ETV Bharat / bharat

ಬಿಜೆಪಿ ಅಧಿಕಾರಕ್ಕೆ ಬಂದರೆ ವಿಶ್ವದ 3ನೇ ಆರ್ಥಿಕ ಶಕ್ತಿ.. ಕಾಂಗ್ರೆಸ್​ ಬಂದ್ರೆ ಶೇ '85ರಷ್ಟು ಕಮಿಷನ್​' ಜಾರಿ: ಮೋದಿ

author img

By ETV Bharat Karnataka Team

Published : Nov 8, 2023, 4:02 PM IST

Updated : Nov 8, 2023, 4:07 PM IST

ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ ಮೋದಿ ಅವರು ಕಾಂಗ್ರೆಸ್​ ಸೇರಿದಂತೆ ವಿಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ದೇಶವನ್ನು ಮೂರನೇ ಆರ್ಥಿಕ ರಾಷ್ಟ್ರವನ್ನಾಗಿ ಮಾಡುವುದಾಗಿ ಭರವಸೆ ನೀಡಿದರು. ಇದೇ ವೇಳೆ, ನಿನ್ನೆ ಬಿಹಾರದ ವಿಧಾನಸಭೆ ಅಧಿವೇಶನದಲ್ಲಿ ಮಹಿಳೆಯರ ಬಗ್ಗೆ ನಿತೀಶ್​ ಕುಮಾರ್​ ಮಾತನಾಡಿದ್ದಾರೆನ್ನಲಾದ ಹೇಳಿಕೆ ಬಗ್ಗೆಯೂ ಟೀಕಾ ಪ್ರಹಾರ ನಡೆಸಿದರು. ನಿತೀಶ್ ಹೇಳಿಕೆಯನ್ನು ಖಂಡಿಸಿದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

ದಾಮೋಹ್ (ಮಧ್ಯಪ್ರದೇಶ) : ತಾವು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಲ್ಲಿ ಭಾರತವನ್ನು ವಿಶ್ವದಲ್ಲಿ ಮೂರನೇ ಆರ್ಥಿಕ ರಾಷ್ಟ್ರವನ್ನಾಗಿ ಮಾಡುವೆ. ಭ್ರಷ್ಟಾಚಾರದ ವಿರುದ್ಧ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಮಧ್ಯಪ್ರದೇಶದ ದಾಮೋಹ್​ ನಗರದಲ್ಲಿ ಬುಧವಾರ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ತಮ್ಮ ಮೂರನೇ ಅಧಿಕಾರಾವಧಿಯಲ್ಲಿ ದೇಶವನ್ನು ವಿಶ್ವದ ಅಗ್ರ ಮೂರು ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿ ಮಾಡುವೆ. 2014 ರಲ್ಲಿ ಬಿಜೆಪಿ ನೇತೃತ್ವ ಸರ್ಕಾರ ಅಧಿಕಾರಕ್ಕೆ ಬಂದಾಗ, ದೇಶದ ಆರ್ಥಿಕತೆಯು 10 ನೇ ಸ್ಥಾನದಲ್ಲಿತ್ತು. ಕ್ರಮೇಣ ಅದನ್ನು 9, 8, 7, 6 ಈಗ 5 ನೇ ಸ್ಥಾನಕ್ಕೆ ತರಲಾಗಿದೆ. 2 ಶತಮಾನಗಳ ಕಾಲ ನಮ್ಮನ್ನಾಳಿದ ಇಂಗ್ಲೆಂಡ್​ ಅನ್ನೇ ಹಿಂದಿಕ್ಕಿ ಈ ಸಾಧನೆ ಮಾಡಿದ್ದೇವೆ. ಇದು ವಿಶ್ವಕ್ಕೇ ಅಚ್ಚರಿಯ ಸಂಗತಿಯಾಗಿದೆ. ಇದಾದ ಮೇಲೆ ಭಾರತದತ್ತ ವಿಶ್ವವೇ ನೋಟ ಬೀರಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್​ ಬಂದರೆ ಕಮಿಷನ್​ ದಂಧೆ: ನಮ್ಮ ಸರ್ಕಾರ ಇಷ್ಟೆಲ್ಲ ಸಾಧನೆ ಮಾಡಿದರೂ, ವಿಪಕ್ಷಗಳು ಎಂದೂ ಒಂದೊಳ್ಳೆ ಮಾತನಾಡಲಿಲ್ಲ. ಈ ಬಗ್ಗೆಯೂ ಚಕಾರ ಎತ್ತುತ್ತಲೇ ಇದ್ದಾರೆ. ಸಮರ್ಥ ವಿಪಕ್ಷವಾಗಿ ಕೆಲಸ ಮಾಡಲು ಬರುವುದಿಲ್ಲ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ, ನನ್ನ ಮೂರನೇ ಅಧಿಕಾರಾವಧಿಯಲ್ಲಿ ದೇಶದ ಆರ್ಥಿಕತೆಯನ್ನು ವಿಶ್ವದ ಅಗ್ರ ಮೂರರಲ್ಲಿ ನಿಲ್ಲಿಸುವೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಆ ಪಕ್ಷದ ಮಾಜಿ ಪ್ರಧಾನಿಯೊಬ್ಬರು ಈ ಹಿಂದೆ ಹೇಳಿದಂತೆ 'ಶೇ.85 ರಷ್ಟು ಕಮಿಷನ್ ವ್ಯವಸ್ಥೆ' ದೇಶದಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಕೇಂದ್ರದಿಂದ ಬಿಡುಗಡೆಯಾದ ಪ್ರತಿ 1 ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಉದ್ದೇಶಿತ ಫಲಾನುಭವಿಗೆ ತಲುಪುತ್ತದೆ. ಉಳಿದ 85 ರಷ್ಟು ಪೋಲಾಗುತ್ತಿದೆ ಎಂದು ಹೇಳಿದ್ದರು. ಇದನ್ನೇ ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

