತ್ವದ ಅರ್ಥಶಾಸ್ತ್ರಜ್ಞರ ವರದಿ ಜುಲೈ ತಿಂಗಳ ಹಣದುಬ್ಬರ ದತ್ತಾಂಶ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಪರಾಮರ್ಶೆಗೆ ಮೊದಲೇ ಪ್ರಕಟಿತವಾಗಿದೆ. ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿ ಸಭೆ ಮಂಗಳವಾರ ಪ್ರಾರಂಭವಾಗಲಿದ್ದು, ಹಣಕಾಸು ನೀತಿ ಪರಾಮರ್ಶೆಯನ್ನು ಆಗಸ್ಟ್ 10 ರಂದು ಪ್ರಕಟಿಸಲಾಗುವುದು.

22 ಆಹಾರ ಪದಾರ್ಥಗಳ ಬೆಲೆ ಶೇ 12.3ರಷ್ಟು ಏರಿಕೆ: ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್​ಬಿಐ ಈ ಬಾರಿ ನೀತಿ ದರ (ರೆಪೊ ದರ) ವನ್ನು ಬದಲಾಯಿಸದೇ ಉಳಿಸಿಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಎರಡು ಸಭೆಗಳಲ್ಲಿ ಪಾಲಿಸಿ ದರದಲ್ಲಿ ಯಾವುದೇ ಹೆಚ್ಚಳ ಕಂಡು ಬಂದಿಲ್ಲ. ವರದಿ ಪ್ರಕಾರ, ಟೊಮೆಟೊ ಮತ್ತು ಈರುಳ್ಳಿ ಮುಂತಾದ ಆಹಾರ ಪದಾರ್ಥಗಳ ಬೆಲೆ ಏರಿಕೆಯು ಹಣದುಬ್ಬರ ಏರಿಕೆಗೆ ಕಾರಣವಾಗಿದೆ. ಅದೇ ಸಮಯದಲ್ಲಿ, ಅಕ್ಕಿಯ ಬೆಲೆಯೂ ಹೆಚ್ಚಾಗಿದೆ. 22 ಅಗತ್ಯ ಆಹಾರ ಪದಾರ್ಥಗಳ ದೈನಂದಿನ ಬೆಲೆಗಳು ಜೂನ್​ನಲ್ಲಿ ಸರಾಸರಿ ಶೇಕಡಾ 2.4 ರಿಂದ ಶೇಕಡಾ 12.3 ರಷ್ಟು ಏರಿಕೆಯಾಗಿವೆ.

ಟೊಮೆಟೊ ಬೆಲೆ ಶೇ 236ರಷ್ಟು ಏರಿಕೆ: ಪ್ರಮುಖ ತರಕಾರಿಗಳ ಪೈಕಿ ಟೊಮೆಟೊ ಬೆಲೆ ಜುಲೈನಲ್ಲಿ ಶೇಕಡಾ 236.1 ರಷ್ಟು ಏರಿಕೆಯಾಗಿದೆ. ಅದೇ ಸಮಯದಲ್ಲಿ ಈರುಳ್ಳಿ ಬೆಲೆ ಶೇಕಡಾ 15.8 ರಷ್ಟು ಹೆಚ್ಚಾಗಿದೆ. ಆಲೂಗಡ್ಡೆ ಬೆಲೆ ಜೂನ್​ನಲ್ಲಿ ಶೇ 5.7ರಿಂದ ಜುಲೈನಲ್ಲಿ ಶೇ 9.3 ಕ್ಕೆ ಏರಿಕೆಯಾಗಿದೆ.

ಅಗತ್ಯಕ್ಕಿಂತ 3 ಪಟ್ಟು ಹೆಚ್ಚು ಅಕ್ಕಿ ದಾಸ್ತಾನು: ಆಗಸ್ಟ್ ಆರಂಭದಲ್ಲಿ ಭಾರತದ ಅಕ್ಕಿ ದಾಸ್ತಾನು ತನ್ನ ಗುರಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ದೇಶವಾಗಿರುವ ಭಾರತ ತಿಳಿಸಿದೆ. ಅಕ್ಟೋಬರ್ ವೇಳೆಗೆ ಹೊಸ ಋತುವಿನ ಬೆಳೆ ಮಾರುಕಟ್ಟೆಗೆ ಬರಲಿದೆ. ಇದರ ಜೊತೆಗೆ ದೇಶವು ಅಕ್ಕಿ ರಫ್ತು ನಿಷೇಧಿಸಿರುವುದರಿಂದ ಭಾರತದಲ್ಲಿ ಅಕ್ಕಿ ಕೊರತೆ ಕಾಡುವ ಸಾಧ್ಯತೆಗಳಿಲ್ಲ. ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರ ದೇಶ ಭಾರತವು ಕಳೆದ ತಿಂಗಳು ತನ್ನ ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತನ್ನು ನಿಲ್ಲಿಸಿದೆ. ಇದರಿಂದ ವಿಶ್ವ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆಗಳು ಅನೇಕ ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ.

ಇದನ್ನೂ ಓದಿ : Tesla & India: ಟೆಸ್ಲಾ ಸಿಎಫ್​ಒ ಆಗಿ ಭಾರತ ಮೂಲದ ವೈಭವ್ ತನೇಜಾ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.