ETV Bharat / business

Closing Bell: ಸತತ 4ನೇ ದಿನ ಸೆನ್ಸೆಕ್ಸ್​, ನಿಫ್ಟಿ ಕುಸಿತ

author img

By ETV Bharat Karnataka Team

Published : Sep 22, 2023, 7:04 PM IST

Sensex, Nifty falls for 4th straight day; pharma stocks fall
Sensex, Nifty falls for 4th straight day; pharma stocks fall

ಭಾರತೀಯ ಷೇರು ಮಾರುಕಟ್ಟೆಗಳು ಶುಕ್ರವಾರ ಇಳಿಕೆಯೊಂದಿಗೆ ಕೊನೆಗೊಂಡಿವೆ.

ಮುಂಬೈ : ಫಾರ್ಮಾ ಕಂಪನಿಗಳ ಷೇರುಗಳು ತೀವ್ರ ಕುಸಿಯುವುದರೊಂದಿಗೆ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಶುಕ್ರವಾರ ಸತತ ನಾಲ್ಕನೇ ದಿನ ಇಳಿಕೆಯೊಂದಿಗೆ ಕೊನೆಗೊಂಡವು. ಶುಕ್ರವಾರದಂದು ಬಿಎಸ್ಇ ಸೆನ್ಸೆಕ್ಸ್ 221.09 ಪಾಯಿಂಟ್ಸ್ ಕುಸಿದು 66,009.15 ಕ್ಕೆ ಕೊನೆಗೊಂಡರೆ, ಎನ್ಎಸ್ಇ ನಿಫ್ಟಿ 50 68.10 ಪಾಯಿಂಟ್ಸ್ ಕುಸಿದು 19,674.25 ಕ್ಕೆ ತಲುಪಿದೆ. ನಿಫ್ಟಿ ಸ್ಮಾಲ್​ಕ್ಯಾಪ್100 ಹೊರತುಪಡಿಸಿ ಹೆಚ್ಚಿನ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಇಳಿಕೆಯಲ್ಲಿ ಕೊನೆಗೊಂಡವು. ನಿಫ್ಟಿ ಸ್ಮಾಲ್​ಕ್ಯಾಪ್100 ಶೇಕಡಾ 0.26 ರಷ್ಟು ಏರಿಕೆಯಾಗಿದೆ.

ವಲಯ ಸೂಚ್ಯಂಕಗಳ ಪೈಕಿ ನಿಫ್ಟಿ ಪಿಎಸ್​ಯು ಬ್ಯಾಂಕ್ ಶೇಕಡಾ 3.51 ರಷ್ಟು ಲಾಭ ಗಳಿಸಿದೆ. ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳ ಏರಿಕೆಯ ಬೆಂಬಲದೊಂದಿಗೆ ನಿಫ್ಟಿ ಆಟೋ ಮಾತ್ರ ದಿನವನ್ನು ಏರಿಕೆಯಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾಯಿತು. ನಿಫ್ಟಿ 50 ರಲ್ಲಿ ಇಂಡಸ್ಇಂಡ್ ಬ್ಯಾಂಕ್, ಮಾರುತಿ, ಎಸ್​ಬಿಐ, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಏಷ್ಯನ್ ಪೇಂಟ್ಸ್ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ಮತ್ತೊಂದೆಡೆ ವಿಪ್ರೋ, ಡಾ. ರೆಡ್ಡೀಸ್, ಯುಪಿಎಲ್, ಸಿಪ್ಲಾ ಮತ್ತು ಬಜಾಜ್ ಆಟೋ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.

ದೇಶೀಯ ಮಾರುಕಟ್ಟೆಗಳು ಕಳೆದ ನಾಲ್ಕು ದಿನಗಳಿಂದ ದುರ್ಬಲ ಸ್ಥಿತಿಯಲ್ಲಿವೆ ಮತ್ತು ಯುಎಸ್​ನಲ್ಲಿ ಸಂಭವನೀಯ ಬಡ್ಡಿದರ ಏರಿಕೆಯ ಬಗ್ಗೆ ಹೊಸ ಕಳವಳಗಳ ನಂತರ ನಾಲ್ಕು ವಾರಗಳಲ್ಲಿ ಮೊದಲ ಸಾಪ್ತಾಹಿಕ ನಷ್ಟವನ್ನು ದಾಖಲಿಸಿವೆ. ಯುಎಸ್ ಮಾರುಕಟ್ಟೆ ನಿರ್ಣಾಯಕವಾಗಿರುವುದರಿಂದ ಇದು ಐಟಿ ಮತ್ತು ಫಾರ್ಮಾ ಕಂಪನಿಗಳ ಷೇರುಗಳ ಮೇಲೆ ಪರಿಣಾಮ ಬೀರಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಗುರುವಾರ 3,007.36 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಅಂಕಿ ಅಂಶಗಳು ತಿಳಿಸಿವೆ. ಎಫ್​ಪಿಐಗಳು ಈ ವಾರದಲ್ಲಿ ಭಾರತೀಯ ಷೇರುಗಳ ನಿವ್ವಳ ಮಾರಾಟಗಾರರಾಗಿದ್ದರು. ಜಾಗತಿಕ ತೈಲ ಬೆಂಚ್​ಮಾರ್ಕ್ ಬ್ರೆಂಟ್ ಕ್ರೂಡ್ ತೈಲ ಸೂಚ್ಯಂಕ ಶೇಕಡಾ 0.59 ರಷ್ಟು ಏರಿಕೆಯಾಗಿ ಬ್ಯಾರೆಲ್​ಗೆ 93.85 ಡಾಲರ್​ಗೆ ತಲುಪಿದೆ. ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್ ಮತ್ತು ಟೋಕಿಯೊ ಇಳಿಕೆಯಲ್ಲಿದ್ದರೆ, ಶಾಂಘೈ ಮತ್ತು ಹಾಂಗ್ ಕಾಂಗ್ ಏರಿಕೆಯಲ್ಲಿ ಕೊನೆಗೊಂಡವು.

ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳು ಮತ್ತು ಮಾನ್ಸೂನ್ ಕೊರತೆಯ ಅಪಾಯಗಳ ಹೊರತಾಗಿಯೂ, ಸುಧಾರಿತ ಕಾರ್ಪೊರೇಟ್ ಲಾಭದಾಯಕತೆ, ಖಾಸಗಿ ಬಂಡವಾಳ ಸೃಷ್ಟಿ ಮತ್ತು ಬ್ಯಾಂಕ್ ಸಾಲದ ಬೆಳವಣಿಗೆಯ ಹಿನ್ನೆಲೆಯಲ್ಲಿ ದೇಶವು 2024 ರ ಹಣಕಾಸು ವರ್ಷದಲ್ಲಿ ಶೇಕಡಾ 6.5 ರಷ್ಟು ಬೆಳವಣಿಗೆಯನ್ನು ಸಾಧಿಸುತ್ತದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದೆ.

ಇದನ್ನೂ ಓದಿ : ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅನುಮತಿ ಪಡೆದ ಅಕಾಸಾ ಏರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.