ಉಚಿತ ಅಕ್ಕಿ ವಿರುದ್ಧ ದೂರು ಮಹಾಪಾಪ: ಕೇಂದ್ರ ಸರ್ಕಾರ ಬಡ ಜನರಿಗಾಗಿ ಮುಂದಿನ ಐದು ವರ್ಷಗಳವರೆಗೆ ಉಚಿತ ಪಡಿತರವನ್ನು ಘೋಷಿಸಿದೆ. ಆದರೆ, ಅದನ್ನೇ ಚುನಾವಣಾ ವಿಷಯವನ್ನಾಗಿಸಿರುವ ವಿಪಕ್ಷಗಳು ಇದರ ವಿರುದ್ಧ ದೂರು ಸಲ್ಲಿಸುವುದಾಗಿ ಹೇಳುತ್ತಿವೆ. ಚುನಾವಣಾ ಆಯೋಗಕ್ಕೆ ಉಚಿತ ಅಕ್ಕಿ ಘೋಷಣೆಯನ್ನು ನಿಲ್ಲಿಸಲು ಕೋರಲು ಮುಂದಾಗಿವೆ. ಅವರು (ವಿಪಕ್ಷಗಳು) ಇಂತಹ ಮಹಾಪಾಪವನ್ನು ಮುಂದುವರಿಸಲಿ. ನಾವು ಜನರಿಗಾಗಿ ಒಳ್ಳೆಯ ಕೆಲಸವನ್ನು ಮಾಡುವುದನ್ನು ಮುಂದುವರಿಸುತ್ತೇವೆ ಎಂದರು.

ನಿತೀಶ್​ ಕುಮಾರ್​ಗೆ ತಿವಿದ ಮೋದಿ: ಜನಸಂಖ್ಯೆ ನಿಯಂತ್ರಣ ಕುರಿತು ಚರ್ಚೆಯಲ್ಲಿ ಮಹಿಳೆಯರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಬಿಹಾರ ಸಿಎಂ ನಿತೀಶ್​ಕುಮಾರ್​ರನ್ನು ಭಾಷಣದಲ್ಲಿ ಹೆಸರೇಳದೇ ಪ್ರಧಾನಿ ನರೇಂದ್ರ ಮೋದಿ ತಿವಿದರು. ವಿಪಕ್ಷಗಳ I.N.D.I.A ಮೈತ್ರಿಕೂಟದ ದೊಡ್ಡ ನಾಯಕರೊಬ್ಬರು ವಿಧಾನಸಭೆಯೊಳಗೆ ಊಹೆಗೂ ನಿಲುಕದ ಪದಗಳನ್ನು ಬಳಸಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಅವರಿಗೆ ಈ ಬಗ್ಗೆ ನಾಚಿಕೆಯೂ ಇಲ್ಲ. ಇಂತಹವರು ಸ್ತೀ ಕುಲಕ್ಕೆ ಒಳಿತು ಮಾಡಲು ಸಾಧ್ಯವೇ ನೀವೇ ಯೋಚಿಸಿ. ಇವರು ಮಹಿಳೆಯರನ್ನು ಗೌರಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ: ಕ್ಷಮೆ ಯಾಚಿಸಿದ ಬಿಹಾರ ಸಿಎಂ ನಿತೀಶ್​ ಕುಮಾರ್​

Last Updated :Nov 8, 2023, 4:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.