ETV Bharat / bharat

ನಿರುದ್ಯೋಗಿ ಯುವಕರು ಪರೀಕ್ಷೆಗಳನ್ನು ಕನ್ನಡದಲ್ಲಿ ಏಕೆ ಬರೆಯಬಾರದು: ರಾಹುಲ್​ ಗಾಂಧಿ ಪ್ರಶ್ನೆ

author img

By

Published : Oct 14, 2022, 4:08 PM IST

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕನ್ನಡ ಭಾಷೆಯ ಮೇಲೆ, ಇಲ್ಲಿನ ಜನರ ಮೇಲೆ, ಕರ್ನಾಟಕದ ಇತಿಹಾಸದ ಮೇಲೆ ದಾಳಿ ಮಾಡಬಹುದು ಎಂದು ಭಾವಿಸಿದರೆ, ಅವರು ಕಾಂಗ್ರೆಸ್ ಪಕ್ಷದ ಸಂಪೂರ್ಣ ಬಲವನ್ನು ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಿತ್ರದುರ್ಗದಲ್ಲಿ ಹೇಳಿದ್ದಾರೆ.

ಚಿತ್ರದುರ್ಗ: ಬಿಜೆಪಿ ಮತ್ತು ಆರ್​ಎಸ್​ಎಸ್ ರಾಜ್ಯದ ಜನತೆ ಹಾಗೂ ಅವರ ಭಾಷೆಯ ಮೇಲೆ ದಾಳಿ ಮಾಡಲು ಮುಂದಾದ್ರೆ, ನಮ್ಮ ಪಕ್ಷದ ಸಂಪೂರ್ಣ ಬಲವನ್ನು ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಿತ್ರದುರ್ಗದಲ್ಲಿ ಹೇಳಿದ್ದಾರೆ.

ಕೇಂದ್ರೀಯ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಸಲಾಗುತ್ತಿದೆ. ಅದು ಪ್ರಾದೇಶಿಕ ಭಾಷೆಯಲ್ಲಿ ಏಕೆ ಇಲ್ಲ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಪ್ರಶ್ನಿಸಿದ ಕೆಲವು ದಿನಗಳ ನಂತರ, ರಾಹುಲ್​ ಗಾಂಧಿಯಿಂದ ಈ ಎಚ್ಚರಿಕೆ ಬಂದಿದೆ. ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಹುಲ್​ ಗಾಂಧಿ ಮಾತನಾಡಿದರು.

ಬಿಜೆಪಿಗೆ ಕನ್ನಡ ದ್ವಿತೀಯ ಭಾಷೆಯಾಗಿದೆ: ನಿರುದ್ಯೋಗಿ ಯುವಕರು ತಮ್ಮ ಪರೀಕ್ಷೆಗಳನ್ನು ಕನ್ನಡದಲ್ಲಿ ಏಕೆ ಬರೆಯಬಾರದು. ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು. ನೀವು ಜನರು ಮಾತನಾಡಲು ಬಳಸುವ ಭಾಷೆಯ ಮೇಲೆ ಹಿಡಿತ ಸಾಧಿಸುವ ಅಧಿಕಾರವನ್ನು ಹೊಂದಿಲ್ಲ. ಬಿಜೆಪಿ ಮತ್ತು ಆರ್​ಎಸ್​ಎಸ್​ಗೆ ಕನ್ನಡ ದ್ವಿತೀಯ ಭಾಷೆಯಾಗಿದೆ. ಅವರು ಇದನ್ನು ಗೌರವಿಸುತ್ತಿಲ್ಲ. ಆದರೆ ನಮಗೆ ಕನ್ನಡವೇ ಪ್ರಥಮ ಭಾಷೆಯಾಗಿದ್ದು, ಇದಕ್ಕೆ ಪ್ರಾಮುಖ್ಯತೆ ಕೊಡುತ್ತೇವೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕನ್ನಡ ಭಾಷೆಯ ಮೇಲೆ, ಇಲ್ಲಿನ ಜನರ ಮೇಲೆ, ಕರ್ನಾಟಕದ ಇತಿಹಾಸದ ಮೇಲೆ ದಾಳಿ ಮಾಡಬಹುದು ಎಂದು ಭಾವಿಸಿದರೆ, ಅವರು ಕಾಂಗ್ರೆಸ್ ಪಕ್ಷದ ಸಂಪೂರ್ಣ ಬಲವನ್ನು ಎದುರಿಸಬೇಕಾಗುತ್ತದೆ. ಕರ್ನಾಟಕದ ಜನರಿಗೆ ಅವರು ಹೇಗೆ ಬದುಕಬೇಕು ಎಂದು ಯಾರೂ ನಿರ್ದೇಶಿಸಲು ಸಾಧ್ಯವಿಲ್ಲ. ಅವರ ಮಕ್ಕಳು ಯಾವ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕು ಎಂಬುದನ್ನು ಯಾರೂ ಹೇಳಬೇಕಾಗಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: ಪರೀಕ್ಷೆಗಳು ಆಯಾ ರಾಜ್ಯದ ಭಾಷೆಯಲ್ಲೇ ನಡೆಯಲಿ: ರಾಹುಲ್​ ಗಾಂಧಿ

ಕರ್ನಾಟಕದ ಜನರು ಕನ್ನಡ ಮಾತನಾಡಲು ಬಯಸಿದರೆ, ತಮಿಳುನಾಡಿನ ಜನರು ತಮಿಳು ಮಾತನಾಡಲು ಬಯಸಿದರೆ ಮತ್ತು ಕೇರಳದ ಜನರು ಮಲಯಾಳಂ ಮಾತನಾಡಲು ಬಯಸಿದರೆ ಅದನ್ನು ಮಾತನಾಡಲು ಅವರಿಗೆ ಅವಕಾಶ ನೀಡಬೇಕು. ದೇಶದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ದ್ವೇಷ ಹರಡುತ್ತಿವೆ. ಭಾರತವನ್ನು ವಿಭಜಿಸಲು ಮತ್ತು ಈ ದೇಶದಲ್ಲಿ ದ್ವೇಷವನ್ನು ಹರಡಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ನಾವು ಅವಕಾಶ ನೀಡುವುದಿಲ್ಲ. ಈ ದೇಶವನ್ನು ವಿಭಜಿಸುವುದು ಈ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.